ಕೊಳವೆ ಬಾವಿ ಕೊರೆಯಲು ಪೂರ್ವಾನುಮತಿ ಕಡ್ಡಾಯ

| Published : Apr 06 2024, 12:48 AM IST

ಸಾರಾಂಶ

ಯಾರೇ ಆಗಲಿ ಯಾವುದೇ ಕೊಳವೆ ಬಾವಿ ಕೊರೆಯುವ ಪೂರ್ವದಲ್ಲಿ ಸ್ಥಳೀಯ ಆಡಳಿತದಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಯಾರೇ ಆಗಲಿ ಯಾವುದೇ ಕೊಳವೆ ಬಾವಿ ಕೊರೆಯುವ ಪೂರ್ವದಲ್ಲಿ ಸ್ಥಳೀಯ ಆಡಳಿತದಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ವಿ.ಸಿ ಹಾಲ್‌ನಲ್ಲಿ ಶುಕ್ರವಾರ ಕಂದಾಯ, ಶಾಲಾ ಶಿಕ್ಷಣ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ ಹಾಗೂ ಜಿಪಂ ಅಧಿಕಾರಿಗಳೊಂದಿಗೆ ತುರ್ತು ವಿಡಿಯೋ ಸಂವಾದ ಸಭೆ ನಡೆಸಿ ಅವರು ಮಾತನಾಡಿದರು.

ಇಂಡಿ ತಾಲೂಕಿನ ಲಚ್ಯಾಣ ತೋಟದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಮಗುವಿನ ಪ್ರಕರಣ ಭವಿಷ್ಯದಲ್ಲಿ ಮರುಕಳಿಸದಿರಲು ಗ್ರಾಮ, ಪಟ್ಟಣ ನಗರ ಯಾವುದೇ ಪ್ರದೇಶದಲ್ಲಾದರೂ ಕೊಳವೆಬಾವಿ ಕೊರೆಯವ ಮುನ್ನ ರೈತರು, ಸಾರ್ವಜನಿಕರು ಸ್ಥಳೀಯ ಆಡಳಿತದ ಅನುಮತಿ ಪಡೆಯುವುದು ಕಡ್ಡಾಯ. ಸಫಲ, ವಿಫಲವಾದ ಕೊಳವೆ ಬಾವಿಗಳನ್ನು ಸುರಕ್ಷಿತವಾಗಿ ಮುಚ್ಚುವ ವ್ಯವಸ್ಥೆಯಾಗಬೇಕು ಎಂಬುವುದರ ಕುರಿತು ಸ್ಥಳೀಯ ಆಡಳಿತಾಧಿಕಾರಿಗಳು ಸೂಚನಾ ಫಲಕಗಳಲ್ಲಿ ಅಳವಡಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.

ಒಂದು ವಾರದೊಳಗಾಗಿ ಜಿಲ್ಲೆಯಲ್ಲಿರುವ ಸರ್ಕಾರಿ ಕೊಳವೆ ಬಾವಿಗಳ ಮಾಹಿತಿ ನೀಡಬೇಕು. ಚಾಲ್ತಿಯಲ್ಲಿರುವ ಮತ್ತು ದುರಸ್ತಿಯಲ್ಲಿರುವ ಕುರಿತು ಅಂಕಿ ಸಂಖ್ಯೆಗಳ ನಿಖರವಾದ ಮಾಹಿತಿಯನ್ನು ನೀಡುವ ಕೆಲಸವಾಗಬೇಕು. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ನಿರಾಕ್ಷೇಪಣಾ ಪತ್ರ ಪಡೆಯದ ಕೊಳವೆ ಬಾವಿಗೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಬಾರದು ಎಂದು ಸೂಚಿಸಿದರು.

ಸಾಮೂಹಿಕ ನಕಲು ಮಾಡಿದ ಬಗ್ಗೆ ದೂರು:

ಗುರುವಾರ ನಡೆದ ಎಸ್‌ಎಸ್‌ಎಲ್‌ಸಿ ತೃತೀಯ ಭಾಷಾ ಪತ್ರಿಕೆಗೆ ಸಾಮೂಹಿಕ ನಕಲು ಮಾಡಲು ಅವಕಾಶ ಮಾಡಿ ಕೊಡಲಾಗಿದೆ ಎಂಬ ದೂರು ಬಂದಿದೆ. ಈ ಕುರಿತಂತೆ ಸಂಬಂಧಪಟ್ಟವರ ವಿರುದ್ಧ ಈಗಾಗಲೇ ಶಿಸ್ತು ಕ್ರಮ ಜರುಗಿಸಿದ್ದು, ಶನಿವಾರ ನಡೆಯುವ ದ್ವಿತೀಯ ಭಾಷೆ ಇಂಗ್ಲಿಷ್ ಪರೀಕ್ಷೆಗೆ ಜಿಲ್ಲೆಯ ಎಲ್ಲ 127 ಪರೀಕ್ಷಾ ಕೇಂದ್ರಗಳಿಗೂ ಚಾಲ್ತಿಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ನಕಲು ಮಾಡುವ ವಿದ್ಯಾರ್ಥಿಗಳನ್ನು ಅಮಾನತು(ಡಿಬಾರ್) ಹಾಗೂ ನಕಲು ಪೂರೈಸುವ, ಸಹಕರಿಸುವವರ ವಿರುದ್ಧ ಎಫ್‌ಐಆರ್ ಮಾಡುವ ಮೂಲಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಜರುಗಿಸಲಾಗುವುದು ಎಂದರು.

ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಕ್ಕೆ ಸಮರ್ಪಕವಾಗಿ ನೀರಿನ ಟ್ಯಾಂಕರ್‌ಗಳನ್ನು ಕಳುಹಿಸಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಲೋಕಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಸಮಿತಿಯಿಂದ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಶಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ. ಸೇರಿದಂತೆ ಇತರರು ಇದ್ದರು.

---

ಕೋಟ್‌

ಈಗಾಗಲೇ ಕೊಳವೆ ಬಾವಿಗಳ ಸುರಕ್ಷತೆ ಕುರಿತಂತೆ ಸರ್ಕಾರದ ಸುತ್ತೋಲೆ ಇದ್ದು, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕು. ಗ್ರಾಪಂ ಅಧಿಕಾರಿ, ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಸರ್ಕಾರದ ಈ ಸುತ್ತೋಲೆಯ ನಿರ್ದೇಶನಗಳನ್ನು ಪಾಲಿಸದೆ ಕರ್ತವ್ಯಲೋಪವೆಸಗಿ ಯಾವುದೇ ಅವಘಡ ಸಂಭವಿಸಿದಲ್ಲಿ ಅಂತಹ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಇಲಾಖಾ ಶಿಸ್ತುಕ್ರಮ ಜರುಗಿಸಲಾಗುವುದು.

- ಟಿ.ಭೂಬಾಲನ್‌, ಜಿಲ್ಲಾಧಿಕಾರಿ.