ಸಾರಾಂಶ
ನರಸಿಂಹರಾಜಪುರ: ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾ ಹಿನ್ನೀರಿನಲ್ಲಿ ಶಿವಮೊಗ್ಗದಿಂದ ಬಂದ 3 ಯುವಕರು ನೀರು ಪಾಲಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ನರಸಿಂಹರಾಜಪುರ: ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾ ಹಿನ್ನೀರಿನಲ್ಲಿ ಶಿವಮೊಗ್ಗದಿಂದ ಬಂದ 3 ಯುವಕರು ನೀರು ಪಾಲಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಶಿವಮೊಗ್ಗದ ವಿದ್ಯಾನಗರದವರು ಎನ್ನಲಾದ ನಾಲ್ವರು ಯುವಕರು ಬುಧವಾರ ಮಧ್ಯಾಹ್ನ 2.30 ಗಂಟೆ ಸುಮಾರಿಗೆ ತಾಲೂಕಿನ ಬೈರಾಪುರ ಗ್ರಾಮದ ಭದ್ರಾ ಹಿನ್ನೀರಿಗೆ ಬಂದಿದ್ದಾರೆ. ಅಲ್ಲಿ ಮೀನುಗಾರು ಉಕ್ಕಡ ನಿಲ್ಲಿಸಿ ಊಟಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಈ ಯುವಕರು ತಾವೇ ಉಕ್ಕಡದಲ್ಲಿ(ಮೀನು ಹಿಡಿಯಲು ಬಳಸುವ ಸಣ್ಣ ದೋಣಿ) ಕುಳಿತು ಭದ್ರಾ ಹಿನ್ನೀರಿಗೆ ಇಳಿಸಿದ್ದಾರೆ. ಆದರೆ, 4 ಯುವಕರಲ್ಲಿ ಒಬ್ಬ ಯುವಕ ಉಕ್ಕಡದಲ್ಲಿ ಹೋಗಲು ನಿರಾಕರಿಸಿ ಭದ್ರಾ ಹಿನ್ನೀರಿನ ದಡದಲ್ಲೇ ಕುಳಿತಿದ್ದನು.ಕೆಲವು ದೂರ ಹೋದ ಉಕ್ಕಡ ನೀರಿನಲ್ಲಿ ಮುಳುಗಿದೆ. ತಕ್ಷಣ ದಡದಲ್ಲಿ ಕುಳಿತಿದ್ದ ಯುವಕ ಮನೆಯವರಿಗೆ ಮಾಹಿತಿ ನೀಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ನರಸಿಂಹರಾಜಪುರ ಪೊಲೀಸರು, ಸ್ಥಳೀಯ ಮೀನು ಗಾರರು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದರು. ಭದ್ರಾವತಿ ಅಗ್ನಿಶ್ಯಾಮಕ ದಳದವರು ಸಹ ಭದ್ರಾ ಹಿನ್ನೀರಿಗೆ ಆಗಮಿಸಿದರು. ಕೆಸರು ಇರುವುದರಿಂದ ಫೈರ್ ಇಂಜಿನ್ 3 ಕಿ.ಮೀ.ದೂರ ನಿಲ್ಲಿಸಿ ಟ್ರಾಕ್ಟರ್ ನಲ್ಲಿ ಇಂಜಿನ್ ಬೋಟು, ಪಾತಾಳ ಗರಡಿಯೊಂದಿಗೆ ಭದ್ರಾ ಹಿನ್ನೀರಿಗೆ ತೆರಳಿ 8 ಗಂಟೆಯವರೆಗೂ ಜಾಲಾಡಿ ದರೂ ಯುವಕರು ಪತ್ತೆಯಾಗಿಲ್ಲ. ಕತ್ತಲೆಯಾಗಿದ್ದರಿಂದ ಬೆಳಿಗ್ಗೆ ಹುಡುಕಾಟ ನಡೆಸಲು ತೀರ್ಮಾನಿಸಿದ್ದಾರೆ. 3 ಯುವಕರು 24 ರಿಂದ 25 ವರ್ಷದವರು ಎಂದು ತಿಳಿದು ಬಂದಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.