ಆನ್‌ಲೈನ್ ವಂಚಕರ ಜಾಲದಿಂದ ವ್ಯಕ್ತಿಗೆ ₹3.57 ಲಕ್ಷ ವಂಚನೆ

| Published : Jul 01 2024, 01:56 AM IST

ಸಾರಾಂಶ

ಕೊರಿಯರ್ ಮೂಲಕ ಮಾದಕ ವಸ್ತು, ಪಾಸ್ ಪೋರ್ಟ್‌ಗಳನ್ನು ಆಧಾರ್ ಕಾರ್ಡ್‌ ಪುರಾವೆ ಮೂಲಕ ಮುಂಬೈನಿಂದ ತೈವಾನ್‌ ದೇಶಕ್ಕೆ ಕಳಿಸಿದ್ದೀರಾ ಎಂಬುದಾಗಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ, ತಾವು ಕೊರಿಯರ್ ನ ಉದ್ಯೋಗಿ ಎಂದು ಹೇಳಿಕೊಂಡು, ಪೊಲೀಸರಿಗೆ ಆನ್‌ಲೈನ್ ಮೂಲಕ ದೂರು ನೀಡಬಹುದು ಎಂದು ನಂಬಿಸಿ, ₹3,57,780 ವರ್ಗಾವಣೆ ಮಾಡಿಸಿಕೊಂಡ ಘಟನೆ ವರದಿಯಾಗಿದೆ.

- ಕೊರಿಯರ್‌ನಲ್ಲಿ ಮಾದಕ ವಸ್ತು ಕಳಿಸಿದ್ದೀರೆಂದು ಬೆದರಿಕೆ: ದೂರು

- ದಾವಣಗೆರೆ ವ್ಯಕ್ತಿಗೆ ಮೊ: 78087-75255 ದಿಂದ ಅಪರಿಚಿತ ವ್ಯಕ್ತಿ ಕರೆ

- ಮನಿ ಲ್ಯಾಂಡರಿಂಗ್‌ನಲ್ಲಿ ನಿಮ್ಮ ಖಾತೆ ಬಳಕೆಯಾಗಿದೆ ಎಂದು ದಾವಣಗೆರೆ ವ್ಯಕ್ತಿಗೆ ಸುಳ್ಳು ಮಾಹಿತಿ

- ಆನ್ ಲೈನ್‌ ಸೈಬರ್ ಪೋರ್ಟಲ್‌ಗೆ ದೂರು ದಾಖಲಿಸಿ, ಸ್ವೀಕೃತಿ ಪಡೆದಿರುವ ದಾವಣಗೆರೆ ವ್ಯಕ್ತಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕೊರಿಯರ್ ಮೂಲಕ ಮಾದಕ ವಸ್ತು, ಪಾಸ್ ಪೋರ್ಟ್‌ಗಳನ್ನು ಆಧಾರ್ ಕಾರ್ಡ್‌ ಪುರಾವೆ ಮೂಲಕ ಮುಂಬೈನಿಂದ ತೈವಾನ್‌ ದೇಶಕ್ಕೆ ಕಳಿಸಿದ್ದೀರಾ ಎಂಬುದಾಗಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ, ತಾವು ಕೊರಿಯರ್ ನ ಉದ್ಯೋಗಿ ಎಂದು ಹೇಳಿಕೊಂಡು, ಪೊಲೀಸರಿಗೆ ಆನ್‌ಲೈನ್ ಮೂಲಕ ದೂರು ನೀಡಬಹುದು ಎಂದು ನಂಬಿಸಿ, ₹3,57,780 ವರ್ಗಾವಣೆ ಮಾಡಿಸಿಕೊಂಡ ಘಟನೆ ವರದಿಯಾಗಿದೆ.

ದಾವಣಗೆರೆ ಮೂಲದ ದುರ್ಗೇಶ್‌ (ಹೆಸರು ಬದಲಿಸಲಾಗಿದೆ) ತಾವು ಕೆಲಸ ಮಾಡುವ ಕಂಪನಿಯವರು ಗುಜರಾತ್‌ನ ಅಹಮ್ಮದಾಬಾದ್‌ನ ಐಸಿಐಸಿಐ ಬ್ಯಾಂಕ್‌ನಲ್ಲಿ ಖಾತೆ ಮಾಡಿಸಿದ್ದರು. ಅಲ್ಲಿ ಮೊಬೈಲ್ ನಂಬರ್‌ ಲಿಂಕ್ ಸಹ ಮಾಡಲಾಗಿತ್ತು. ಜೂ.13ರಂದು ಬೆಳಗ್ಗೆ 8.45 ಗಂಟೆಗೆ ದಾವಣಗೆರೆ ವ್ಯಕ್ತಿ ದುರ್ಗೇಶ್‌ಗೆ ಮೊಬೈಲ್‌ ನಂಬರ್‌ 78087-75255 ದಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ.

ಅಪರಿಚಿತ ವ್ಯಕ್ತಿಯು ತಾನು ಫೆಡೆಕ್ಸ್ ಕೊರಿಯರ್ ಉದ್ಯೋಗಿ. ನೀವು ಕೊರಿಯರ್ ಮೂಲಕ ಮಾದಕ ವಸ್ತುವನ್ನು ಪಾಸ್‌ ಪೋರ್ಟ್‌, ಆಧಾರ್‌ ಕಾರ್ಡ್ ಪುರಾವೆ ಮೂಲಕ ಮುಂಬೈನಿಂದ ತೈವಾನ್‌ಗೆ ಕಳಿಸುತ್ತಿದ್ದೀರಾ ಎಂಬುದಾಗಿ ಪ್ರಶ್ನೆ ಮಾಡಿದ್ದಾರೆ. ಆಗಂತುಕನ ಮಾತಿನಿಂದ ಅವಕ್ಕಾದ ಪಿರ್ಯಾದಿ ತಾವು ಯಾವುದೇ ಕೊರಿಯರ್ ಮೂಲಕ ಕಳಿಸಿಲ್ಲವೆಂದು ಹೇಳಿದ್ದಾರೆ. ಆಗ ಅಪರಿಚಿತನು ಇದು ಮಾದಕ ವಸ್ತು ಹಾಗೂ ಟ್ರಾವೆಲಿಂಗ್ ಪಾಸ್‌ ಪೋರ್ಟ್‌ಗೆ ಸಂಬಂಧಿಸಿದ್ದು, ಮುಂಬೈ ಪೊಲೀಸರಿಗೆ ಸಂಪರ್ಕ ಮಾಡುತ್ತೇವೆಂದು ಅಪರಿಚಿತನು ಪೊಲೀಸರೆಂದು ಹೇಳಿಕೊಂಡವರಿಗೆ ಕರೆ ಮಾಡಿದ್ದಾನೆ. ಆಗ ಕರೆಯಲ್ಲಿ ಆಧಾರ್‌ ಕಾರ್ಡ್ ನಂಬರ್ ಪಡೆದು, ನೀವು ಮುಂಬೈಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ.

ಆಗ ಪಿರ್ಯಾದಿ ದುರ್ಗೇಶ್‌ (ಹೆಸರು ಬದಲಿಸಲಾಗಿದೆ) ತಮಗೆ ಅಲ್ಲಿಗೆ ಬರಲು ಆಗುವುದಿಲ್ಲವೆಂದು ಹೇಳಿದ್ದಾರೆ. ಅದಕ್ಕೆ ನೀವು ಆನ್ ಲೈನ್ ಮೂಲಕ ದೂರು ನೀಡಬಹುದೆಂದು ವಂಚಕರು ನಂಬಿಸಿದ್ದಾರೆ. ಸ್ಕೈಪ್ ಐಟಿ ನೀಡಿ, ಅದನ್ನು ಪಿರ್ಯಾದಿ ಕರೆಯನ್ನು ಸಂಪರ್ಕ ಮಾಡಿ, ಪಿರ್ಯಾದಿಯಿಂದ ಆನ್ ಲೈನ್ ಸ್ಟೇಟ್‌ಮೆಂಟ್ ಪಡೆಯುವುದಾಗಿ ಹೇಳಿ, ನಿಮ್ಮ ಆಧಾರ್ ಕಾರ್ಡ್‌ನಿಂದ ಮುಂಬೈ ಆಕ್ಸಿಕ್ ಬ್ಯಾಂಕ್ ಖಾತೆ ತೆರೆಯಲಾಗಿದೆ. ಈ ಖಾತೆಯ ಮೂಲಕ ಮಾದಕ ವಸ್ತುಗಳನ್ನು ಮಾರಾಟ ಮಾಡಿದ ಹಣ ವರ್ಗಾವಣೆಯಾಗಿದೆ. ಮನಿ ಲ್ಯಾಂಡರಿಂಗ್‌ನಲ್ಲಿ ನಿಮ್ಮ ಖಾತೆ ಬಳಕೆಯಾಗಿದೆ ಎಂದು, ನಿಮ್ಮ ಖಾತೆಯ ಹಣವನ್ನು ಆರ್‌ಬಿಐ ಏಜೆಂಟ್ ಖಾತೆಗೆ ವರ್ಗಾವಣೆ ಮಾಡಿ, ಇದಕ್ಕೆ ಸಂಬಂಧಿಸಿದಂತೆ ವೆರಿಫಿಕೇಷನ್ ಮಾಡಿದ ನಂತರ ನಿಮ್ಮ ಹಣ ನಿಮಗೆ ವಾಪಸ್ ಮಾಡುವುದಾಗಿ ನಂಬಿಕೆ ಹುಟ್ಟಿಸಿದ್ದಾರೆ. ಪಿರ್ಯಾದಿಯು ಪೇಚಿಗೆ ಸಿಲುಕಿದ್ದು, ₹3,57,780 ಅನ್ನು ವಂಚಕರು ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಬಳಿಕ ಹಣ ಕಡಿತವಾದ ನಂತರ ಪಿರ್ಯಾದಿ ದುರ್ಗೇಶ್‌ ತಾವು ಖಾತೆಗೆ ತಾವು ಹಣ ಹಾಕಲಿಲ್ಲ ಎಂದು ಹೇಳಿದ್ದಾರೆ. ಆಗ ಆನ್ ಲೈನ್ ವಂಚಕರಿಂದ ತನಗೆ ದೋಖಾ ಆಗಿದೆ ಎಂಬುದು ಪಿರ್ಯಾದಿಗೆ ಸ್ಪಷ್ಟವಾಗಿದೆ. ತಕ್ಷಣ‍ವೇ ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಕಂಪ್ಲೇಂಟ್ ಟೋಲ್ ಫ್ರೀ ನಂಬರ್‌-1930ಗೆ ಲಾಕ್ ಮಾಡಿ, ಆನ್ ಲೈನ್‌ ಸೈಬರ್ ಪೋರ್ಟಲ್‌ಗೆ ದೂರು ದಾಖಲಿಸಿ, ಸ್ವೀಕೃತಿ ಪಡೆದಿದ್ದಾರೆ.

ಅಪರಿಚಿತ ವ್ಯಕ್ತಿಯು ಮೊಬೈಲ್ ನಂ. 78087- 75255 ಈ ಸಂಖ್ಯೆಯಿಂದ ತಮಗೆ ಕರೆ ಮಾಡಿ, ₹3,57,780 ಗಳನ್ನು ಖಾತೆಗೆ ಆನ್ ಲೈನ್ ಮೂಲಕ ವಂಚಿಸಿರುವ ಬಗ್ಗೆ ವ್ಯಕ್ತಿಯು ದೂರು ನೀಡಿದ್ದಾರೆ. ಸಿಐಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

- - -

ಬಾಕ್ಸ್

* ಸಾರ್ವಜನಿಕರಿಗೆ ಪೊಲೀಸ್‌ ಇಲಾಖೆ ಎಚ್ಚರಿಕೆ

ಸೈಬರ್‌ ವಂಚಕರು, ಆನ್ ಲೈನ್‌ ವಂಚಕರು ನಾನಾ ರೀತಿಯಲ್ಲಿ ಜನರಿಗೆ ವಂಚಿಸುತ್ತಿದ್ದಾರೆ. ಕೊರಿಯರ್ ಮೂಲಕ ಮಾದಕ ವಸ್ತು ಕಳಿಸುತ್ತಿದ್ದೀರಾ ಎಂಬುದಾಗಿ ಬೆದರಿಸಿ, ವಂಚಿಸಿರುವುದು ಅಂತಹ ವಂಚನೆ ಪ್ರಕರಣಗಳಲ್ಲಿ ಒಂದಾಗಿದೆ. ಅನಾಮಧೇಯ ಕರೆಗಳಿಗೆ ಸಾರ್ವಜನಿಕರು ಸ್ಪಂದಿಸಬಾರದು. ಸದಾ ಜಾಗೃತರಾಗಿರಬೇಕು. ಇಂತಹ ಕರೆಗಳು ಬಂದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕು

- ಉಮಾ ಪ್ರಶಾಂತ, ಜಿಲ್ಲಾ ಪೊಲೀಸ್ ಅಧೀಕ್ಷಕಿ

- - - (-ಸಾಂದರ್ಭಿಕ ಚಿತ್ರ)