ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ: ವ್ಯಕ್ತಿಯೊಬ್ಬ ತನ್ನ ಸ್ವಂತ ಜಮೀನಿನಲ್ಲಿ ಬೆಳೆದಿದ್ದ ₹ 33.25 ಲಕ್ಷ ಮೊತ್ತದ 133 ಕೆಜಿ ಗಾಂಜಾವನ್ನು ಸಿಂದಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಬಂಟನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಅದೇ ಗ್ರಾಮದ ಬಸವರಾಜ್ ಬಾಳಪ್ಪ ಪೂಜಾರಿ ಎಂಬಾತ ತನ್ನ ಸ್ವಂತ ಜಮೀನಿನಲ್ಲಿ ಅಕ್ರಮವಾಗಿ 133 ಕೆಜಿಯಷ್ಟು ಗಾಂಜಾ ಬೆಳೆಯನ್ನು ಬೆಳೆದಿದ್ದ. ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಪೊಲೀಸರು ಇಂಡಿ ಡಿವೈಎಸ್ಪಿ ಜಗದೀಶ.ಎಚ್.ಎಸ್ ಅವರ ಮಾರ್ಗದರ್ಶನದಲ್ಲಿ ಸಿಂದಗಿ ಆರಕ್ಷಕ ವೃತ್ತ ನಿರೀಕ್ಷಕ ನಾನಾಗೌಡ ಪೊಲೀಸಪಾಟೀಲ ಹಾಗೂ ಸಿಂದಗಿ ಠಾಣೆಯ ಆರಕ್ಷಕ ಆರಿಫ್ ಮುಶಾಪುರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಂದಗಿ ಪೊಲೀಸ್ ಠಾಣೆ ಸಿಬ್ಬಂದಿ ಸುರೇಶ್ ಕೊಂಡಿ, ಭಗವಂತ ಮುಳಸಾವಳಗಿ, ಬಿ.ಪಿ.ಜೋಗಿ, ಡಿ.ಎಲ್.ಪೂಜಾರಿ, ಜಟ್ಟೆಪ್ಪ ದೊಡಮನಿ ಸೇರಿದಂತೆ ಇತರರು ಭಾಗವಹಿಸಿದ್ದರು. ಈ ಬಗ್ಗೆ ಸಿಂದಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.