ಡೆಂಘೀ ಜನಜಾಗೃತಿಯಲ್ಲಿ 3 ಲಕ್ಷ ವಿದ್ಯಾರ್ಥಿಗಳು

| Published : Jun 19 2024, 01:01 AM IST

ಸಾರಾಂಶ

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜಿಲ್ಲೆಯಾದ್ಯಂತ 1,748 ಶಾಲಾ ಕಾಲೇಜುಗಳಲ್ಲಿ ಏಕಕಾಲಕ್ಕೆ ಡೆಂಘೀ ಜನಜಾಗೃತಿ ನಡೆಯುತ್ತಿದೆ. ಕುಂದಗೋಳ, ಹುಬ್ಬಳ್ಳಿ, ನವಲಗುಂದ ತಾಲೂಕುಗಳಲ್ಲಿ ಸ್ವತಃ ಶಾಸಕರು ಭಾಗವಹಿಸಿದ್ದರು.

ಧಾರವಾಡ

ಜಿಲ್ಲೆಯನ್ನು ಡೆಂಘೀ ಮುಕ್ತ ಜಿಲ್ಲೆಯನ್ನಾಗಿಸಲು ಪಣತೊಟ್ಟಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನಷ್ಟು ಸಕ್ರಿಯವಾಗಬೇಕು. ಅದೇ ರೀತಿ ಸಾರ್ವಜನಿಕರು ಸ್ವಚ್ಛತೆ, ಆರೋಗ್ಯದ ವಿಷಯದಲ್ಲಿ ಸಹಕರಿಸಬೇಕು. ಈ ನಿಟ್ಟಿನಲ್ಲಿ ಜನಜಾಗೃತಿ ಮತ್ತು ಡೆಂಘೀ ಮುಕ್ತ ಜಿಲ್ಲೆ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಮನವಿ ಮಾಡಿದರು.

ಜಿಲ್ಲೆಯಲ್ಲಿ ಕಳೆದ ವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಡಂಘೀ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ನಿವೇದಿತಾ ಆದರ್ಶ ವಿದ್ಯಾಲಯ ಆವರಣದಲ್ಲಿ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಜತೆಗೂಡಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಡೆಂಘೀ ಜನಜಾಗೃತಿ ಉದ್ಘಾಟಿಸಿದ ಅವರು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜಿಲ್ಲೆಯಾದ್ಯಂತ 1,748 ಶಾಲಾ ಕಾಲೇಜುಗಳಲ್ಲಿ ಏಕಕಾಲಕ್ಕೆ ಡೆಂಘೀ ಜನಜಾಗೃತಿ ನಡೆಯುತ್ತಿದೆ. ಕುಂದಗೋಳ, ಹುಬ್ಬಳ್ಳಿ, ನವಲಗುಂದ ತಾಲೂಕುಗಳಲ್ಲಿ ಸ್ವತಃ ಶಾಸಕರು ಭಾಗವಹಿಸಿದ್ದಾರೆ. ನಗರ ಮತ್ತು ಗ್ರಾಮ ಮಟ್ಟದಲ್ಲಿ ಜರುಗಿದ ಡೆಂಘೀ ಜನಜಾಗೃತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ವಿವಿಧ ಹಂತದ ಜನಪ್ರತಿನಿಧಿಗಳು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿದ್ದಾರೆ ಎಂದರು.

ಏಕಕಾಲಕ್ಕೆ 1,748 ವಿದ್ಯಾಸಂಸ್ಥೆಗಳಲ್ಲಿ ನಡೆದ ಜಾಗೃತಿಯಲ್ಲಿ 1,513 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2,50,000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮತ್ತು 7,586 ಶಿಕ್ಷಕರು, ಸಿಬ್ಬಂದಿ ಭಾಗವಹಿಸಿ ಪ್ರಯೋಜನ ಪಡೆದಿದ್ದಾರೆ. 169 ಪಿಯು ಕಾಲೇಜುಗಳ 41,000ಕ್ಕೂ ವಿದ್ಯಾರ್ಥಿಗಳು, 3,200ಕ್ಕೂ ಹೆಚ್ಚು ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಿಬ್ಬಂದಿ ಡೆಂಘೀ ಜಾಗೃತಿಯಲ್ಲಿದ್ದರು ಎಂದು ಮಾಹಿತಿ ನೀಡಿದರು.

ಹುಬ್ಬಳ್ಳಿ ತಾಲೂಕಿನ ಕುರಡಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಡೆಂಘೀ ತಡೆಗಟ್ಟುವ ಕುರಿತು ಮತ್ತು ಧಾರವಾಡ ಶ್ರೇಯಾ ನರ್ಸಿಂಗ್ ಕಾಲೇಜಿನ ಬಿಎಸ್‌ಸಿ 3ನೇ ವರ್ಷದ ವಿದ್ಯಾರ್ಥಿಗಳು ವಿವಿಧ ರೀತಿಯ ಸೊಳ್ಳೆ, ಸಾಂಕ್ರಾಮಿಕ ರೋಗ, ಅವುಗಳಿಂದ ರಕ್ಷಣೆ ಕುರಿತು ಕಿರು ನಾಟಕ (ಸ್ಕಿಟ್) ಪ್ರದರ್ಶಿಸಿದರು. ಹರ್ಲಾಪುರದ ಸಿವೈಸಿಡಿ ಜನಪದ ಕಲಾ ತಂಡದ ಸದಸ್ಯರು ಡೆಂಘೀ, ಚಿಕೂನ್‌ ಗುನ್ಯಾ, ಮಲೇರಿಯಾ ಕುರಿತು ಜಾನಪದ ಹಾಡು ಹಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ವೈದ್ಯಾಧಿಕಾರಿ ಡಾ. ಕೆ.ಎನ್. ತನುಜಾ ಡೆಂಘೀ ಹುಟ್ಟು, ಬೆಳವಣಿಗೆ, ನಿಯಂತ್ರಣ ಕುರಿತು ಪ್ರಾತ್ಯಕ್ಷಕೆ ನೀಡಿದರು. ಡಾ. ಸುಜಾತಾ ಹಸಮಿಮಠ ಡೆಂಘೀ ಪ್ರತಿಜ್ಞಾವಿಧಿ ಬೋಧಿಸಿದರು. ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮುಗನೂರಮಠ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಮಂಜುನಾಥ ಸೊಪ್ಪಿಮಠ, ಶಿಕ್ಷಣ ಇಲಾಖೆ ಡಿವೈಪಿಸಿ ಎಸ್.ಎಂ. ಹುಡೇದಮನಿ, ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಪ್ರಾಂಶುಪಾಲರಾದ ಎಚ್.ಎಸ್. ಉಪ್ಪಾರ, ಪಟ್ಟಣಕೋಡಿ ಇದ್ದರು.

ಗಮನ ಸೆಳೆದ ಡೆಂಘೀ ಮಾದರಿಗಳು:

ಡೆಂಘೀ ಜಾಗೃತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಆರೋಗ್ಯ ಇಲಾಖೆ ಹಾಗೂ ಸರ್ಕಾರಿ ಶಾಲೆಗಳ ಮಕ್ಕಳು ರಚಿಸಿದ್ದ ಡೆಂಘೀ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ಈಡಿಸ್ ಇಜಿಪ್ಟೆ ಸೊಳ್ಳೆಯ ಜೀವನಚಕ್ರ ಬಿಂಬಿಸುವ ಮಾದರಿಗಳು ಆಕರ್ಷಿಸಿ, ಗಮನ ಸೆಳೆದವು. ಡೆಂಘೀ ಜಾಗೃತಿಗಾಗಿ ಬ್ಯಾನರ್, ಕರಪತ್ರ, ಪೋಸ್ಟರ್‌ಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ, ಹಂಚಲಾಯಿತು.

ಜಿಲ್ಲೆಯಲ್ಲಿ ಈಗಾಗಲೇ ಮನೆ-ಮನೆಗೆ ಆರೋಗ್ಯ ಮತ್ತು ಲಾರ್ವಾ ಸಮೀಕ್ಷೆ ನಡೆದಿದ್ದಾರೆ. ಅದನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಡೆಂಘೀ ಪ್ರಕರಣ ಹೆಚ್ಚು ಕಂಡು ಬರುವ ಗ್ರಾಮ ಅಥವಾ ನಗರಗಳಲ್ಲಿ ಫೀವರ್ ಕ್ಲಿನಿಕ್ ತೆರೆಯಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಅಗತ್ಯ ಎನಿಸಿದರೆ ಡೆಂಘೀ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ 20 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ಸಜ್ಜುಗೊಳಿಸಲಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ, ಚಿಕಿತ್ಸೆಗೆ ಸೌಲಭ್ಯಗಳನ್ನು ದಾಸ್ತಿಕರಿಸಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.