ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಏ. 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನವನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಆಯೋಗ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್. ನಗರ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿ ಬಿ. ಸುಪ್ರಿಯಾ ಬಣಗಾರ್ ಹೇಳಿದರು.ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ವ್ಯಾಪ್ತಿಯಲ್ಲಿ 252 ಮತಗಟ್ಟೆಗಳನ್ನು ತೆರೆಯಲಿದ್ದು, ಅಲ್ಲಿ ಚುನಾವಣಾ ಸಿಬ್ಬಂದಿ ಮತ್ತು ಮತದಾನ ಮಾಡಲು ಬರುವವರಿಗೆ ಅನುಕೂಲವಾಗುವಂತೆ ಈಗಾಗಲೇ ಎಲ್ಲ ಮೂಲಭೂತ ಸವಲತ್ತು ಒದಗಿಸಲು ಗಮನಹರಿಸಿದೆ ಎಂದರು.
ಕ್ಷೇತ್ರದಲ್ಲಿ ಒಟ್ಟು 2,18,786 ಮತದಾರರಿದ್ದು, ಈ ಪೈಕಿ ಪುರುಷರು 1,08,008 ಮತ್ತು ಮಹಿಳಾ ಮತದಾರರು 1,10,766 ರಿದ್ದು 12 ಮಂದಿ ಇತರೆ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದ ಅವರು, ಪುರುಷರಿಗಿಂತ 2,758 ಮಂದಿ ಮಹಿಳಾ ಮತದಾರರು ಹೆಚ್ಚಾಗಿ ಇರುವರೆಂದು ತಿಳಿಸಿದರು.3,270 ಮಂದಿ ವಿಶೇಷ ಚೇತನ ಮತದಾರರ ಪೈಕಿ 2,035 ಪುರುಷರು ಮತ್ತು 1,235 ಮಂದಿ ಮಹಿಳೆಯರಿದ್ದು, ಅವರು ಮತಗಟ್ಟೆಗೆ ಬಂದಾಗ ಸುಲಲಿತವಾಗಿ ಮತ ಚಲಾಯಿಸಲು ಅಗತ್ಯವಿರುವ ಅನುಕೂಲ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕೆಂದು ಅರ್ಜಿ ಸಲ್ಲಿಸಿದ್ದು, 358 ಮಂದಿಗೆ 12(ಡಿ) ನಮೂನೆ ವಿತರಣೆ ಮಾಡಲಾಗಿದೆ ಎಂದರಲ್ಲದೆ, ಚುನಾವಣಾ ಸಂಬಂಧಿತ ಯಾವುದೇ ದೂರುಗಳಿದ್ದರೂ ತಮಗೆ ನೇರವಾಗಿ (ಮೊ. 7350176999) ನಿರ್ಭೀತಿಯಿಂದ ಮಾಹಿತಿ ನೀಡಬಹುದು ಎಂದು ಪ್ರಕಟಿಸಿದರು.ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಲು 5,539 ಮಂದಿ ಯುವ ಮತದಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು, ಆ ಪೈಕಿ 3,092 ಯುವಕರು ಮತ್ತು 2,447 ಯುವತಿಯರು ಇದ್ದಾರೆ ಎಂದು ತಿಳಿಸಿದರು.
ತಹಸೀಲ್ದಾರ್ ಸಿ.ಎಸ್. ಪೂರ್ಣಿಮ ಮಾತನಾಡಿ, ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸವಲತ್ತು ಕಲ್ಪಿಸುವಂತೆ ಗ್ರಾಪಂ ಅಭಿವೃದ್ದಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಈ ಸಂಬಂಧ ನಾವುಗಳು ಸಹ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.ತಾಪಂ ಇಒ ಎಚ್.ಕೆ. ಹರೀಶ್, ಸಾಲಿಗ್ರಾಮ ತಹಸೀಲ್ದಾರ್ ಎಸ್.ಎನ್. ನರಗುಂದ್, ಸಾಲಿಗ್ರಾಮ ತಾಪಂ ಇಒ ಶಿವಕುಮಾರಿ, ಅಬಕಾರಿ ಎಸ್.ಐ ಎನ್. ಶ್ರೀನಿವಾಸಮೂರ್ತಿ, ಶಿರಸ್ತೇದಾರ್ ಅಸ್ಲಾಂಭಾಷ, ತಾಲೂಕು ಕಚೇರಿ ಸಿಬ್ಬಂದಿ ಎಂ.ಸಿ. ಸಣ್ಣಸ್ವಾಮಿ, ದೀಪಕ್, ಯಶವಂತ್, ಸಿ.ಎನ್. ಧ್ರುವಕುಮಾರ್ ಇದ್ದರು.