ಸಾರಾಂಶ
ಬೆಂಗಳೂರು : ಕಳೆದ ಅಕ್ಟೋಬರ್‌ನಲ್ಲಿ ಮಹದೇವಪುರದ ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿತದಲ್ಲಿ ಮೃತಪಟ್ಟ 9 ಮಂದಿಯ ಕುಟುಂಬದ ಸದಸ್ಯರಿಗೆ ಬಿಬಿಎಂಪಿಯಿಂದ ತಲಾ ₹3 ಲಕ್ಷ ಪರಿಹಾರ ನೀಡಲಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ ಮಹದೇವಪುರದ ಬಾಬುಸಾಪಾಳ್ಯದಲ್ಲಿ ಎಂ.ಭುವನ ರೆಡ್ಡಿ ಮಾಲೀಕತ್ವದ ಆರು ಅಂತಸ್ತಿನ ಬೃಹತ್ ಕಟ್ಟಡ ಏಕಾಏಕಿ ಕುಸಿದು ಬಿದ್ದು, ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 9 ಕಾರ್ಮಿಕರು ಕಟ್ಟಡದ ಅವಶೇಷಗಳಲ್ಲಿ ಸಿಲುಕಿ ಮೃತಪಟ್ಟಿದ್ದರು. ಆರು ಮಂದಿ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದರು.
ಹೀಗಾಗಿ, ಬಿಬಿಎಂಪಿಯಿಂದ ಮೃತಪಟ್ಟ 9 ಮಂದಿ ಕುಟುಂಬಕ್ಕೆ ತಲಾ ₹3 ಲಕ್ಷದಂತೆ ₹27 ಲಕ್ಷ ಹಾಗೂ ಗಾಯಗೊಂಡ 6 ಮಂದಿ ಚಿಕಿತ್ಸೆಗೆ ₹20 ಲಕ್ಷ ಭರಿಸಿದೆ. ಒಟ್ಟಾರೆ, ಬಿಬಿಎಂಪಿಯು ₹47 ಲಕ್ಷ ವೆಚ್ಚ ಮಾಡಿದೆ.ಕಟ್ಟಡ ಹರಾಜಿಗೆ ಕ್ರಮ
ಇನ್ನು ಬಿಬಿಎಂಪಿಯಿಂದ ಯಾವುದೇ ಅನುಮತಿ ಇಲ್ಲದೇ ಅನಧಿಕೃತವಾಗಿ ನಿರ್ಮಾಣ ಮಾಡಿ ಕಟ್ಟಡ ಕುಸಿತಕ್ಕೆ ಕಾರಣವಾಗಿ ಮಾಲೀಕರ ವಿರುದ್ಧ ಬಿಬಿಎಂಪಿಯು ಕಾನೂನು ಸಮರ ನಡೆಸುತ್ತಿದೆ. ಈಗಾಗಲೇ ನಿವೇಶನ ವಶಕ್ಕೆ ಪಡೆದುಕೊಂಡಿದ್ದು, ಹರಾಜು ಹಾಕಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿದೆ.