ಚಾರ್ಮಾಡಿ ಘಾಟಿ ಹೆದ್ದಾರಿ ದ್ವಿಪಥಕ್ಕೆ 343.74 ಕೋಟಿ ರು. ಬಿಡುಗಡೆ

| Published : Nov 10 2024, 01:37 AM IST

ಸಾರಾಂಶ

ಚಾರ್ಮಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು 343.74 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಚಾರ್ಮಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು 343.74 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.

ಮಂಗಳೂರಿನಿಂದ ಮೂಡಿಗೆರೆಯಾಗಿ ತುಮಕೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟಿಯಲ್ಲಿ 75 ಕಿ.ಮೀ.ನಿಂದ 86.20 ಕಿ.ಮೀ. ಅಂತರದವರೆಗೆ ಅಭಿವೃದ್ಧಿ ಕಾರ್ಯ ನಡೆಯಲಿದೆ. ಆ ಮೂಲಕ ಚಾರ್ಮಾಡಿ ಘಾಟ್ ಪ್ರದೇಶದ ರಸ್ತೆಯು ದ್ವಿಪಥವಾಗಿ ಅಗಲೀಕರಣಗೊಳ್ಳಲಿದೆ. ಈ ಹೆದ್ದಾರಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದ್ದಾರೆ.

ರಾಜ್ಯದ ಪ್ರಮುಖ ಹೆದ್ದಾರಿಯಾದ ಚಾರ್ಮಾಡಿ ಘಾಟ್‌ನ್ನು ಮೇಲ್ದರ್ಜೆಗೇರಿಸುವುದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸುಗಮ ಸರಕು ಸಾಗಾಟದೊಂದಿಗೆ ಈ ಭಾಗದ ವ್ಯಾಪಾರ-ವಹಿವಾಟು ಕೂಡ ವೃದ್ಧಿಸಲಿದೆ. ಆ ಮೂಲಕ, ಕರ್ನಾಟಕದ ವಾಣಿಜ್ಯ ಹೆಬ್ಬಾಗಿಲು ಎಂದು ಗುರುತಿಸಿಕೊಂಡಿರುವ ಕರಾವಳಿ ಮತ್ತಷ್ಟು ಪ್ರಗತಿ ಪಥದಲ್ಲಿ ಮುನ್ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಕೊನೆಗೂ ಈಡೇರಿದ ಬೇಡಿಕೆ:

ತೀರ ಅಗಲ ಕಿರಿದಾಗಿರುವ ಚಾರ್ಮಾಡಿ ಘಾಟಿ ರಸ್ತೆಯ ಅಭಿವೃದ್ಧಿ ಬೇಡಿಕೆ ಇಂದು ನಿನ್ನೆಯದಲ್ಲ. ದಶಕಗಳಿಂದ ಈ ರಸ್ತೆ ಅಗಲೀಕರಣ ಆಗಬೇಕು ಎನ್ನುವ ಬೇಡಿಕೆ ಇತ್ತು. ಇದೀಗ ಅದು ಸಾಕಾರವಾಗುವ ಹಂತ ತಲುಪಿದೆ.

ಪ್ರತಿ ಮಳೆಗಾಲದಲ್ಲಿ ಶಿರಾಡಿ ಘಾಟಿಯಲ್ಲಿ ಭೂಕುಸಿತದಿಂದ ವಾಹನ ಸಂಚಾರ ಅಸ್ತವ್ಯಸ್ತವಾಗುವುದು ನಡೆಯುತ್ತಲೇ ಇರುತ್ತದೆ. ಆಗ ವಾಹನಗಳು ಸಂಚರಿಸಲು ಅವಲಂಬಿಸುವುದು ಚಾರ್ಮಾಡಿ ರಸ್ತೆಯನ್ನು. ಐದಾರು ವರ್ಷಗಳ ಹಿಂದೆ ಮಳೆಗಾಲದಲ್ಲಿ ಏಕಕಾಲದಲ್ಲಿ ಶಿರಾಡಿ ರಸ್ತೆಯ ಜತೆಗೆ ಚಾರ್ಮಾಡಿಯಲ್ಲೂ ಭಾರೀ ಭೂಕುಸಿತ ಉಂಟಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅತ್ತ ರೈಲು ಮಾರ್ಗದಲ್ಲೂ ವ್ಯಾಪಕ ಭೂಕುಸಿತವಾಗಿ ಕರಾವಳಿಗೆ ಹೊರಗಿನ ಸಂಪರ್ಕ ಬಹುತೇಕ ಬಂದ್‌ ಆಗಿ ಜನರು ದಿನಗಟ್ಟಲೆ ಪರದಾಟ ನಡೆಸುವಂತಾಗಿತ್ತು. ಮಾತ್ರವಲ್ಲದೆ, ವ್ಯಾಪಾರ ವಹಿವಾಟಿಗೂ ತೀವ್ರ ಧಕ್ಕೆಯಾಗಿತ್ತು. ಚಾರ್ಮಾಡಿ ರಸ್ತೆ ಅಗಲೀಕರಣ ಮಾಡಬೇಕೆಂಬ ಕೂಗಿಗೆ ಆಗ ಮತ್ತಷ್ಟು ಪುಷ್ಟಿ ಸಿಕ್ಕಿತ್ತು.

ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳಿಗೆ ಬರುವ ಪ್ರವಾಸಿಗರು ಕೂಡ ಚಾರ್ಮಾಡಿ ಮಾರ್ಗವನ್ನು ಅವಲಂಬಿಸಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ಮಾರ್ಗ ಅಭಿವೃದ್ಧಿಯ ಬೇಡಿಕೆ ಹೆಚ್ಚಿತ್ತು.