ನಾರಾಯಣಪುರಕ್ಕೆ ಆಲಮಟ್ಟಿಯಿಂದ 3 ಟಿಎಂಸಿ ನೀರು

| Published : Apr 06 2024, 12:49 AM IST

ಸಾರಾಂಶ

ಕುಡಿಯುವ ನೀರಿನ ಉದ್ದೇಶಕ್ಕಾಗಿ ನಾರಾಯಣಪುರ ಜಲಾಶಯಕ್ಕೆ ಏ.3ರಿಂದ 12 ಗೇಟ್ಗಳ ಮೂಲಕ 3 ಟಿಎಂಸಿ ನೀರನ್ನು ಹರಿಬಿಡಲಾಗಿದೆ.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಕುಡಿಯುವ ನೀರಿನ ಉದ್ದೇಶಕ್ಕಾಗಿ ನಾರಾಯಣಪುರ ಜಲಾಶಯಕ್ಕೆ ಏ.3ರಿಂದ 12 ಗೇಟ್‌ಗಳ ಮೂಲಕ 3 ಟಿಎಂಸಿ ನೀರನ್ನು ಹರಿಬಿಡಲಾಗಿದೆ.

ಶುಕ್ರವಾರ ಜಲಾಶಯದ 26 ಗೇಟ್‌ಗಳ ಪೈಕಿ 12 ಗೇಟ್‌ಗಳನ್ನು ತೆರೆದು ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ. ನಾರಾಯಣಪುರ ಜಲಾಶಯಕ್ಕೆ ನೀಡಬೇಕಾದ ನಾಲ್ಕು ಟಿಎಂಸಿ ಅಡಿಯಷ್ಟು ನೀರು ಆಲಮಟ್ಟಿ ಜಲಾಶಯದಲ್ಲಿ ಸಂಗ್ರಹವಿದೆ. ಆ ಪೈಕಿ 3 ಟಿಎಂಸಿ ಅಡಿ ನೀರನ್ನು ಏ.3ರಿಂದ ಹರಿಸಲಾಗುತ್ತಿದೆ. ಶುಕ್ರವಾರ ಮಧ್ಯರಾತ್ರಿ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ಆಲಮಟ್ಟಿ ಅಣೆಕಟ್ಟು ವಲಯದ ಪ್ರಭಾರಿ ಸೂಪರಿಂಟೆಂಡಿಂಗ್ ಎಂಜಿನಿಯರ್ ರಾಮನಗೌಡ ಹಳ್ಳೂರ ತಿಳಿಸಿದರು.

ಜಲಾಶಯದ ಮಟ್ಟ:

519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ ಶುಕ್ರವಾರ 511.15 ಮೀ.ವರೆಗೆ ನೀರು ಸಂಗ್ರಹವಿತ್ತು. ಜಲಾಶಯದಲ್ಲಿ 35.898 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಅದರಲ್ಲಿ 18.278 ಟಿಎಂಸಿ ಅಡಿ ನೀರು ಬಳಕೆ ಯೋಗ್ಯವಿದೆ.

ಜಲಾಶಯದ ಬಲಭಾಗದ ವಿದ್ಯುತ್ ಘಟಕದ ಮೂಲಕ 2500 ಕ್ಯುಸೆಕ್, ಜಲಾಶಯದ 12 ಗೇಟ್‌ಗಳ ಮೂಲಕ 10,500 ಕ್ಯುಸೆಕ್ ಸೇರಿ ಒಟ್ಟಾರೆ 14,000 ಕ್ಯುಸೆಕ್ ನೀರನ್ನು ನದಿಪಾತ್ರಕ್ಕೆ ಹರಿಸಲಾಗುತ್ತಿದೆ. ಹಿನ್ನೀರಿನ ಬಳಕೆ, ಕುಡಿಯುವ ನೀರು, ಬಿಸಿಲಿನ ತಾಪದಿಂದ ನೀರಿನ ಭಾಷ್ಪೀಭವನಕ್ಕಾಗಿ 1275 ಕ್ಯುಸೆಕ್ ನೀರು ಬಳಕೆಯಾಗುತ್ತಿದೆ. ಕೆರೆ ಭರ್ತಿಗೆ 345 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಒಟ್ಟಾರೇ ಆಲಮಟ್ಟಿ ಜಲಾಶಯದಿಂದ 16,446 ಕ್ಯುಸೆಕ್ ನೀರು ಬಳಕೆಯಾಗುತ್ತಿದೆ. ಬೇಸಿಗೆಯ ಬಿಸಿಲಿನ ಪ್ರಖರತೆಯ ಕಾರಣ ಆಲಮಟ್ಟಿ ಜಲಾಶಯದ ಮುಂಭಾಗ ಸಂಪೂರ್ಣ ಬತ್ತಿ ಹೋಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಜಲಾಶಯದಿಂದ ನೀರು ಬಿಟ್ಟ ಕಾರಣ ಜಲಾಶಯದ ಮುಂಭಾಗದಲ್ಲಿ ನೀರು ಬಂದಿದ್ದು, ನದಿಗೆ ಜೀವ ಕಳೆ ಬಂದಿದೆ.