ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
೧೯೫೦ ರಿಂದ ನಿರಂತರವಾಗಿ ನಾಡಿನ ಹಲವು ಕಡೆಗಳಲ್ಲಿ ನಡೆಯುತ್ತ ಬಂದಿರುವ ಸಿರಿಗೆರೆಯ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಈ ಬಾರಿ ಸರಳವಾಗಿ ಸಿರಿಗೆರೆಯಲ್ಲಿ ಮೂರು ದಿನಗಳ ಕಾಲ ನಡೆಸಲಾಗುವುದು ಎಂದು ತರಳಬಾಳು ಜಗದ್ಗುರು ಬೃಹನ್ಮಠದ ಪ್ರಕಟಣೆ ತಿಳಿಸಿದೆ.ಸಿರಿಗೆರೆಯ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಸರಳವಾದ ಹುಣ್ಣಿಮೆ ಮಹೋತ್ಸವವು ಫೆಬ್ರವರಿ ೨೨ ರಿಂದ ೨೪ರವರೆಗೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಜರುಗುವುದು.
ಹುಣ್ಣಿಮೆ ಮಹೋತ್ಸವದ ಅಂಗ ವಾಗಿ ಈ ಬಾರಿ ಗ್ರಾಮೀಣ ಯುವ ಕ್ರೀಡಾ ಮೇಳ, ಯುವಗೋಷ್ಠಿ, ಮಹಿಳಾ ಗೋಷ್ಠಿ, ತರಳಬಾಳು ವಿಜ್ಞಾನ ಮೇಳ ಮತ್ತು ಹಲವು ಸಾಹಿತ್ಯಕ ಕೃತಿಗಳ ಲೋಕಾರ್ಪಣೆ ನಡೆಯಲಿವೆ. ತರಳಬಾಳು ಪೀಠ ಸಂಸ್ಥಾಪಕ ವಿಶ್ವಬಂಧು ಮರುಳಸಿದ್ಧರ ಕುರಿತ ನಾಟಕ ಪ್ರದರ್ಶನವೂ ಇರಲಿದೆ.ಮೂರು ದಿನಗಳ ಕಾಲ ಆಹ್ವಾನಿತರಿಂದ ಉಪನ್ಯಾಸ ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯುತ್ತವೆ. ಫೆ.24ರರಂದು ಸಂಜೆ ತರಳಬಾಳು ಪರಂಪರೆಯ ಸಂಪ್ರದಾಯಗಳಿಗೆ ಅನುಗುಣವಾಗಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸದ್ಧರ್ಮ ಸಿಂಹಾಸನದ ಮೇಲೆ ಆಸೀನರಾಗಿ ನೆರೆದ ಭಕ್ತರಿಗೆ ಆಶೀರ್ವಚನ ನೀಡುವರು.
ಭರಮಸಾಗರ ಹುಣ್ಣಿಮೆ ಮುಂದಕ್ಕೆ: 2023ರ ಫೆಬ್ರುವರಿಯಲ್ಲಿ ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ 9 ದಿನಗಳ ಕಾಲ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂತಿಮ ದಿನದಂದು ಪೀಠಾ ರೋಹಣ ಮಾಡಿದ ತರಳಬಾಳು ಶ್ರೀಗಳು 2024ರ ಮಹೋತ್ಸವವು ಚಿತ್ರದುರ್ಗ ಜಿಲ್ಲೆಯ ಹೋಬಳಿ ಕೇಂದ್ರವಾದ ಭರಮಸಾಗರದಲ್ಲಿ ನಡೆಯಲಿದೆ ಎಂದು ಘೋಷಿಸಿ ಭಕ್ತರಲ್ಲಿ ಉತ್ಸಾಹವನ್ನು ಇಮ್ಮಡಿ ಗೊಳಿಸಿದ್ದರು. ೫೨೫ ಕೋಟಿ ರು.ಗಳ ಭರಮಸಾಗರ ಏತ ನೀರಾವರಿ ಯೋಜನೆಯು ತರಳಬಾಳು ಶ್ರೀಗಳ ನೇತೃತ್ವದಲ್ಲಿ ಕೇವಲ ೨ ವರ್ಷಗಳ ಅವಧಿಯಲ್ಲಿಯೇ ಪೂರ್ಣಗೊಂಡು ಯೋಜನೆ ವ್ಯಾಪ್ತಿಯ ೪೩ ಕೆರೆಗಳಿಗೆ ನೀರು ತುಂಬಿದ್ದು ಭಕ್ತರಲ್ಲಿನ ಉತ್ಸಾಹವನ್ನು ಹೆಚ್ಚಿಸಿತ್ತು.ಕೆರೆಗಳಿಗೆ ನೀರು ಹರಿದು ಬಂದ ಸಂಭ್ರಮದಲ್ಲಿ ಶ್ರೀಗಳವರು ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಎಲ್ಲಾ ಕೆರೆಗಳಿಗೂ ಭೇಟಿ ನೀಡಿ ಅಲ್ಲಿ ಜನರ ಕಷ್ಟಕಾರ್ಪಣ್ಯಗಳ ಹತ್ತಿರದಿಂದ ನೋಡಿದ್ದರು. . ಅಂತಿಮವಾಗಿ ಭರಮಸಾಗರದ ಐತಿಹಾಸಿಕ ಭರಮಣ್ಣ ನಾಯಕನ ಕೆರೆಗೆ ಭೇಟಿ ನೀಡಿ, ಏರಿ ದುರಸ್ತಿ, ಕೆರೆಯ ಅಭಿವೃದ್ಧಿಯ ಬಗ್ಗೆ ವ್ಯಾಪಕವಾಗಿ ಅಧಿಕಾರಿಗಳು, ಜನನಾಯಕರು ಮತ್ತು ನೀರಾವರಿ ಸಮಿತಿ ಯೊಂದಿಗೆ ಚರ್ಚಿಸಿದ್ದಲ್ಲದೆ, ಆಗ ಆಯೋಜನೆಗೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು.ʻ ಹಬ್ಬ ಹರಿದಿನಗಳನ್ನು ಜನರು ಸುಖ ಮತ್ತು ಸಂತೋಷದಿಂದ ಇರುವಾಗ ಆಚರಿಸುತ್ತಾರೆ. ಹಬ್ಬ ಹರಿದಿನಗಳೆಂದರೆ ಎಲ್ಲರೂ ಸಂತೋಷದಿಂದ ಕುಣಿದು ಕುಪ್ಪಳಿಸುವ ಸಂದರ್ಭ. ಅಂತಹ ದಿನಗಳು ಈ ವರ್ಷ ರಾಜ್ಯದಲ್ಲಿ ಇಲ್ಲ. ಮಳೆಯ ಕೊರತೆಯಿಂದ ಎಲ್ಲೆಡೆ ನೋವು ಆವರಿಸಿದೆ. ಕುಡಿಯುವ ನೀರಿಗೂ ತೊಂದರೆ ಆಗುವ ಲಕ್ಷಣಗಳು ಇವೆ. ಇಂತಹ ಸಂದರ್ಭದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಭರಮಸಾಗರದಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸುವುದು ಸೂಕ್ತವಲ್ಲ. ಇಲ್ಲಿ ನಡೆಯಬೇಕಾದ ಹುಣ್ಣಿಮೆ ಮಹೋತ್ಸವವನ್ನು ಒಂದು ವರ್ಷದ ಕಾಲ ಮುಂದೂಡಲು ನಿರ್ಧರಿಸಿದ್ದೇವೆʼ ಎಂದು ಶ್ರೀಗಳು ತಿಳಿಸಿದ್ದರು.
ಅದರಂತೆ ಈ ಬಾರಿ ಭರಮಸಾಗರದಲ್ಲಿ ನಡೆಯಬೇಕಾಗಿದ್ದ ಅದ್ಧೂರಿಯ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಮುಂದೂಡಿ, ಮಠದ ಸಂಪ್ರದಾಯದಂತೆ ಸರಳವಾಗಿ ಸಿರಿಗೆರೆಯಲ್ಲಿ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿದೆ.75 ವರ್ಷಗಳ ಸಂಭ್ರಮಕ್ಕೆ ಪದಾರ್ಪಣೆ
ತರಳಬಾಳು ಜಗದ್ಗುರು ಬೃಹನ್ಮಠದ ಆವರಣದಲ್ಲಿಯೇ ನಡೆಯುತ್ತಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವು ಮೊಟ್ಟ ಮೊದಲ ಬಾರಿಗೆ ಈಗಿನ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ 1950ರಲ್ಲಿ ನಡೆದಿತ್ತು. ಆಗ ಜಗಳೂರಿನ ಇಮಾಂ ಸಾಹೇಬ್ ಮುಂದೆ ನಿಂತು ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ನಡೆಸಿದ್ದರು. ಅಲ್ಲಿಂದ ರಾಜ್ಯದ ಬೆಂಗಳೂರು, ವಿಜಯಪುರ, ಧಾರವಾಡ, ಶಿವಮೊಗ್ಗ, ದಾವಣ ಗೆರೆ, ಚಿಕ್ಕಮಗಳೂರು, ಹರಿಹರ, ರಟ್ಟಿಹಳ್ಳಿ, ಹಿರೇಕೆರೂರು, ಶಿಗ್ಗಾಂವಿ, ಚಿತ್ರದುರ್ಗ, ಹೊಸದುರ್ಗ, ಭೀಮಸಮುದ್ರ, ಹುಬ್ಬಳ್ಳಿ, ಹಾನಗಲ್, ತರಳಬಾಳು, ಬೀರೂರು, ಕಡೂರು, ಪಟ್ಟಣಗಳಲ್ಲಿಯೂ ನಡೆದಿದೆ. ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದಲ್ಲಿಯೂ ಹಿರಿಯ ಗುರುಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ತರಳಬಾಳು ಹುಣ್ಣಿಮೆ ನಡೆದ ಇತಿಹಾಸವಿದೆ.