ಸಾರಾಂಶ
ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 14,57,594 ಮತದಾರರು: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ
ಕನ್ನಡಪ್ರಭ ವಾರ್ತೆ ದಾವಣಗೆರೆಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಿಸಿ, ಜ.22ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, ಜಿಲ್ಲೆಯಲ್ಲಿ 14,58,594 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಮತದಾರರ ಪಟ್ಟಿ ಪ್ರಚುರಪಡಿಸಿ, ರಾಜಕೀಯ ಪಕ್ಷಗಳ ಮುಖಂಡರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸದಾಗಿ ಸೇರ್ಪಡೆಯಾದ 29081 ಯುವ ಮತದಾರರು ಸೇರಿದಂತೆ 14,57,594 ಜನ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದರು.ಅ.27ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ 14,53,818 ಮತದಾರರಿದ್ದರು. ಆಕ್ಷೇಪಣೆ ಸಲ್ಲಿಸಲು ಜ.12ರವರೆಗೆ ಕಾಲಾವಕಾಶ ಕಲ್ಪಿಸಲಾಗಿತ್ತು. ಹೊಸ ನೋಂದಣಿ, ಬೇರೆ ಕ್ಷೇತ್ರಕ್ಕೆ ವರ್ಗಾವಣೆ, ಮರಣ ಹೊಂದಿದವರ ಪಟ್ಟಿಯಿಂದ ರದ್ದುಪಡಿಸಿದ್ದು, ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 7,27,246 ಪುರುಷ, 7,31,230 ಮಹಿಳೆಯರು, 118 ಇತರೆ ಸೇರಿ 14,58,594 ಮತದಾರರಿದ್ದಾರೆ ಎಂದು ಹೇಳಿದರು.
ಮತದಾರರ ಪಟ್ಟಿಯನ್ನು ಎಲ್ಲಾ ತಹಸೀಲ್ದಾರರ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ ಹಾಗೂ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಪರಿಷ್ಕರಣೆ ವೇಳೆ ಒಟ್ಟು 18714 ಮತದಾರರನ್ನು ದಾಖಲೆಗಳ ಪರಿಶೀಲನೆ ಮಾಡಿ, ಪಟ್ಟಿಯಿಂದ ತೆಗೆಯಲಾಗಿದೆ. ಇದರಲ್ಲಿ ಶೇ.90 ಜನ ಮರಣ ಹೊಂದಿದವರು ಹಾಗೂ ಎರಡೂ ಕಡೆ ಪಟ್ಟಿಯಲ್ಲಿ ಸೇರ್ಪಡೆಯಾದವುಗಳಾಗಿರುತ್ತವೆ ಎಂದು ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಜಗಳೂರಿನಲ್ಲಿ 4239, ಹರಿಹರ 4646, ದಾವಣಗೆರೆ ಉತ್ತರ 4032, ದಾವಣಗೆರೆ ದಕ್ಷಿಣ 3581, ಮಾಯಕೊಂಡ 4176, ಚನ್ನಗಿರಿ 3884, ಹೊನ್ನಾಳಿಯಲ್ಲಿ 4523 ಯುವ ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 1693 ಮತಗಟ್ಟೆಗಳಿದ್ದು, ಜಗಳೂರು 263 ಮತಗಟ್ಟೆ, ಹರಿಹರ 228, ದಾವಣಗೆರೆ ಉತ್ತರ 245, ದಾವಣಗೆರೆ ದಕ್ಷಿಣ 217, ಮಾಯಕೊಂಡ 240, ಚನ್ನಗಿರಿ 255, ಹೊನ್ನಾಳಿ 245 ಮತಗಟ್ಟೆಗಳಿವೆ. 18 ವರ್ಷ ತುಂಬುವವರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ಮತದಾರರು ಆನ್‍ಲೈನ್ ಮೂಲಕ ನೋಂದಾಯಿಸಬಹುದು.
2024ರ ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ. ಆದರೆ, ಚುನಾವಣೆ ವೇಳಾಪಟ್ಟಿ ಒಳಗೆ 18 ವರ್ಷ ತುಂಬುವವರು ಮಾತ್ರ ಮತದಾನ ಮಾಡಲು ಅರ್ಹರಾಗುತ್ತಾರೆ. ಮತದಾರರು ಯಾವುದೇ ಸಹಾಯ ಬೇಕಿದ್ದಲ್ಲಿ ಜಿಲ್ಲಾ ಸಂಪರ್ಕ ಸಂಖ್ಯೆ 1950 ಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ ಹೇಳಿದರು.ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ, ಪಾಲಿಕೆ ಆಯುಕ್ತೆ ರೇಣುಕಾ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿದ್ದರು.