ರಾತ್ರೋರಾತ್ರಿ 30 ಅಡಿ ಕನ್ನಡ ಧ್ವಜಸ್ತಂಭ ತೆರವು

| Published : Feb 24 2025, 12:33 AM IST

ಸಾರಾಂಶ

ಇಲ್ಲಿನ ಮುಖ್ಯರಸ್ತೆಯಲ್ಲಿನ ೩೦ಅಡಿ ಎತ್ತರದ ಕನ್ನಡ ಧ್ವಜಸ್ತಂಭದ ತೆರವು ಕಾರ್ಯಾಚರಣೆಯನ್ನು ರಾತ್ರೋರಾತ್ರಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ ನಡೆಸಲಾಗಿದ್ದು ಪಟ್ಟಣದಲ್ಲಿ ಸಾಕಷ್ಟು ಚರ್ಚೆ ಹಾಗೂ ವಿರೋಧಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಇಲ್ಲಿನ ಮುಖ್ಯರಸ್ತೆಯಲ್ಲಿನ ೩೦ಅಡಿ ಎತ್ತರದ ಕನ್ನಡ ಧ್ವಜಸ್ತಂಭದ ತೆರವು ಕಾರ್ಯಾಚರಣೆಯನ್ನು ರಾತ್ರೋರಾತ್ರಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ ನಡೆಸಲಾಗಿದ್ದು ಪಟ್ಟಣದಲ್ಲಿ ಸಾಕಷ್ಟು ಚರ್ಚೆ ಹಾಗೂ ವಿರೋಧಕ್ಕೆ ಕಾರಣವಾಗಿದೆ.

4 ವರ್ಷದ ಹಿಂದೆ ನಿರ್ಮಾಣ ಮಾಡಲಾಗಿದ್ದ ಈ ಧ್ವಜಸ್ತಂಭದಲ್ಲಿ ನಿರಂತರವಾಗಿ ಕನ್ನಡ ಧ್ವಜ ಹಾರಾಡಿಸಲಾಗುತ್ತಿತ್ತು. ಯಾವ ಕಾರಣಕ್ಕೆ ತೆರವು ಮಾಡಲಾಗಿದೆ ಎಂಬುದಕ್ಕೆ ಪೊಲೀಸರು ವಿವಿಧ ಸಬೂಬು ನೀಡಿದ್ದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಪೊಲೀಸ್ ಸಿಬ್ಬಂದಿಗಳಿಂದ ೧೦ಕಡೆ ನಾಕಾಬಂದಿ ಹಾಕಿ ಕೊರಟಗೆರೆ ಪಟ್ಟಣಕ್ಕೆ ಯಾವುದೇ ವಾಹನಗಳನ್ನು ಬೀಡದೇ ಮುಖ್ಯರಸ್ತೆಯ ವಿದ್ಯುತ್ ಸಂಪರ್ಕ ಸ್ಥಗೀತಗೊಳಿಸಿ ಕತ್ತಲೆಯಲ್ಲಿ ೨೫೦ಕ್ಕೂ ಅಧಿಕ ಪೊಲೀಸರ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಂದ ನಿರ್ಮಾಣವಾಗಿದ್ದ ಧ್ವಜಸ್ತಂಭದ ಕಾರ್ಯಚರಣೆ ವೇಳೆ ಸ್ಥಳಕ್ಕೆ ಆಗಮಿಸಿ ತೆರವು ತಡೆಯಲು ಯತ್ನಿಸಿದ ಕೊರಟಗೆರೆ ಕರವೇ ಅಧ್ಯಕ್ಷ ಕೆ.ಎನ್.ನಟರಾಜ್ ನನ್ನು ಮುಂಜಾಗ್ರತಾ ಕ್ರಮವಾಗಿ ಡಿವೈಎಸ್ಪಿ ಮಂಜುನಾಥ್ ಆದೇಶದಂತೆ ಪೊಲೀಸರು ತಡರಾತ್ರಿಯೇ ವಶಕ್ಕೆ ಪಡೆದು ನಂತರ ಮಾರನೇಯ ದಿನ ಬೆಳಿಗ್ಗೆಯೇ ಬಿಡುಗಡೆ ಮಾಡಿ ಕಳುಹಿಸಿದ್ದಾರೆ.

ಭದ್ರತೆಗಾಗಿ ೨೫೦ಪೊಲೀಸರ ನಿಯೋಜನೆ..

ಮಧುಗಿರಿ ಡಿವೈಎಸ್ಪಿ ಮಂಜುನಾಥ ಮತ್ತು ಕೊರಟಗೆರೆ ತಹಸೀಲ್ದಾರ್ ಮಂಜುನಾಥ ಕೆ ನೇತೃತ್ವದಲ್ಲಿ ಪಿಡ್ಲ್ಯೂಡಿ ಎಇಇ ಸ್ವಾಮಿ, ಪಪಂ ಮುಖ್ಯಾಧಿಕಾರಿ ಉಮೇಶ್, ಬೆಸ್ಕಾ ಎಇಇ ಪ್ರಸನ್ನಕುಮಾರ್, ಪಿಎಸೈ ಚೇತನ್, ಯೊಗೀಶ್, ರೇಣುಕಾ ಸೇರಿದಂತೆ ಮಧುಗಿರಿ, ಕೋಳಾಲ, ಪಾವಗಡದ ಸುಮಾರು ೨೫೦ಕ್ಕೂ ಅಧಿಕ ಪೊಲೀಸರು ಮತ್ತು ಪಪಂ ಸಿಬ್ಬಂದಿವರ್ಗ ರಾತ್ರಿಯಿಡಿ ಇದ್ದರು.

ಕೋಟ್ ... 1ಮುಖ್ಯ ರಸ್ತೆಯಲ್ಲಿನ ಧ್ವಜಸ್ತಂಭದಿಂದ ಇತ್ತೀಚಿಗೆ ಅಪಘಾತವಾಗಿ ಇಬ್ಬರು ಮೃತಪಟ್ಟಿದ್ದಾರೆ. ನಂತರವು ಅದೇ ಸ್ಥಳದಲ್ಲಿ ಮತ್ತೇ ಅಪಘಾತ ನಡೆದಿವೆ. ಸರಕಾರಿ ಬಸ್ ಸಂಚರಿಸಲು ಸಮಸ್ಯೆಯಾಗಿತ್ತು. ಟ್ರಾಫಿಕ್ ಸಮಸ್ಯೆ ಮತ್ತು ಅಪಘಾತ ತಪ್ಪಿಸುವ ಉದ್ದೇಶದಿಂದ ತೆರವು ಕಾರ್ಯಾಚರಣೆ ನಡೆಸಲಾಗಿದೆ.- ಮಂಜುನಾಥ. ಕೆ. ತಹಸೀಲ್ದಾರ್ , ಕೊರಟಗೆರೆಕೋಟ್‌ 2 ಪಿಡ್ಲ್ಯೂಡಿ ಎಇಇ ತೋರಿಸಿದ ಸ್ಥಳದಲ್ಲೇ ನಾವು ೪ವರ್ಷದ ಹಿಂದೆ ಧ್ವಜಸ್ತಂಭ ಮಾಡಿದ್ವಿ. ಆಗ ಅಧಿಕಾರಿವರ್ಗ ನಮ್ಮನ್ನು ತಡೆಯದೇ ಏನ್ ಮಾಡ್ತಿದ್ರು. ಅನಧಿಕೃತ ಧ್ವಜಸ್ತಂಭ ಎಂದು ಯಾರು ಹೇಳಬಾರದು. ಪಿಡ್ಲ್ಯೂಡಿ ಮತ್ತು ಪಪಂಯಿಂದ ನಮಗೆ ಅನುಮತಿ ನೀಡಿದ್ರು ನಮ್ಮ ಬಳಿ ದಾಖಲೆಗಳಿವೆ. ಕನ್ನಡ ಧ್ವಜಸ್ತಂಭದ ತೆರವಿನಿಂದ ಕನ್ನಡಪರ ಸಂಘಟನೆಗಳಿಗೆ ನೋವಾಗಿದೆ. ನಟರಾಜ್.ಕೆ.ಎನ್. ಕರವೇ ಅಧ್ಯಕ್ಷ. ಕೊರಟಗೆರೆ