ಸಾರಾಂಶ
ಹುಬ್ಬಳ್ಳಿ : ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿಯೇ ಉಳಿಯುವುದಿಲ್ಲ ಎಂದು ಅಹಿಂದ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಣಿ ಹೇಳಿದರು.
ಭಾನುವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಯಾವಾಗಲೂ ಸಿದ್ದರಾಮಯ್ಯ ಅವರ ಬೆನ್ನೆಲುಬಾಗಿ ನಿಲ್ಲುತ್ತೇವೆ. ಕಳೆದ 2-3 ದಿನಗಳ ಹಿಂದೆ ಶ್ರೀಗಳೊಬ್ಬರು ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆಯಿಂದ ಧಾರ್ಮಿಕ ಧಕ್ಕೆಯಾಗಲಿದೆ. ಸ್ವಾಮೀಜಿಗಳಾದವರು ಎಲ್ಲ ಸಮಾಜಕ್ಕೂ ಮೀಸಲಾದವರು. ಈ ರೀತಿ ನಮ್ಮ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದರೆ ಧಾರ್ಮಿಕ ಧಕ್ಕೆಯಾಗಲಿದೆ ಎಂಬುದನ್ನು ಅರಿತುಕೊಳ್ಳಲಿ. ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿಯೇ ಮುಂದುವರಿಯಬೇಕು. ಬದಲಾವಣೆ ಮಾಡಿದ್ದೇ ಆದಲ್ಲಿ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಹೋರಾಟ ಹಮ್ಮಿಕೊಳ್ಳುತ್ತೇವೆ. ಸ್ವಾಮೀಜಿಗಳು ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಲಿ. ಇದು ಪಕ್ಷಗಳ ಒಳಗಿನ ವಿಚಾರ ಎಂಬುದನ್ನು ಅರಿತುಕೊಳ್ಳಲಿ ಎಂದರು.
ಅಹಿಂದ ರಾಜ್ಯ ಕಾರ್ಯಕಾರಿಣಿ ಸಭೆ
ಹುಬ್ಬಳ್ಳಿ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರ್ನಾಟಕ ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತರ ಒಕ್ಕೂಟದ (ಅಹಿಂದ) ರಾಜ್ಯ ಕಾರ್ಯಕಾರಿಣಿ ಸಭೆ ಜರುಗಿತು.
ಸಂಘಟನೆಯ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಹಿಂದ ಸಂಘಟನೆಯನ್ನು ಬಲಪಡಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನದ ಪ್ರಯುಕ್ತ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 50 ಗಣ್ಯರಿಗೆ "ಅಹಿಂದ ರತ್ನ " ಪ್ರಶಸ್ತಿ ಪ್ರದಾನ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಶೀಘ್ರದಲ್ಲಿ ಇನ್ನೊಮ್ಮೆ ಸಭೆ ನಡೆಸಿ ಸಮಾವೇಶದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ, ಸಿ.ಎಂ. ಕರಡಿಕೊಪ್ಪ, ಮಾಚಣ್ಣವರ, ರಾಜಶೇಖರ ಮೆಣಸಿನಕಾಯಿ, ಬಿ.ಎ. ಮುಧೋಳ, ಬೀರಲಿಂಗ ಪೂಜಾರಿ, ಯೂಸೂಫ್ ಖಾನ್ ಬಳ್ಳಾರಿ, ಗುರುನಾಥಗೌಡ ಪಾಟೀಲ, ನಿರ್ಮಲಾ ಹೊಂಗಲ್, ರತ್ನ ಗಿಡವೀರಣ್ಣವರ, ರತ್ನ ಕಾಮನಹಳ್ಳಿ, ಜೈನಜಬಿ ಒಂಟಿಕುದುರಿ ಸೇರಿದಂತೆ ಹಲವರಿದ್ದರು.