ಸಾರಾಂಶ
ಹುಬ್ಬಳ್ಳಿ: ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಗುತ್ತಿರುವ "ವಂದೇ ಭಾರತ್ ರೈಲು "ಗಳ ನಿರ್ವಹಣೆಗಾಗಿ ರಾಜ್ಯದ ಮೂರು ಕಡೆಗಳಲ್ಲಿ ಡಿಪೋಗಳು ನಿರ್ಮಾಣವಾಗಲಿವೆ. ಇದಕ್ಕೆ ರೈಲ್ವೆ ಅಭಿವೃದ್ಧಿ ಮಂಡಳಿ ಇತ್ತೀಚಿಗೆ ಅನುಮೋದನೆ ನೀಡಿದ್ದು, ಸದ್ಯ ಟೆಂಡರ್ ಪ್ರಕ್ರಿಯೆ ನಡೆದಿದೆ. 2027ರಲ್ಲಿ ಈ ಡಿಪೋಗಳೆಲ್ಲ ಕಾರ್ಯಾಚರಣೆ ಮಾಡುವ ಸಾಧ್ಯತೆಗಳಿವೆ.
ಹುಬ್ಬಳ್ಳಿ, ಬೆಂಗಳೂರು ಹಾಗೂ ಥಣಿಸಂದ್ರದಲ್ಲಿ ಡಿಪೋ ಆಗಲಿದ್ದು, ಟೆಂಡರ್ ಪ್ರಕ್ರಿಯೆ ನಡೆದಿದ್ದು, ಪೂರ್ಣಗೊಂಡ ಬಳಿಕ ಶುರುವಾಗಲಿವೆ. ಮೂರು ಕಡೆಗಳಲ್ಲಿ ಸೇರಿ ಬರೋಬ್ಬರಿ ₹620 ಕೋಟಿ ವೆಚ್ಚ ತಗುಲಿದೆ.ಎಲ್ಲೆಲ್ಲಿ ಏನೇನು?
ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ಈಗಾಗಲೇ 3 ಪಿಟ್‌ಲೈನ್‌ನಲ್ಲಿ ವಂದೇ ಭಾರತ್ ರೈಲುಗಳ ಚೇರ್ ಕಾರ್ ಕೋಚ್ಗಳ ನಿರ್ವಹಣೆ ಮಾಡಲಾಗುತ್ತಿದೆ. ಆದರೂ, ಈಗಿರುವ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದಾದ ರೈಲುಗಳ ಒತ್ತಡದ ಹಿನ್ನೆಲೆಯಲ್ಲಿ ವಿಸ್ತರಿಸಲಾಗುತ್ತದೆ. ಇದರಲ್ಲಿ ಮೆಮು ರೈಲು ಶೆಡ್ ಕೂಡ ನಿರ್ಮಾಣವಾಗಲಿದೆ. ಹೆಚ್ಚುವರಿಯಾಗಿ ₹50 ಕೋಟಿ ಇದಕ್ಕಾಗಿ ವಿನಿಯೋಗಿಸಲಾಗುತ್ತಿದೆ.ಇನ್ನು ಹುಬ್ಬಳ್ಳಿಯಲ್ಲಿ ಈಗಾಗಲೇ ಇರುವ ಹಳೆ ಮಾದರಿಯ ಕೋಚ್ ನಿರ್ವಹಣಾ ಘಟಕಕ್ಕೆ ಹೊಂದಿಕೊಂಡಂತೆ ರೈಲ್ವೆ ಭೂಮಿಯಲ್ಲೇ ₹300 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಹುಬ್ಬಳ್ಳಿಯಲ್ಲಿ ಇಂಟಿಗ್ರೇಟೆಡ್ ರೂಲಿಂಗ್ ಸ್ಟಾಕ್ ಕೋಚಿಂಗ್ ಡಿಪೋ ನಿರ್ಮಿಸಲು ವಿನ್ಯಾಸ ಸಿದ್ಧಪಡಿಸಲಾಗಿದೆ. ಇದರಲ್ಲಿ ಹೊಸದಾಗಿ 24 ಚೇರ್ ಕಾರ್‌ಗಳಷ್ಟು ಉದ್ದದ ಪರಿಶೀಲನಾ ಲೈನ್, ಸ್ಪೆಲ್ಲಿಂಗ್ ಲೈನ್, ಜತೆಗೆ ಸ್ವಯಂ ಚಾಲಿತ ಕೋಚ್ ವಾಶಿಂಗ್ ಲೈನ್ ಸಹ ನಿರ್ಮಿಸಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ದುರಸ್ತಿ ಘಟಕವನ್ನೂ ನಿರ್ಮಿಸಲಾಗುವುದು ಎಂದು ರೈಲ್ವೆ ವಲಯದ ಮೂಲಗಳು ತಿಳಿಸಿವೆ.
ಸ್ಲೀಪರ್ ಕೋಚ್ ನಿರ್ವಹಣೆ:ಇನ್ನು ಥಣಿಸಂದ್ರದಲ್ಲಿರುವ ದುರಸ್ತಿ ಕಮ್ ನಿರ್ವಹಣಾ ಘಟಕವನ್ನು ಪುನರ್ ನವೀಕರಿಸಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ನವೀಕರಣದಲ್ಲಿ ಮುಖ್ಯವಾಗಿ ವಂದೇ ಭಾರತ್ ಸ್ಲೀಪರ್ ಕೋಚ್ ಟ್ರೇನ್‌ಗಳ ದುರಸ್ತಿ ಹಾಗೂ ನಿರ್ವಹಣೆಗೆ ಮಾತ್ರ ಮೀಸಲಾಗಿರುತ್ತದೆ. ₹270 ಕೋಟಿ ಮೊತ್ತದಲ್ಲಿ ನಿರ್ಮಿಸಲಾಗುತ್ತದೆ.
ಈಗಾಗಲೇ ವಂದೇ ಭಾರತ್ ಚೇರ್ ಕಾರ್ ಮತ್ತು ಸ್ವೀಪರ್ ರೈಲುಗಳಿಗೆ ಸಾರ್ವಜನಿಕರಿಂದ ವ್ಯಾಪಕ ಬೇಡಿಕೆ ಬರುತ್ತಿದೆ. ಇದಕ್ಕನುಗುಣವಾಗಿ ನೈಋತ್ಯ ರೈಲ್ವೆಯು ರೈಲುಗಳ ಸಂಖ್ಯೆ ಹೆಚ್ಚಿಸಬಹುದು. ಹಾಗಾಗಿ ಇದಕ್ಕಾಗಿಯೇ ಪ್ರತ್ಯೇಕ ನಿರ್ವಹಣಾ ಘಟಕಗಳು ಅನಿವಾರ್ಯ'''''''' ಎಂದು ಆದಕಾರಣ ಈ ಮೂರು ಕಡೆಗಳಲ್ಲಿ ಡಿಪೋ ನಿರ್ಮಿಸಿ ಸಮರ್ಪಕವಾಗಿ ವಂದೇ ಭಾರತ್ ರೈಲುಗಳನ್ನು ನಿರ್ವಹಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.ಒಟ್ಟಿನಲ್ಲಿ ವಂದೇ ಭಾರತ್ ರೈಲಿಗೆ ದೇಶಾದ್ಯಂತ ಉತ್ತಮ ಸ್ಪಂದನೆ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆಯೂ ವಂದೇ ಭಾರತ್ ರೈಲು ಪ್ರಾರಂಭಿಸುವಂತೆ ಬೇಡಿಕೆ ಬರುತ್ತಿದೆ. ಹೀಗಾಗಿ ವಂದೇ ಭಾರತ್ ರೈಲುಗಳ ನಿರ್ವಹಣೆ ಕೂಡ ಅಷ್ಟೇ ಮುಖ್ಯವಾಗಿದೆ. ಪ್ರತಿ ಟ್ರಿಪ್ ಆದ ಬಳಿಕ ತಪಾಸಣೆ ಮಾಡುವುದು. ಫಿಟ್ ಇದೆಯಾ ಎಂಬುದನ್ನು ಪರಿಶೀಲಿಸುವುದು ಅಗತ್ಯ ಹಾಗೂ ಅನಿವಾರ್ಯ. ಹೀಗಾಗಿ ನಿರ್ವಹಣೆಗಾಗಿ ಮೂರು ಕಡೆ ಡಿಪೋ ಪ್ರಾರಂಭಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿ ವರ್ಗ ತಿಳಿಸುತ್ತದೆ.
ಒಟ್ಟಿನಲ್ಲಿ ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ವಂದೇ ಭಾರತ್ ರೈಲುಗಳ ನಿರ್ವಹಣೆಗೆ ಮೂರು ಕಡೆಗಳಲ್ಲಿ ಡಿಪೋ ನಿರ್ಮಿಸುತ್ತಿರುವುದು ಸಿಹಿ ಸುದ್ದಿ ಎಂದರೆ ತಪ್ಪಾಗಲಿಕ್ಕಿಲ್ಲ.ದೇಶಾದ್ಯಂತ ವಂದೇ ಭಾರತ್ ರೈಲುಗಳಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಭವಿಷ್ಯದಲ್ಲಿ ಈ ರೈಲುಗಳ ಸಂಖ್ಯೆಯೂ ಹೆಚ್ಚಾಗುವುದು ಗ್ಯಾರಂಟಿ. ರೈಲುಗಳ ಸಂಖ್ಯೆ ಹೆಚ್ಚಾದಷ್ಟು ಅವುಗಳ ನಿರ್ವಹಣೆ ಕೂಡ ಅಷ್ಟೇ ದೊಡ್ಡ ಸವಾಲು. ಹೀಗಾಗಿ ಅವುಗಳ ನಿರ್ವಹಣೆಗೆ ರಾಜ್ಯದಲ್ಲಿ ಮೂರು ಕಡೆಗಳಲ್ಲಿ ಡಿಪೋ ನಿರ್ಮಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ನೈಋತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಹೇಳಿದ್ದಾರೆ.