ಪ್ರವಾಸದ ವೇಳೆ ಸೌಲಭ್ಯ ನೀಡದ್ದಕ್ಕೆ 3 ಲಕ್ಷ ರು. ಪರಿಹಾರ

| Published : Apr 18 2024, 02:17 AM IST / Updated: Apr 18 2024, 07:56 AM IST

ಸಾರಾಂಶ

ವಿದೇಶಿ ಪ್ರವಾಸದ ವೇಳೆ ಕಂಪನಿಯಿಂದ ತಮಗಾದ ಅನಾನುಕೂಲಕತೆಗೆ ಸೂಕ್ತ ಪರಿಹಾರ ನೀಡುವಂತೆ ಥಾಮಸ್‌ ಕುಕ್‌ ಲಿಮಿಟೆಡ್‌ಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಆದೇಶಿಸಿದೆ.

 ಬೆಂಗಳೂರು :  ಯೂರೋಪ್ ಪ್ರವಾಸದ ವೇಳೆ ಲಂಡನ್‌ ವೀಕ್ಷಣೆ ಹಾಗೂ ಉತ್ತಮ ವಸತಿ, ಆಹಾರ ಮತ್ತು ಸಾರಿಗೆ ಸೌಲಭ್ಯ ಕಲ್ಪಿಸದಕ್ಕೆ ಗ್ರಾಹಕರೊಬ್ಬರಿಗೆ ಮೂರು ಲಕ್ಷ ಪರಿಹಾರ ಪಾವತಿಸಲು ದೇಶದ ಪ್ರಮುಖ ಪ್ರವಾಸ ಸೇವೆ ಒದಗಿಸುವ ಥಾಮಸ್ ಕುಕ್ (ಇಂಡಿಯಾ) ಲಿಮಿಟೆಡ್‌ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ವಿದೇಶಿ ಪ್ರವಾಸದ ವೇಳೆ ಕಂಪನಿಯಿಂದ ತಮಗಾದ ಅನಾನುಕೂಲಕತೆಗೆ ಸೂಕ್ತ ಪರಿಹಾರ ನೀಡುವಂತೆ ಥಾಮಸ್‌ ಕುಕ್‌ ಲಿಮಿಟೆಡ್‌ಗೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ನಗರದ ಕೆ. ರುದ್ರಮೂರ್ತಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಆದೇಶಿಸಿದೆ.

ಯುರೋಪ್‌ ಪ್ರವಾಸ ಯೋಜನೆ ಕೈಗೊಂಡಾಗ ವೀಸಾ ಹಾಗೂ ಇತರೆ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪ್ರಯಾಣಿಕರಿಗೆ ಕೊಡಿಸುವುದು ಪ್ರವಾಸ ಸೇವೆ ಒದಗಿಸುವ ಕಂಪನಿಗಳ ಕರ್ತವ್ಯ. ಆದರೆ, ಪ್ರಕರಣದಲ್ಲಿ ಕಂಪನಿಯು ತಮಗೆ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಿದರೂ ಸೂಕ್ತ ಸಮಯಕ್ಕೆ ವೀಸಾ ಹಾಗೂ ಇತರೆ ದಾಖಲೆ ಕೊಡಿಸಲಿಲ್ಲ. ಇದು ಸೇವಾ ನ್ಯೂನತೆಯಾಗಿದೆ ಎಂಬ ದೂರುದಾರ ರುದ್ರಮೂರ್ತಿ ಅವರ ವಾದವನ್ನು ಭಾಗಶಃ ಪುರಸ್ಕರಿಸಿದ ಆಯೋಗ ಈ ಆದೇಶ ಮಾಡಿದೆ.

ಜತೆಗೆ ಪ್ರಕರಣ ಸಂಬಂಧ ದೂರುದಾರರಿಗೆ ಸೂಕ್ತ ಪ್ರವಾಸ ಸೌಲಭ್ಯ ಒದಗಿಸದಕ್ಕೆ ಎರಡು ಲಕ್ಷ ರು. ಪರಿಹಾರ, ಸೇವಾ ನ್ಯೂನತೆಗಳಿಗೆ ಒಂದು ಲಕ್ಷ ರು. ಮತ್ತು ವ್ಯಾಜ್ಯ ವೆಚ್ಚಕ್ಕಾಗಿ ಐದು ಸಾವಿರ ರು. ಪಾವತಿಸಬೇಕು. ಈ ಮೊತ್ತಕ್ಕೆ ಆದೇಶ ಪ್ರಕಟವಾದ ದಿನದಿಂದ ಪಾವತಿ ಮಾಡುವವರಿಗೆ ವಾರ್ಷಿಕ ಶೇ.10ರಷ್ಟು ಬಡ್ಡಿ ನೀಡಬೇಕು ಎಂದು ಥಾಮಸ್ ಕುಕ್ (ಇಂಡಿಯಾ) ಲಿಮಿಟೆಡ್ ಕಂಪನಿಗೆ ಆಯೋಗ ನಿರ್ದೇಶಿಸಿದೆ.

ಪ್ರಕರಣದ ವಿವರ: ಥಾಮಸ್ ಕುಕ್ ಇಂಡಿಯಾ ಲಿಮಿಟೆಡ್ ಎಂಬ ಪ್ರವಾಸ ಕಂಪನಿ ಮೂಲಕ ‘ಗ್ರ್ಯಾಂಡ್‌ ಬಾರ್ಗೇನ್ ಟೂರ್ ಆಫ್‌ ಯುರೋಪ್’ ಹೆಸರಿನಡಿಯಲ್ಲಿ 14 ರಾತ್ರಿ ಹಾಗೂ 15 ದಿನಗಳ ಪ್ರವಾಸಕ್ಕೆ ತೆರಳಲು ಬೆಂಗಳೂರಿನ ಕೆ. ರುದ್ರಮೂರ್ತಿ ಮತ್ತವರ ಮೂವರು ಕುಟುಂಬ ಸದಸ್ಯರು ಓರ್ವ ವ್ಯಕ್ತಿಗೆ 3,79,535 ರು. ನಂತೆ ಕಂಪನಿಗೆ ಒಟ್ಟು 16,37,000 ರು. ಪಾವತಿಸಿದ್ದರು.

ಲಂಡನ್, ಪ್ಯಾರಿಸ್, ಬೆಲ್ಜಿಯಂ, ನೆದರ್‌ಲ್ಯಾಂಡ್‌, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್‌, ಆಸ್ಟ್ರಿಯಾ ಹಾಗೂ ವ್ಯಾಟಿಕನ್ ಸಿಟಿಯ ಪ್ರವಾಸದ ಭೇಟಿ ಹಾಗೂ ಉತ್ತಮ ಆಹಾರ, ವಸತಿ ಹಾಗೂ ಸಾರಿಗೆ ಸೌಲಭ್ಯ ಕಲ್ಪಿಸುವುದಾಗಿ ಕಂಪನಿ ಖಚಿತ ಪಡಿಸಿತ್ತು. ಪ್ರವಾಸ ಕಳೆದ ಮೇ. 24ರಂದು ಪ್ರಾರಂಭಗೊಂಡು ಜೂ.8ಕ್ಕೆ ಮುಕ್ತಾಯ ಗೊಂಡಿತ್ತು. ಆದರೆ, ಆಯೋಗಕ್ಕೆ ದೂರು ಸಲ್ಲಿಸಿದ್ದ ರುದ್ರಮೂರ್ತಿ, ಆದರೆ ಕಂಪನಿಯು 14 ರಾತ್ರಿ ಹಾಗೂ 15 ದಿನಗಳ ಪ್ರವಾಸವನ್ನು 12 ರಾತ್ರಿ ಹಾಗೂ 13 ದಿನಗಳಿಗೆ ಮೊಟಕುಗೊಳಿಸಿತ್ತು. ಇದರಿಂದ ಲಂಡನ್‌ ವೀಕ್ಷಣೆ ತಪ್ಪಿತ್ತು. ಉತ್ತಮ ಆಹಾರ, ವಸತಿ ಹಾಗೂ ಸಾರಿಗೆ ಸೌಲಭ್ಯ ಕಲ್ಪಿಸಿಲ್ಲ. ಇದರಿಂದ ತಾವು ಮಾನಸಿಕ ಯಾತನೆ ಅನುಭವಿಸಿದ್ದು, ಪರಿಹಾರ ಕೊಡಲು ಕಂಪನಿಗೆ ನಿರ್ದೇಶಿಸುವಂತೆ ಕೋರಿದ್ದರು.