ಸಾರಾಂಶ
ಕರ್ನಾಟಕ ವಿದ್ಯಾವರ್ಧಕ ಸಂಘ ಡಾ. ಸರೋಜಿನಿ ಶಿಂತ್ರಿ ದತ್ತಿ ಅಂಗವಾಗಿ ಭಜನಾ ಪದಗಳು ಹಾಗೂ ಜಾನಪದ ಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಧಾರವಾಡ
ಜನಪದ ಸಾಹಿತ್ಯವು ಸಾಹಿತ್ಯದ ತಾಯಿ ಬೇರು. ಇದು ನಮ್ಮ ಪಿತ್ರಾರ್ಜಿತರ ಬಹು ದೊಡ್ಡ ಆಸ್ತಿ. ಜನಪದ ಸಾಹಿತ್ಯಕ್ಕೆ ನಮ್ಮ ಬದುಕನ್ನು ತಿದ್ದಿ ಸಂಸ್ಕಾರಗೊಳಿಸುವ ಶಕ್ತಿ ಇದೆ. ಇದೊಂದು ಮೋಹಕ ಸಾಹಿತ್ಯವಾಗಿದೆ ಎಂದು ಕ.ವಿ.ವ. ಸಂಘದ ಕಾರ‍್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘ ಡಾ. ಸರೋಜಿನಿ ಶಿಂತ್ರಿ ದತ್ತಿ ಅಂಗವಾಗಿ ಆಯೋಜಿಸಿದ್ದ ಭಜನಾ ಪದಗಳು ಹಾಗೂ ಜಾನಪದ ಗೀತೆಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾನಪದ ಸಾಹಿತ್ಯ ಸಾಗರದಷ್ಟು ಆಳ, ಆಕಾಶದಷ್ಟು ವಿಶಾಲವಾಗಿದ್ದು, ಇದು ನಮ್ಮ ಜನಪದರ ಜೀವನಾನುಭವದ ರಸ ಘಟ್ಟಿ. ನಮ್ಮ ಜನಪದರು ಅನಕ್ಷರಸ್ಥರಾಗಿದ್ದರೂ ಕಾವ್ಯಕಟ್ಟಿ ಭಾವನಾತ್ಮಕವಾಗಿ ಹಾಡುವ ಕಲೆ ಕರಗತ ಮಾಡಿಕೊಂಡಿದ್ದರು. ಜನಪದರು ಜೀವನದಲ್ಲಿ ಪಟ್ಟ ಪಾಡುಗಳೇ ಹಾಡುಗಳಾಗಿ ರೂಪಗೊಂಡಿವೆ.ಜನಪದ ಸಾಹಿತ್ಯದಲ್ಲಿ ಪುರುಷರಿಗಿಂತ ಮಹಿಳೆಯರದೇ ಸಿಂಹಪಾಲು. ಜನಪದರು ಪುರಾಣ, ಪುಣ್ಯಕಥೆಗಳ ಶ್ರವಣದಿಂದ ಅಪಾರವಾದ ಲೋಕಾನುಭವ ಪಡೆದು ಕಾವ್ಯಗಳನ್ನು ಪಡಿಯಚ್ಚಿಗಿಳಿಸಿದ್ದಾರೆ. ಹೀಗಾಗಿ ಹಿರಿಯರು ನಮಗಾಗಿ ಬಿಟ್ಟು ಹೋದ ಈ ಸಾಂಸ್ಕೃತಿಕ ಬಳುವಳಿಯನ್ನು ನಾವು ಉಳಿಸಿ, ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.
ಅತಿಥಿಯಾಗಿದ್ದ ವೈದ್ಯಾಧಿಕಾರಿ ಡಾ. ರಾಜಶೇಖರ ಬಶೆಟ್ಟಿ ಮಾತನಾಡಿ, ಡಾ. ಸರೋಜಿನಿ ಶಿಂತ್ರಿಯವರು ಸ್ತ್ರೀ ಸಂವೇದನಾ ಬರಹಗಾರರು ಮತ್ತು ಹೋರಾಟಗಾರಾಗಿದ್ದರು. ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ನೀಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಅವರು ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿದ್ದರೂ ಜಾನಪದ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಿದವರು. ಶಿಸ್ತು ಸಮಯ ಪ್ರಜ್ಞೆಗೆ ಇನ್ನೊಂದು ಹೆಸರೇ ಡಾ. ಸರೋಜಿನಿ ಶಿಂತ್ರಿ. ಅವರ ಸಾಧನೆ ಅನುಪಮ ಎಂದರು.ಬಸಪ್ಪ ಬಿಜಾಪುರ ಹಾಗೂ ಬಸವರಾಜ ಬೆಳವಗಿ ಇದ್ದರು. ಸಹಕಾರ್ಯದರ್ಶಿ ಶಂಕರ ಕುಂಬಿ ಸ್ವಾಗತಿಸಿದರು. ಕೋಶಾಧ್ಯಕ್ಷ ಸತೀಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಡಾ. ಧನವಂತ ಹಾಜವಗೋಳ ನಿರೂಪಿಸಿಸಿದರು. ಶಿವಾನಂದ ಭಾವಿಕಟ್ಟಿ, ಎಸ್.ಜಿ. ಪಾಟೀಲ, ಪ್ರಮೀಳಾ ಜಕ್ಕಣ್ಣವರ, ಮಧುಮತಿ ಸಣಕಲ್ಲ. ಮಹಾಂತೇಶ ನರೇಗಲ್ಲ, ಎಂ.ಬಿ. ಹೆಗ್ಗೇರಿ ವಿ.ಬಿ. ಸಂತೋಜಿ ಸೇರಿದಂತೆ ಹಲವರಿದ್ದರು.