ಮಹಿಳಾ ಸಬಲೀಕರಣಕ್ಕೆ ಪೂರಕ ನೀತಿಗಳ ಜಾರಿಗೆ ಯತ್ನ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್

| N/A | Published : Mar 29 2025, 01:49 AM IST / Updated: Mar 29 2025, 04:18 AM IST

Shalini Rajaneesh

ಸಾರಾಂಶ

ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಸಬಲೀಕರಣಕ್ಕಾಗಿ ಪೂರಕವಾಗಿ ನೀತಿಗಳ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.

 ಬೆಂಗಳೂರು : ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಸಬಲೀಕರಣಕ್ಕಾಗಿ ಪೂರಕವಾಗಿ ನೀತಿಗಳ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ. ನಗರದ ಬಾಲ ಭವನದಲ್ಲಿ ಶುಕ್ರವಾರ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಸರ್ಕಾರಿ ನೌಕರರಲ್ಲಿ ಅರ್ಧದಷ್ಟು ಮಹಿಳೆಯರಿದ್ದು, ಆಡಳಿತ ನಿರ್ವಹಣೆಯಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳಾ ಉದ್ಯೋಗಿಗಳ ಪರವಾದ ನೀತಿಗಳನ್ನು ತರಲು ಹಾಗೂ ಸಬಲೀಕರಣಕ್ಕಾಗಿ ಪ್ರಯತ್ನಿಸುತ್ತೇನೆ. ನಾನು ಮಹಿಳಾ ಉದ್ಯೋಗಿಗಳ ಪರವಾಗಿರುತ್ತೇನೆ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರವೇಶಿಸಬೇಕು ಎಂದು ಕರೆ ನೀಡಿದರು.

ಸಂಘದ ಅಧ್ಯಕ್ಷೆ ರೋಶನಿ ಗೌಡ ಮಾತನಾಡಿ, ಬಾಲ ಭವನ ಆವರಣದಲ್ಲಿ ಸಂಘದ ಕಚೇರಿ ಸ್ಥಾಪನೆಗೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ.ವೈಷ್ಣವಿ ಅವರ ಕೊಡುಗೆ ಇದೆ. ಮನವಿ ಮಾಡಿದ ಕೂಡಲೇ ಸ್ಪಂದಿಸಿದರು. ನಮ್ಮ ಸಂಘದ ಖರ್ಚಿಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕಚೇರಿ ಪಡೆಯಲು ನೆರವಾಗಿದ್ದಾರೆ ಎಂದರು.

ಸಂಘದ ಪ್ರಯತ್ನದ ಫಲವಾಗಿ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 1 ರಂತೆ ವರ್ಷಕ್ಕೆ 12 ಮುಟ್ಟಿನ ರಜೆ ಮಂಜೂರಾತಿಗಾಗಿ ಕರ್ನಾಟಕ ಕಾನೂನು ಆಯೋಗ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ಮಹಿಳೆಯರು ಸಂಘಟಿತರಾಗಬೇಕು. ಸಮಾಜದಲ್ಲಿ ಇನ್ನೂ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಲು ಅವಕಾಶವಿದ್ದು, ಬಳಸಿಕೊಳ್ಳಲು ಮುಖ್ಯವಾಹಿನಿಗೆ ಬರಬೇಕು ಎಂದು ರೋಶನಿ ಗೌಡ ಹೇಳಿದರು.ಇದೇ ವೇಳೆ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಕಾನೂನು ಆಯೋಗದ ಸದಸ್ಯ ನ್ಯಾ.ಅಶೋಕ್ ಜಿ.ನಿಜಗಣ್ಣವರ, ವಿಧಾನ ಪರಿಷತ್ ಸದಸ್ಯ ಶರವಣ, ಬಲ್ಕಿಸ್ ಬಾನು, ಹೇಮಲತಾ, ಪುಟ್ಟಣ್ಣ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಇದ್ದರು.