ಸಾರಾಂಶ
ಗಜೇಂದ್ರಗಡ:
ಪಟ್ಟಣದ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ೨೦೨೩-೨೪ ನೇ ಸಾಲಿನ ಕರ್ನಾಟಕ ವಿಶ್ವ ವಿದ್ಯಾಲಯ ಪುರುಷರ ೨ನೇ ವಲಯ ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ಮುಂಡರಗಿಯ ಕೆ.ಆರ್. ಬೆಲ್ಲದ್ ಕಲಾ ವಾಣಿಜ್ಯ ಮಹಾವಿದ್ಯಾಲಯ ವಿನ್ನರ್ ತಂಡವಾಗಿ ಹೊರ ಹೊಮ್ಮಿತು.ಸ್ಥಳೀಯ ರೋಣ ರಸ್ತೆಯ ಬಿಎಸ್‌ಎಸ್ ಸರ್ಕಾರಿ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಕವಿವಿ ಪುರುಷರ ೨ನೇ ವಲಯ ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಗೆ ಅದ್ಧೂರಿಯಾಗಿ ಚಾಲನೆ ಜತೆಗೆ ೧೫ ಕಾಲೇಜುಗಳು ಭಾಗವಹಿಸಿದ್ದ ಪಂದ್ಯಾವಳಿಯು ವಿದ್ಯಾರ್ಥಿಗಳು ಹಾಗೂ ಕ್ರೀಡಾಭಿಮಾನಿಗಳ ಮನಸ್ಸನ್ನು ಗೆದ್ದಿತು. ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ಮುಂಡರಗಿಯ ಕೆ.ಆರ್. ಬೆಲ್ಲದ್ ಕಾಲೇಜು ೨೫-೧೬ ಅಂಕಗಳೊಂದಿಗೆ ಗೆಲುವು ಸಾಧಿಸಿತು. ಹುಬ್ಬಳ್ಳಿಯ ಗ್ಲೋಬಲ್ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ತಂಡವು ಕೆ.ಆರ್. ಬೆಲ್ಲದ್ ಕಲಾ ಕಾಲೇಜು ವಿರುದ್ಧ ಫೈನಲ್ ಪಂದ್ಯದಲ್ಲಿ ಸೋಲೊಪ್ಪಿಕೊಂಡು ರನ್ನರ್ ಆಪ್ ತಂಡವಾದರೆ ಪಟ್ಟಣದ ಎಸ್.ಎಂ. ಭೂಮರಡ್ಡಿ ಪದವಿ ಮಹಾವಿದ್ಯಾಲಯ ತೃತೀಯ ಸ್ಥಾನ ಅಲಂಕರಿಸಿತು. ಮಹಮ್ಮದ್ ರಸುಲ್ ಸವಣೂರು ಉತ್ತಮ ಪಾಸರ್, ಯಲ್ಲಪ್ಪಗೌಡ ಎಸ್, ಉತ್ತಮ ಅಟ್ಯಾಕರ್ ಪ್ರಶಸ್ತಿ ಪಡೆದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಶಿವರಾಜ ಘೋರ್ಪಡೆ, ಶ್ರೀಧರ್ ಬಿದರಳ್ಳಿ, ಪಿ.ಎಂ. ದಿವಾಣದ, ಎಫ್.ಎಸ್.ಕರೀದುರಗನ್ನವರ ಹಾಗೂ ಪ್ರಾಚಾರ್ಯ ಮಹೇಂದ್ರ ಜಿ, ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಅಭಿನಂದಿಸಿದರು.ಈ ವೇಳೆ ಕ್ರೀಡಾ ಸಂಯೋಜನಾಧಿಕಾರಿ ಹಿತೀಶ್ ಬಿ, ಕ್ರೀಡಾ ಸಂಚಾಲಕ ಡಾ.ಎಂ. ವೈ. ಜೆಟ್ಟೆಣ್ಣವರ, ದೈಹಿಕ ನಿರ್ದೇಶಕ ಲಕ್ಷ್ಮಣ್ ಹುಲ್ಲೂರ ಸೇರಿ ವಿವಿಧ ಕಾಲೇಜುಗಳ ಕ್ರೀಡಾಳುಗಳು ಹಾಗೂ ದೈಹಿಕ ನಿರ್ದೇಶಕರು ಮತ್ತು ಸಿಬ್ಬಂದಿ ಇದ್ದರು.