32000 ಕೋಟಿ ರು. ಬಾಕಿ ಕೊಡಿ: ಗುತ್ತಿಗೆದಾರರ ಒತ್ತಾಯ

| Published : Jan 14 2025, 01:02 AM IST

ಸಾರಾಂಶ

ಸರ್ಕಾರದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಾಕಿ ಬರಬೇಕಿರುವ ಸುಮಾರು 32000 ಕೋಟಿ ರು.ಗಳನ್ನು 8 ದಿನದೊಳಗೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ 8 ಸಚಿವರಿಗೆ ಪತ್ರ ಬರೆದಿದ್ದೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸರ್ಕಾರದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಾಕಿ ಬರಬೇಕಿರುವ ಸುಮಾರು 32000 ಕೋಟಿ ರು.ಗಳನ್ನು 8 ದಿನದೊಳಗೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ 8 ಸಚಿವರಿಗೆ ಪತ್ರ ಬರೆದಿದ್ದೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ತಿಳಿಸಿದ್ದಾರೆ. ಅಲ್ಲದೆ, ಸಚಿವರಿಂದ ಸ್ಪಂದನೆ ಸಿಗದಿದ್ದರೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇವೆ. ಸಿಎಂರಿಂದಲೂ ಸ್ಪಂದನೆ ಸಿಗದಿದ್ದಲ್ಲಿ ಪ್ರಧಾನಿಗೆ ಪತ್ರ ಬರೆಯುತ್ತೇವೆ. ಅವರಿಂದಲೂ ಸ್ಪಂದನ ಸಿಗದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ ಸೋಮವಾರ ‘ಕನ್ನಡಪ್ರಭ’ ಜೊತೆ ಮಾತನಾಡಿದ ಶೇಗಜಿ, ನಾವು ಕೆಲಸ ಮಾಡಿದ್ದೇವೆ, ಹಣ ಬರಬೇಕಿದೆ. ಈ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ 4 ದಿನಗಳ ಹಿಂದಷ್ಟೇ ನಾವು ಸಚಿವರಿಗೆ ಪತ್ರ ಬರೆದಿದ್ದೇವೆ. ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವರಾದ ಪ್ರಿಯಾಂಕ್‌ ಖರ್ಗೆ, ಜಮೀರ್ ಅಹಮದ್‌ ಖಾನ್‌, ಬೋಸ ರಾಜ್, ದಿನೇಶ್‌ ಗುಂಡೂರಾವ್‌, ಎಚ್‌.ಸಿ.ಮಹದೇವಪ್ಪ, ರಹೀಂಖಾನ್‌ಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.

ನಾವು ಕೆಲಸ ಮಾಡಿ ಮುಗಿಸಿರುವ ಕಾಮಗಾರಿಗಳ ಹಣ 32 ಸಾವಿರ ಕೋಟಿ ರು. ಬಾಕಿ ಇದೆ. ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಈಚೆಗೆ ಬೆಂಗಳೂರಲ್ಲಿ ಸೇರಿದ್ದ ಸಭೆಯಲ್ಲಿ ಎಲ್ಲಾ 30 ಜಿಲ್ಲೆಗಳ ಗುತ್ತಿಗೆದಾರರ ಸಂಘಗಳಿಂದ ದೂರು ಬಂದಿದೆ. ಇದನ್ನಾಧರಿಸಿಯೇ ಪತ್ರ ಬರೆದಿದ್ದೇವೆ ಎಂದರು.

ಕಾಮಗಾರಿ ಮಾಡಿ ಮುಗಿಸಿದ ದಿನಾಂಕ ಆಧರಿಸಿ ಹಿರಿತನದ ಆಧಾರದ ಮೇಲೆ ಬಾಕಿ ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳನ್ನು ಕೇಳಿದರೆ ಅವರು ಸಚಿವರ ಕಡೆ ಬೆರಳು ಮಾಡುತ್ತಿದ್ದಾರೆ. ಅಧಿಕಾರಿಗಳು ಸಚಿವರ ಕಡೆ ಬೆರಳು ತೋರಿಸುತ್ತಿರುವುದು ಯಾಕೆ?. ಇದರ ರಹಸ್ಯವೇನು?. ಸಚಿವರು ಪ್ರಾಮಾಣಿಕರಾಗಿದ್ದರೆ ಅವರೇ ಅಧಿಕಾರಿಗಳಿಗೆ ಈ ಬಗ್ಗೆ ಕೇಳಲಿ ಎಂದರು.

ನಾವು ಹೆಂಡತಿ, ಮಕ್ಕಳ ಮೈಮೇಲಿನ ಒಡವೆಗಳನ್ನು ಮಾರಾಟ ಮಾಡಿ ಕಾಂಟ್ರಾಕ್ಟ್ ಕೆಲಸ ಮಾಡಿದ್ದೇವೆ. ಇವರು ಹಣವನ್ನೇ ಬಿಡುಗಡೆ ಮಾಡದಿದ್ದರೆ ನಮ್ಮ ಗತಿಯೇನು?. ಸಣ್ಣ ಕುಟುಂಬದಿಂದ ಬಂದ ಅನೇಕರು ಕೂಡ ಗುತ್ತಿಗೆದಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಣ ಬಿಡುಗಡೆಯಾಗದೆ ಬಾಕಿ ಉಳಿದರೆ ಅವರೇನು ಮಾಡಬೇಕು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.