ಸಾರಾಂಶ
ಬೆಂಗಳೂರು : ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು ತಿರಸ್ಕೃತಗೊಂಡಿವೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಕಾರ್ಯ ತಡರಾತ್ರಿಯವರೆಗೆ ನಡೆದಿರುವ ಹಿನ್ನೆಲೆಯಲ್ಲಿ ಆ ಒಂದು ಕ್ಷೇತ್ರದ ಅಂತಿಮ ಉಮೇದುವಾರಿಕೆಯ ಸಂಖ್ಯೆ ತಿಳಿಯಬೇಕಿದೆ. ಇನ್ನುಳಿದಂತೆ ಎಲ್ಲಾ ಕ್ಷೇತ್ರಗಳ ಪರಿಶೀಲನೆ ಕಾರ್ಯ ನಡೆದಿದೆ. ಏ.8ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ. ತದನಂತರ ಚುನಾವಣಾ ಅಖಾಡದಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 34 ಅಭ್ಯರ್ಥಿಗಳು 49 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ. ಇವರ ನಾಮಪತ್ರಗಳ ಪರಿಶೀಲನೆ ಕಾರ್ಯವು ತಡರಾತ್ರಿಯವರೆಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಮಾಹಿತಿಯು ತಡವಾಗಿ ಲಭ್ಯವಾಗಲಿದೆ. 358 ಅಭ್ಯರ್ಥಿಗಳು 492 ನಾಮಪತ್ರಗಳು ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ 384 ನಾಮಪತ್ರಗಳು ಸ್ವೀಕೃತಗೊಂಡಿದ್ದು, 60 ನಾಮಪತ್ರಗಳು ತಿರಸ್ಕೃತಗೊಂಡಿದೆ. 276 ನಾಮಪತ್ರ ಕ್ರಮಬದ್ಧವಾಗಿವೆ ಎಂದು ಮುಖ್ಯಚುನಾವಣಾಧಿಕಾರಿ ಕಚೇರಿ ತಿಳಿಸಿದೆ.
ಕ್ಷೇತ್ರವಾರು ಮಾಹಿತಿ:ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು 19 ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, 10 ನಾಮಪತ್ರಗಳು ಕ್ರಮಬದ್ಧವಾಗಿದ್ದು, 4 ತಿರಸ್ಕೃತಗೊಂಡಿವೆ. ಹಾಸನ ಕ್ಷೇತ್ರದಲ್ಲಿ 21 ಅಭ್ಯರ್ಥಿಗಳು 29 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 18 ಕ್ರಮಬದ್ಧವಾಗಿದ್ದು, ಮೂರು ತಿರಸ್ಕೃತಗೊಂಡಿವೆ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು 21 ನಾಮಪತ್ರಗಳನ್ನು ಸಲ್ಲಿಸಿದ್ದು, 10 ಕ್ರಮವಾಗಿವೆ. 2 ತಿರಸ್ಕೃತಗೊಂಡಿವೆ. ಚಿತ್ರದುರ್ಗ ಕ್ಷೇತ್ರದಲ್ಲಿ 28 ಅಭ್ಯರ್ಥಿಗಳು 36 ನಾಮಪತ್ರ ಸಲ್ಲಿಕೆ ಮಾಡಿದ್ದು, 24 ನಾಮಪತ್ರಗಳು ಕ್ರಮಬದ್ಧವಾಗಿವೆ. 4 ಉಮೇದುವಾರಿಕೆ ತಿರಸ್ಕೃತವಾಗಿವೆ. ತುಮಕೂರು ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು 31 ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ 22 ನಾಮಪತ್ರಗಳು ಕ್ರಮಬದ್ಧವಾಗಿವೆ. ಮಂಡ್ಯ ಕ್ಷೇತ್ರದಲ್ಲಿ 27 ಅಭ್ಯರ್ಥಿಗಳು 37 ನಾಮಪತ್ರಗಳನ್ನು ಸಲ್ಲಿಸಿದ್ದು, 10 ನಾಮಪತ್ರಗಳು ತಿರಸ್ಕೃತಗೊಂಡಿವೆ. 19 ಉಮೇದುವಾರಿಕೆ ಕ್ರಮಬದ್ಧವಾಗಿವೆ.
ಮೈಸೂರು ಕ್ಷೇತ್ರದಲ್ಲಿ 28 ಅಭ್ಯರ್ಥಿಗಳು 37 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದು, 5 ಉಮೇದುವಾರಿಕೆ ತಿರಸ್ಕೃತ, 24 ಉಮೇದುವಾರಿಕೆ ಕ್ರಮವಾಗಿವೆ. ಚಾಮರಾಜನಗರ ಕ್ಷೇತ್ರದಲ್ಲಿ 25 ಅಭ್ಯರ್ಥಿಗಳಿಂದ 36 ಉಮೇದುವಾರಿಕೆಯಾಗಿದ್ದು, 5 ತಿರಸ್ಕೃತ, 22 ಕ್ರಮಬದ್ಧವಾಗಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 31 ಅಭ್ಯರ್ಥಿಗಳಿಂದ 45 ನಾಮಪತ್ರ ಸಲ್ಲಿಕೆಯಾಗಿದ್ದು, 7 ನಾಮಪತ್ರಗಳು ತಿರಸ್ಕೃತ, 27 ಕ್ರಮಬದ್ಧವಾಗಿವೆ.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 25 ಅಭ್ಯರ್ಥಿಗಳು 36 ನಾಮಪತ್ರ ಸಲ್ಲಿಕೆ ಮಾಡಿದ್ದು, 6 ಉಮೇದುವಾರಿಕೆ ತಿರಸ್ಕೃತ, 21 ಕ್ರಮಬದ್ಧವಾಗಿವೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 32 ಅಭ್ಯರ್ಥಿಗಳಿಂದ 40 ಉಮೇದುವಾರಿಕೆ ಸಲ್ಲಿಕೆಯಾಗಿದ್ದು, 28 ಕ್ರಮಬದ್ಧವಾಗಿವೆ. 4 ತಿರಸ್ಕೃತಗೊಂಡಿವೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 36 ಅಭ್ಯರ್ಥಿಗಳು 43 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದು, 4 ನಾಮಪತ್ರಗಳು ತಿರಸ್ಕೃತ, 32 ಕ್ರಮಬದ್ಧವಾಗಿವೆ. ಕೋಲಾರ ಕ್ಷೇತ್ರದಲ್ಲಿ 25 ಅಭ್ಯರ್ಥಿಗಳಿಂದ 33 ಉಮೇದುವಾರಿಕೆ ಸಲ್ಲಿಸಲಾಗಿದ್ದು, 6 ತಿರಸ್ಕೃತಗೊಂಡಿವೆ. 19 ನಾಮಪತ್ರಗಳು ಕ್ರಮಬದ್ಧವಾಗಿವೆ.