ಸಾರಾಂಶ
ಶಿರಸಿ: ಸಾರಿಗೆ ಸಂಸ್ಥೆಗೆ ಶಕ್ತಿ ನೀಡಲು ರಾಜ್ಯ ಸರ್ಕಾರ 2000 ಬಸ್‌ಗಳ ಖರೀದಿಗೆ ಬಜೆಟ್‌ನಲ್ಲಿ ಅನುದಾನ ನೀಡಿದೆ. ಮೊದಲ ಹಂತದಲ್ಲಿ 300 ಬಸ್‌ಗಳನ್ನು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ನೀಡಲು ಸೂಚನೆ ನೀಡಿದ್ದೇನೆ. 2ನೇ ಹಂತದಲ್ಲಿ ಹೆಚ್ಚುವರಿಯಾಗಿ 400 ಬಸ್‌ಗಳನ್ನು ನೀಡುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಅವರು ಗುರುವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರಕನ್ನಡ ವಿಭಾಗದ ಶಿರಸಿ ಕೇಂದ್ರ ಬಸ್ ನಿಲ್ದಾಣ ಮತ್ತು ಸಾರಿಗೆ ಇಲಾಖೆಯ ಶಿರಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಶಕ್ತಿ ಯೋಜನೆ ಪ್ರಾರಂಭವಾದ ನಂತರ ೧ ಕೋಟಿಗಿಂತ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇಲ್ಲಿಯವರೆಗೆ ₹೪೨೬ ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ೪ ವರ್ಷಗಳಿಂದ ಬಸ್ ಖರೀದಿಯಾಗಿರಲಿಲ್ಲ. ಚಾಲಕ-ನಿರ್ವಾಹಕರು, ಮೆಕ್ಯಾನಿಕಲ್, ಸಿಬ್ಬಂದಿ ೨೦೧೬ರ ನಂತರ ನೇಮಕಾತಿ ಆಗಿಲ್ಲ. ನೇಮಕಾತಿಗೆ ಸರ್ಕಾರ ಒಪ್ಪಿದ್ದು, 9000 ಸಿಬ್ಬಂದಿ ನೇಮಕಾತಿ ಆಗಲಿದೆ. 30 ಐಷಾರಾಮಿ ಬಸ್ ಖರೀದಿಗೆ ಟೆಂಡರ್ ಆಗಿದೆ ಎಂದರು.
ಶಿರಸಿ-ಸಿದ್ದಾಪುರ ತಾಲೂಕಿಗೆ ಶಿರಸಿಯಲ್ಲಿ ಮಾತ್ರ ಘಟಕವಿದ್ದು, ಇಲ್ಲಿಂದಲೇ ಬಸ್‌ಗಳು ೨೬ ಕಿ.ಮೀ ತೆರಳಬೇಕಾಗಿದೆ. ಸಿದ್ದಾಪುರದಲ್ಲಿಯೂ ಘಟಕ ಸ್ಥಾಪಿಸಲು ಕ್ರಮ ವಹಿಸಲಾಗುತ್ತದೆ ಎಂದರು.
ಸಚಿವ ಮಂಕಾಳ ವೈದ್ಯ ಮಾತನಾಡಿ, ಈಗ ಶೇ.೯೦ ಹಳ್ಳಿಗಳಿಗೆ ಬಸ್ ಸೌಲಭ್ಯ ತಲುಪಿದೆ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ನೀಡಿ, ರಾಜ್ಯವನ್ನು ದಿವಾಳಿ ಮಾಡಿದೆ ಎಂದು ವಿರೋಧ ಪಕ್ಷದವರು ಹೇಳಿದ್ದರು. ಆದರೆ ಗ್ಯಾರಂಟಿ ಜತೆ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದರು.
ವಾಕರಸಾಸಂ ಅಧ್ಯಕ್ಷ, ಶಾಸಕ ರಾಜು ಭರಮಗೌಡ ಕಾಗೆ ಮಾತನಾಡಿ, ಹಳೆಯ ಬಸ್ ನಿಲ್ದಾಣಗಳನ್ನು ಹೊಸ ಬಸ್ ನಿಲ್ದಾಣವನ್ನಾಗಿ ನಿರ್ಮಾಣ ಮಾಡುತ್ತಿದ್ದೇವೆ. ಸಿಬ್ಬಂದಿ ಕರ್ತದಲ್ಲಿದ್ದ ವೇಳೆ ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟರೆ ಪರಿಹಾರವನ್ನು ₹50 ಲಕ್ಷದಿಂದ ₹1 ಕೋಟಿಗೆ ಏರಿಸಿದ್ದೇವೆ ಎಂದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ ಉಪಸ್ಥಿತರಿದ್ದರು.
ಶಾಸಕ ಶಿವರಾಮ ಹೆಬ್ಬಾರ, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಯೋಗೀಶ.ಎ.ಎಂ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಎಸಿ ಕೆ.ವಿ. ಕಾವ್ಯಾರಾಣಿ, ಮಾಜಿ ಶಾಸಕ ವಿ.ಎಸ್.ಪಾಟೀಲ, ನಗರಸಭೆ ಸದಸ್ಯರಾದ ಪ್ರದೀಪ ಶೆಟ್ಟಿ, ಮಧುಕರ ಬಿಲ್ಲವ, ವೀಣಾ ಶೆಟ್ಟಿ, ಖಾದರ ಆನವಟ್ಟಿ ಇದ್ದರು. ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಮತ್ತು ಬೆಳಗಾವಿ ವಿಭಾಗದ ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಎಂ.ಪಿ.ಓಂಕಾರೇಶ್ವರಿ ಪ್ರಾಸ್ತಾವಿಕ ಮಾತನಾಡಿದರು. ಕೇಂದ್ರ ಕಚೇರಿಯ ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ಸ್ವಾಗತಿಸಿದರು. ಭೋಜರಾಜ ಶಿರಾಲಿ ನಾಡಗೀತೆ ಹಾಡಿದರು.
ಬಿಜೆಪಿಯವರು ಸುಳ್ಳು ಹೇಳುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಲಿ. ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗೆ ₹1000 ಕೋಟಿ ಕುಡಿಯುವ ನೀರಿಗೆ ಹಣ ಮಂಜೂರಿಯಾಗಿ ಟೆಂಡರ್ ಆಗಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ.
ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ಸಂಸ್ಥೆಯಲ್ಲಿ ₹5900 ಕೋಟಿ ಸಾಲ ಮಾಡಿತ್ತು. ಅದನ್ನು ನಾವು ಮರುಪಾವತಿ ಮಾಡುತ್ತಿದ್ದೇವೆ. ಸಂಸ್ಥೆಯ ಪುನಶ್ಚೇತನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹2000 ಕೋಟಿ ಸರ್ಕಾರದ ಮೂಲಕ ಸಾಲ ನೀಡಿದ್ದಾರೆ. ಸಿಬ್ಬಂದಿ ನೇಮಕಾತಿ ಆದ ನಂತರ ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಸಿಬ್ಬಂದಿ ನೀಡಲು ಪ್ರಾಶಸ್ತ್ಯ ವಹಿಸುತ್ತೇನೆ ಎನ್ನುತ್ತಾರೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ.