ಪತ್ರಕರ್ತರು ಕ್ರಿಯಾಶೀಲರಾಗಿದ್ದರೆ ಸಮಾಜ ಸುಧಾರಣೆ ಸಾಧ್ಯ-ಸಚಿವ ಪಾಟೀಲ

| Published : Jul 01 2024, 01:55 AM IST

ಪತ್ರಕರ್ತರು ಕ್ರಿಯಾಶೀಲರಾಗಿದ್ದರೆ ಸಮಾಜ ಸುಧಾರಣೆ ಸಾಧ್ಯ-ಸಚಿವ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಕರ್ತರು ಕ್ರಿಯಾಶೀಲರಾಗಿದ್ದರೆ ಸಮಾಜ ಸುಧಾರಿಸುತ್ತದೆ. ಒಂದರ್ಥದಲ್ಲಿ ಪತ್ರಕರ್ತರಿಲ್ಲದೇ ಸಮಾಜವನ್ನು ಮುನ್ನಡೆಸುವುದು ಕಷ್ಟ. ಪತ್ರಕರ್ತರು ನಿಖರವಾದ ಸುದ್ದಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಹಾವೇರಿ: ಪತ್ರಕರ್ತರು ಕ್ರಿಯಾಶೀಲರಾಗಿದ್ದರೆ ಸಮಾಜ ಸುಧಾರಿಸುತ್ತದೆ. ಒಂದರ್ಥದಲ್ಲಿ ಪತ್ರಕರ್ತರಿಲ್ಲದೇ ಸಮಾಜವನ್ನು ಮುನ್ನಡೆಸುವುದು ಕಷ್ಟ. ಪತ್ರಕರ್ತರು ನಿಖರವಾದ ಸುದ್ದಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದ ಗುರುಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಹಾವೇರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಪತ್ರಕರ್ತರ ಮಕ್ಕಳ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ನೂರಾರು ಭಾಷೆಗಳು ಹಾಗೂ ಸಾವಿರಾರು ಜಾತಿಗಳಿದ್ದರೂ ನಾವು ಸಾಮರಸ್ಯದಿಂದ ಬದುಕುತ್ತಿದೇವೆ. ಇದಕ್ಕೆ ಪತ್ರಕರ್ತರ ಬರಹಗಳು ಕಾರಣವಾಗಿವೆ. ರಾಜಕೀಯ ಸುದ್ದಿ, ಜನಪ್ರತಿನಿಧಿಗಳ, ವಿಜ್ಞಾನಿಗಳ, ಯಶಸ್ವಿ ರೈತ, ವಿವಿಧ ಸಾಧಕರ ಸಾಧನೆಗಳನ್ನು ವಿಮರ್ಶೆಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಪತ್ರಿಕಾ ರಂಗ ಮಾಡುತ್ತಿದೆ. ದೇಶ ಸ್ವಾತಂತ್ರ್ಯ ಹೊಂದಲು ಸಹ ಪತ್ರಕರ್ತರ ಕೊಡುಗೆ ಅಪಾರ ಎಂದು ಹೇಳಿದರು. ನಿವೃತ್ತ ಪತ್ರಕರ್ತರಿಗೆ ಮಾಸಾಶನ ನೀಡುವಲ್ಲಿ ಸಮಸ್ಯೆ ಇದೆ ಎಂದು ತಿಳಿದು ಬಂದಿದೆ. ಪತ್ರಕರ್ತರು ಇಳಿ ವಯಸ್ಸಿನಲ್ಲಿ ಅನೇಕ ತೊಂದರೆಗಳಿಗೆ ಈಡಾಗುತ್ತಿದ್ದಾರೆ. ೧೭೦ ಜನರಿಗೆ ಮಾತ್ರ ಮಾಸಾಶನ ಬರುತ್ತಿದ್ದು, ಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಸಾಶನ ನೀಡಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.ಅವಿನಾಭಾವ ಸಂಬಂಧ:ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಸಿಎಂ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಹಾಗೂ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಕೂಡಿ ಕೆಲಸ ಮಾಡುತ್ತೇವೆ. ಜಿಲ್ಲೆಯ ಪತ್ರಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಎಲ್ಲ ಸಹಕಾರ ನೀಡುತ್ತೇನೆ. ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ಈ ಕಾರ್ಯಕ್ರಮ ಆಯೋಜಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕದ ಅಭಿವೃದ್ಧಿಗೆ ಹಾಗೂ ಕನ್ನಡ ನಾಡು-ನುಡಿ, ಗಡಿ ವಿಷಯದಲ್ಲಿ ಪತ್ರಿಕಾ ರಂಗದ ಪಾತ್ರ ಬಹಳ ಮಹತ್ವದ್ದಾಗಿದೆ. ರಾಜ್ಯದ ನೀರಾವರಿ ಯೋಜನೆಗಳು, ವಿದ್ಯುತ್ ಯೋಜನೆಗಳು ಸೇರಿದಂತೆ ಅನೇಕ ಯೋಜನೆಗಳು ಕುಂಠಿತಗೊಂಡಾಗ ಅವುಗಳನ್ನು ಬಡಿದೆಬ್ಬಿಸಿ ಜನರಿಗೆ ತಲುಪಿಸುವ ಕೆಲಸವನ್ನು ಹಿರಿಯ ಪತ್ರಕರ್ತರು ಮಾಡಿದ್ದಾರೆ. ಪತ್ರಿಕಾ ರಂಗ ಹಾಗೂ ರಾಜಕಾರಣಿಗಳಿಗೆ ಅವಿನಾಭಾವ ಸಂಬಂಧವಿದೆ. ಇಬ್ಬರದೂ ಬಿಡಲಾದ ಸಂಬಂಧವಾಗಿದೆ ಎಂದರು.ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಪತ್ರಿಕಾ ಕ್ಷೇತ್ರ ಒಂದು ವೃತ್ತಿಯಲ್ಲ, ಒಂದು ಸಮಾಜ ಸೇವೆಯಾಗಿದೆ. ಸಮಾಜದ ಅಭಿವೃದ್ಧಿ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ. ಜನಪ್ರತಿನಿಧಿಗಳು ತಪ್ಪುಮಾಡಿದಾಗ ತಿದ್ದುವ ಜವಾಬ್ದಾರಿ ನಿಮ್ಮ ಮೇಲಿದೆ. ಅದರಲ್ಲೂ ಮುದ್ರಣ ಮಾಧ್ಯಮ ಬಹಳ ಪ್ರಮುಖ ಪಾತ್ರವಹಿಸುತ್ತದೆ. ದೃಶ್ಯ ಮಾಧ್ಯಮ ಹಾವಳಿ ಮಧ್ಯೆಯೂ ಬೆಳಗ್ಗೆ ಪೇಪರ್ ಓದುವ ರೂಢಿ ಮಾತ್ರ ಹೋಗಿಲ್ಲ. ಪತ್ರಕರ್ತರ ಮಕ್ಕಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ ಎಂದು ಶುಭ ಹಾರೈಸಿದ ಅವರು, ಹಾವೇರಿ ಪತ್ರಿಕಾ ಭವನಕ್ಕೆ ₹೫ ಲಕ್ಷ ಧನಸಹಾಯ ನೀಡುವುದಾಗಿ ಘೋಷಿಸಿದರು.ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಪತ್ರಕರ್ತರ ಸಂಘನೆಯು ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುವುದು ಶ್ಲಾಘನೀಯ. ಸರ್ಕಾರ ಪತ್ರಕರ್ತರಿಗೆ ಅನೇಕ ಸೌಲಭ್ಯಗಳನ್ನು ನೀಡಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಕೊಡುವ ಕಾರ್ಯ ಮಾಡಲಾಗುವುದು. ಪತ್ರಿಕಾ ಭವನದ ಅಭಿವೃದ್ಧಿಗೆ ₹೫ ಲಕ್ಷ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಕಳೆದ ನಾಲ್ಕೈದು ವರ್ಷದಲ್ಲಿ ಪತ್ರಕರ್ತರ ಸದಸ್ಯತ್ವದ ಹಣದಲ್ಲೇ ₹೭೫ ಲಕ್ಷ ಕ್ಷೇಮಾಭಿವೃದ್ಧಿ ಸಂಗ್ರಹಿಸಲಾಗಿದೆ. ಈ ಹಣವನ್ನು ಪತ್ರಕರ್ತರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದರು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಪಡೆದ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಇದೇ ವೇಳೆ ನಿವೃತ್ತ ಜಿಲ್ಲಾ ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್ ಅವರನ್ನು ಸನ್ಮಾನಿಸಲಾಯಿತು. ದಿ. ಅಶೋಕ ಕಾಶೆಟ್ಟಿ ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆಗೆ ಮೂಡಣ ಪತ್ರಿಕೆ ಸಂಪಾದಕಿ ತೇಜಸ್ವಿನಿ ಕಾಶೆಟ್ಟಿ ಅವರು ₹೧ ಲಕ್ಷದ ಚೆಕ್‌ ನೀಡಿದರು.ನಗರಸಭೆಯ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಕಾರ್ಯದರ್ಶಿಗಳಾದ ನಿಂಗಪ್ಪ ಚಾವಡಿ, ಮತ್ತಿಕೆರೆ ಜಯರಾಮ, ಸೋಮಶೇಖರ ಕೆರಗೋಡು, ಉಪಾಧ್ಯಕ್ಷರಾದ ಪುಂಡಲಿಕ ಬಾಳೋಜಿ, ಅಜ್ಜಮಾಡ ರಮೇಶ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ್, ವಾಸುದೇವ ಹೊಳ್ಳ, ಪಿ.ಎಂ. ಸತ್ಯಪ್ಪನವರ, ವೀರೇಶ ಮಡ್ಲೂರು ಇತರರು ಇದ್ದರು. ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಕುರುವತ್ತೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ನಾರಾಯಣ ಹೆಗಡೆ ಸ್ವಾಗತಿಸಿದರು. ಶಿವಾನಂದ ಮಲ್ಲನಗೌಡರ ವಂದಿಸಿದರು. ಕಾರ್ಯಕ್ರಮದಲ್ಲಿ ಸಾಗರದ ಡೊಳ್ಳು ಕುಣಿತ ಗಮನ ಸೆಳೆಯಿತು.