ನಗರದಲ್ಲಿ 2ನೇ ವಿಮಾನ ನಿಲ್ದಾಣ: ವರದಿಗೆ ಸೂಚನೆ

| Published : Jun 21 2024, 01:01 AM IST / Updated: Jun 21 2024, 09:38 AM IST

ಸಾರಾಂಶ

ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣದ ಅವಶ್ಯಕತೆಗೆ ಸಂಬಂಧಿಸಿದಂತೆ ಮೂಲಸೌಕಾರ್ಯ ಸಚಿವ ಎಂ,ಬಿ ಪಾಟೀಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಬೆಂಗಳೂರು :  ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಹಾಗೂ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣದ ಅವಶ್ಯಕತೆಯಿದ್ದು, ಅದಕ್ಕೆ ಸಂಬಂಧಿಸಿದಂತೆ ಸಾಧ್ಯಾಸಾಧ್ಯತೆ ವರದಿ ನೀಡುವಂತೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಎಂ.ಬಿ. ಪಾಟೀಲ್‌, ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎ)ವು ಮೂರನೇ ಅತಿದಟ್ಟಣೆಯ ವಿಮಾನ ನಿಲ್ದಾಣವಾಗಿದೆ.

2023-24ನೇ ಸಾಲಿನಲ್ಲಿ 3.75 ಕೋಟಿ ಪ್ರಯಾಣಿಕರು ಕೆಐಎ ಮೂಲಕ ಪ್ರಯಾಣಿಸಿದ್ದಾರೆ. ಅಲ್ಲದೆ, 4 ಲಕ್ಷ ಟನ್‌ಗೂ ಹೆಚ್ಚಿನ ಸರಕು ಸಾಗಣೆ ಮಾಡಲಾಗಿದೆ. ಈ ಒತ್ತಡ ವರ್ಷದಿಂದ ವರ್ಷಕ್ಕೆ ಹೆಚ್ಚಲಿದ್ದು, ಅದನ್ನು ಗಮನದಲ್ಲಿಟ್ಟುಗೊಂಡ ಬೆಂಗಳೂರಿನ ಎರಡನೇ ವಿಮಾನನಿಲ್ದಾಣದ ಅಗತ್ಯವಿದೆ ಎಂದರು.

ಕೆಐಎ ನಿರ್ಮಿಸುವಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು ಮುಂದಿನ 25 ವರ್ಷಗಳವರೆಗೆ (2033ರವರೆಗೆ) 150 ಕಿಮೀ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವುದಿಲ್ಲ ಎಂದು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಷರತ್ತು ಮುಗಿಯಲು ಇನ್ನೂ ಒಂಬತ್ತು ವರ್ಷಗಳಿದ್ದು, ಈಗಿನಿಂದಲೇ ಎರಡನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕಿದೆ ಎಂದು ಹೇಳಿದರು.

ಬೆಂಗಳೂರಿನ ಜನಸಂಖ್ಯೆ ಈಗಾಗಲೇ ಒಂದು ಕೋಟಿ ದಾಟಿದ್ದು, ಹಲವು ಜಾಗತಿಕ ಮಟ್ಟದ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸಸುತ್ತಿವೆ. ರಾಜ್ಯವಷ್ಟೇ ಅಲ್ಲದೆ ಆಂಧ್ರಪ್ರದೇಶದ ಕೆಲ ಜಿಲ್ಲೆಗಳ ಜನರೂ ಕೆಐಎ ಮೇಲೆ ಅವಲಂಬಿತರಾಗಿದ್ದಾರೆ. 2033ರ ವೇಳೆಗೆ ಕೆಐಎ ಪ್ರಯಾಣಿಕರ ನಿರ್ವಹಣೆಯ ಒತ್ತಡ ಸಾಕಷ್ಟು ಹೆಚ್ಚಲಿದೆ. 2040ರ ವೇಳೆ ಸರಕು ಸಾಗಣೆ ಪ್ರಮಾಣದ ನಿರ್ವಹಣೆ ಕಷ್ಟವಾಗಲಿದೆ. ಭೂ ಸ್ವಾಧೀನ, ಪರಿಹಾರ ಹಂಚಿಕೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ದೀರ್ಘ ಸಮಯ ಬೇಕಾಗಲಿದೆ. ಆದ್ದರಿಂದ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಎರಡನೇ ವಿಮಾನನಿಲ್ದಾಣ ನಿರ್ಮಾಣದೊಂದಿಗೆ ಬೆಂಗಳೂರಿನಾಚೆಗೂ ಕೈಗಾರಿಕಾ ಬೆಳವಣಿಗೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್. ಮಂಜುಳಾ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಸಿ.ಸತೀಶ, ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ.ಪ್ರಕಾಶ ಇತರರಿದ್ದರು.