ಸಾರಾಂಶ
-ನಿಯಂತ್ರಣಕ್ಕೆ ಸಮರೋಪಾದಿ ಚಟುವಟಿಕೆ । ಲಾರ್ವಾ ಸಮೀಕ್ಷೆ ಕಾರ್ಯಕ್ಕೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಚಾಲನೆ
------ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಆರೋಗ್ಯ ಇಲಾಖೆ ಕಳವಳಕ್ಕೆ ಕಾರಣವಾಗಿದೆ. ನಿಯಂತ್ರಣಕ್ಕೆ ಸಮರೋಪಾದಿ ಚಟುವಟಿಕೆ ಕೈಗೆತ್ತಿಕೊಳ್ಳಲಾಗಿದೆ. ಸೊಳ್ಳೆಗಳ ಉತ್ಪತ್ತಿ, ಸೊಳ್ಳೆ ಕಡಿತದಿಂದ ಆಗುವ ದುಷ್ಪಾರಿಣಾಮ, ಸೊಳ್ಳೆ ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಶಿಕ್ಷಣ ನೀಡುವ ತುರ್ತು ಅಗತ್ಯಗಳತ್ತ ಗಮನ ಹರಿಸಲಾಗುತ್ತಿದೆ.ಜಿಲ್ಲಾ ಕ್ರೀಡಾಂಗಣ ಬಳಿ ಬುದ್ಧ ನಗರದ ಆರೋಗ್ಯ ಕೇಂದ್ರದಲ್ಲಿ ಈಡಿಸ್ ಸೊಳ್ಳೆ ಉತ್ಪತ್ತಿ ತಾಣ ನಾಶ ಮಾಡುವ ದಿನ ಕಾರ್ಯಕ್ರಮದ ಭಾಗವಾಗಿ ನಡೆದ ಜಾಥಾ ಕಾರ್ಯಕ್ರಮ ಹಾಗೂ ವಿಶೇಷ ಲಾರ್ವಾ ಸರ್ವೇ ಕಾರ್ಯಕ್ಕೆ ಹಸಿರು ನಿಶಾನೆಗೆ ಚಾಲನೆ ನೀಡಿ ಮಾತನಾಡಿದರು. ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಕೀಟಜನ್ಯ ರೋಗಗಳಿಗೆ ಕಡಿವಾಣ ಹಾಕಲು ವ್ಯಾಪಕ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಈ ವರ್ಷ ಜಿಲ್ಲೆಯಲ್ಲಿ ಡೆಂಘೀ ಪ್ರಕರಣ ಹೆಚ್ಚಾಗುತ್ತಿವೆ. ರೋಗ ಬಂದ ಮೇಲೆ ಪಶ್ಚಾತ್ತಾಪ ಪಡುವುದಕ್ಕಿಂತ ರೋಗ ಬಾರದೆ ಇರುವ ಹಾಗೆ ನೋಡಿಕೊಳ್ಳುವುದು ಸರ್ವರ ಜವಾಬ್ದಾರಿ. ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿ ಸಿಬ್ಬಂದಿ ವರ್ಗ ಸಾರ್ವಜನಿಕ ವಲಯದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಶುಕ್ರವಾರ ಗುಣಾತ್ಮಕ ಸಮೀಕ್ಷೆ ಮಾಡಿ, ಸೊಳ್ಳೆ ಉತ್ಪತ್ತಿ ತಾಣ ನಾಶಪಡಿಸಿ ರೋಗ ಹರಡದಂತೆ ಶ್ರಮಿಸಬೇಕು ಎಂದರು.ಪ್ರತಿ ಶುಕ್ರವಾರದ ಜತೆಗೆ ಮಂಗಳವಾರವೂ ಲಾರ್ವಾ ಸರ್ವೇ ಕಾರ್ಯ ಮಾಡಬೇಕು. ಡೆಂಗ್ಯೂ ನಿಯಂತ್ರಣಕ್ಕೆ ತಂಡವಾಗಿ ಕಾರ್ಯನಿರ್ವಹಿಸೋಣ ಎಂದು ಹೇಳಿದರು.
ಬುದ್ಧ ನಗರದ ಪ್ರದೇಶದ ಕೆಲವು ಮನೆಗಳಿಗೆ ಖುದ್ದು ಭೇಟಿ ನೀಡಿದ ಜಿಪಂ ಸಿಇಒ ಅಧಿಕಾರಿ ಎಸ್.ಜೆ.ಸೋಮಶೇಖರ್ ಸೊಳ್ಳೆ ಉತ್ಪತ್ತಿ ತಾಣಗಳ ಪರಿಶೀಲನೆ ಮಾಡಿದರು.ಇದೇ ವೇಳೆ ಕೆಲವು ಮನೆಗಳಲ್ಲಿ ಲಾರ್ವಾಗಳು ಕಂಡು ಬಂದಿದ್ದು, ನೀರು ಸಂಗ್ರಹಿಸುವಾಗ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು.
ಗುಣಮಟ್ಟದ ಲಾರ್ವಾ ಸಮೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣು ಪ್ರಸಾದ್ ಮಾತನಾಡಿ, ಈ ವರ್ಷ 2024ರ ಜನವರಿ ಮಾಹೆಯಿಂದ ಇಲ್ಲಿಯವರೆಗೆ 265 ಡೆಂಘೀ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದು, ಕಳವಳಕಾರಿ ಸಂಗತಿ. ಪ್ರತಿ ಶುಕ್ರವಾರ ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ಸಾರ್ವಜನಿಕ ವಲಯದಲ್ಲಿ ಆರೋಗ್ಯ ಶಿಕ್ಷಣ ನೀಡುವುದರ ಮುಖಾಂತರ ಮನೆ ಭೇಟಿ ಮಾಡಿ ಕೀಟಜನ್ಯ ರೋಗಗಳು ಹೆಚ್ಚಾಗದಂತೆ ನಿಗಾವಹಿಸುತ್ತಿದ್ದಾರೆ.
ಗುಣಾತ್ಮಕ ಲಾರ್ವಾ ಸಮೀಕ್ಷೆಯಲ್ಲಿ ತೊಡಗಿಸಿಕೊಂಡು ಸರ್ಕಾರದ ಮಾರ್ಗಸೂಚಿಯಂತೆ ಕೆಲಸ ಮಾಡುತ್ತಿದ್ದಾರೆ. ಕೀಟಜನ್ಯ ರೋಗಗಳಿಂದ ಸಾವು ನೋವು ಸಂಭವಿಸದಂತೆ ಮುಂಜಾಗ್ರತೆ ವಹಿಸಿ ಡೆಂಘೀ ಪ್ರಕರಣ ಹೆಚ್ಚಾಗದಂತೆ ಕಡಿವಾಣ ಹಾಕಬೇಕು ಎಂದರು.ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶೀ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್, ಜಿಲ್ಲಾ
ಆರ್‌ಸಿಎಚ್ ಅಧಿಕಾರಿ ಡಾ. ಅಭಿನವ್, ಜಿಲ್ಲಾಧ್ಯಕ್ಷ ರೋಗ ನಿಯಂತ್ರಣಾಧಿಕಾರಿ ಡಾ. ಸುಧಾ, ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಖಾ, ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ.ಗಿರೀಶ್, ತಾಪಂ ಇಒ ಹನುಮಂತಪ್ಪ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ ಆರ್ ಗೌರಮ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ. ಮೂಗಪ್ಪ. ಬಿ. ಜಾನಕಿ. ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಸುರೇಶ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುಮೂರ್ತಿ. ಮಲ್ಲಿಕಾರ್ಜುನ್. ಶ್ರೀಧರ್. ನಾಗರಾಜ್ ಆರೋಗ್ಯ ನಿರೀಕ್ಷಣಾಧಿಕಾರಿ ತಂಡದ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಇದ್ದರು.---------------------ಪೋಟೊ: ಫೋಟೋ ಫೈಲ್ ನೇಮ್- 5 ಸಿಟಿಡಿ6
ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನ ಕಾರ್ಯಕ್ರಮದ ಭಾಗವಾಗಿ ನಡೆದ ಜಾಥಾ ಕಾರ್ಯಕ್ರಮ ಹಾಗೂ ವಿಶೇಷ ಲಾರ್ವಾ ಸರ್ವೇ ಕಾರ್ಯಕ್ಕೆ ಚಿತ್ರದುರ್ಗದಲ್ಲಿ ಜಿಪಂ ಸಿಇಒ ಸೋಮಶೇಖರ್ ಚಾಲನೆ ನೀಡಿದರು.----