ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಚಾತುರ್ಮಾಸ ಆಚರಣೆ ಹಿನ್ನೆಲೆ ಪ.ಪೂ. ಚರ್ಯಾ ಶಿರೋಮಣಿ ಆಚಾರ್ಯ ಶ್ರೀ 108 ವಿಶುದ್ಧಸಾಗರಜಿ ಮಹಾರಾಜರ ಸಂಘ ಜು.14ರಂದು ಬೆಳಗ್ಗೆ 7.25ಕ್ಕೆ ಕೊಲ್ಲಾಪುರ ಜಿಲ್ಲೆಯ ನಾಂದಣಿಯಲ್ಲಿ ಭವ್ಯ ಮಂಗಲ ಪ್ರವೇಶ ಹಮ್ಮಿಕೊಂಡಿದೆ ಎಂದು ಚಾತುರ್ಮಾಸ ಸಮಿತಿ ಸಂಚಾಲಕ ಅರುಣಕುಮಾರ ಯಲಗುದ್ರಿ ತಿಳಿಸಿದರು.ಗುರುವಾರ ಐನಾಪುರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚರ್ಯಾ ಶಿರೋಮಣಿ ಆಚಾರ್ಯ ಶ್ರೀ 108 ಮುನಿಮಹಾರಾಜರು 26 ತ್ಯಾಗಿಗಳೊಂದಿಗೆ ಈ ವರ್ಷದ 35ನೇ ಪಾವನ ಚಾತುರ್ಮಾಸ ಆಚರಿಸಲಿದ್ದಾರೆ. ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಒಟ್ಟು 743 ಗ್ರಾಮ ಒಳಗೊಂಡ ಅತ್ಯಂತ ಪುರಾತನ ಧರ್ಮ ಪೀಠ ನಾಂದಣಿಯಲ್ಲಿ ಈ ಪಾವನ ಚಾತುರ್ಮಾಸ ನಡೆಯಲಿದೆ ಎಂದರು.
ಜಿನಸೇನ ಸಂಸ್ಥಾನ ಮಠದ ಸೇವಾದಳ, ವೀರ ಮಹಿಳಾ ಮಂಡಳ ಹಾಗೂ ನಾಂದಣಿಯ ಸಕಲ ಜೈನ ಸಮಾಜ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಜು.14ರಂದು ಬೆಳಗ್ಗೆ ಭವ್ಯ ಮಂಗಲ ಪ್ರವೇಶ ಆಗಲಿದೆ. ಜು.20ರಂದು ಮಧ್ಯಾಹ್ನ 1 ಗಂಟೆಗೆ ಅತಿಶಯ ಕ್ಷೇತ್ರ ನಾಂದಣಿಯಲ್ಲಿ ಚಾತುರ್ಮಾಸದ ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ನಂತರ ಕಲಶಗಳ ವಿತರಣೆ ನಡೆಯಲಿದೆ.ಸಾಂಗಲಿ, ಕೊಲ್ಲಾಪುರ, ಕರ್ನಾಟಕದ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ ಜಿಲೆಯ ಸಹಸ್ರಾರು ಶ್ರಾವಕ, ಶ್ರಾವಕಿಯರು ಮಂಗಲ ಪ್ರವೇಶ ಹಾಗೂ ಆಧ್ಯಾತ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಯಲಗುದ್ರಿ ಅವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗೊಳಿಸಲಾಯಿತು. ಚಾತುರ್ಮಾಸ ಸಮಿತಿಯ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ.ಅಪ್ಪಾಸಾಹೇಬ ನಾಡಗೌಡ, ಸಂಚಾಲಕರಾದ ಅರುಣಕುಮಾರ ಯಲಗುದ್ರಿ, ರಾವಸಾಹೇಬ ಪಾಟೀಲ, ಸಂಜಯ ಕುಚನೂರೆ, ದಾದಾ ಪಾಟೀಲ, ಸುಭಾಸ ಪಾಟೀಲ, ಚನರಾವ್ ಪಾಟೀಲ, ಯಶವಂತ ಪಾಟೀಲ, ಅನುಪ ಶೆಟ್ಟಿ, ತಾತ್ಯಾಸಾಬ ಕುಚನೂರೆ, ಅಜೀತ ಪಾಟೀಲ, ಸುನೀಲ ಪಾಟೀಲ, ಧರೆಪ್ಪ ಕೆಂಪವಾಡೆ, ತಾತ್ಯಾಸಾಬ ದಾನೊಳ್ಳಿ, ಬಾಳಾಸಾಬ ದಾನೊಳ್ಳಿ, ಸೇರಿದಂತೆ ಅನೇಕ ಮುಖಂಡರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.ಶ್ರೀಗಳ ಪರಿಚಯ:
ಚಾರ್ಯ ಶಿರೋಮಣಿ ಪ.ಪೂ.108 ಆಚಾರ್ಯ ಶ್ರೀ ವಿಶುದ್ಧಸಾಗರಜಿ ಮಹಾರಾಜರು ಜೈನ ಧರ್ಮ ಮತ್ತು ಅಧ್ಯಾತ್ಮಿಕತೆಯ ಪ್ರಖಾಂಡ ಪಂಡಿತರು, ಜೈನ ಸಾಹಿತ್ಯದ ಆಳವಾದ ಚಿಂತಕರು. ಎಲ್ಲ ನಾಲ್ಕು ಅನುಯೋಗದ ಆಳವಾದ ಅಧ್ಯಯನ ಮಾಡಿದ್ದಾರೆ.1971ರಲ್ಲಿ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ರೂಟ್ ಗ್ರಾಮದಲ್ಲಿ ಜನಿಸಿದ ಮುನಿಗಳು, ತಮ್ಮ 17ನೇ ವಯಸ್ಸಿನಲ್ಲಿ ಪ್ರಮುಖ ಯಾತ್ರಾಸ್ಥಳ ಬಾರಾಜಿಯಲ್ಲಿ ಬ್ರಹ್ಮಚರ್ಯದ ವೃತ ಸ್ವೀಕರಿಸಿದರು. 1989ರ ಅಕ್ಟೋಬರ್ 11ರಂದು ಭಿಂಡ್‌ನಲ್ಲಿ ಕ್ಷುಲ್ಲಕ ದೀಕ್ಷೆ ಪಡೆದ ಅವರಿಗೆ ಪ.ಪೂ. ಯಶೋಧರ ಸಾಗರ ಮಹಾರಾಜರು ಎಂದು ನಾಮಕರಣ ಮಾಡಲಾಯಿತು. 1991ರಲ್ಲಿ ಐಲಕ ದೀಕ್ಷೆಯನ್ನು ಪನ್ನಾದಲ್ಲಿ ಪಡೆದ ಶ್ರೀಗಳು, ಮಧ್ಯಪ್ರದೇಶದ ಶ್ರೇಯಾಂಶಗಿರಿಯಲ್ಲಿ ಗಣಾಚಾರ್ಯ ಆಚಾರ್ಯ ಶ್ರೀ 108 ವೀರಸಾಗರಜಿ ಮುನಿ ಮಹಾರಾಜರಿಂದ ಮುನಿ ದೀಕ್ಷೆ ತೆಗೆದುಕೊಂಡು ಪ.ಪೂ.108 ವಿಶುದ್ಧಸಾಗರ ಮುನಿ ಮಹಾರಾಜರು ಆದರು. ಆಚಾರ್ಯ ಶ್ರೀಗಳು ಇದುವರೆಗೂ ಸುಮಾರು 1,25,000 ಕಿ.ಮೀ ಕಾಲ್ನಡಿಗೆಯಲ್ಲಿ ವಿಹಾರ ಮಾಡಿರುವುದು ವಿಶೇಷ. ಸುಮಾರು 250ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದು, ಸುಮಾರು 5000 ನೀತಿ ಕಾವ್ಯಗಳನ್ನು ಬರೆದಿದ್ದಾರೆ. ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಸಂಸ್ಥಾನ ಮಠ(ಕರವೀರ)ದ ವತಿಯಿಂದ ಪ್ರಥಮ ಬಾರಿಗೆ ಬೃಹತ್ ಚಾತುರ್ಮಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಪ.ಪೂ. ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಈ ಮಂಗಲ ಚಾತುರ್ಮಾಸ ಅದ್ಧೂರಿಯಾಗಿ ನಡೆಯಲಿದ್ದು, ಆಚಾರ್ಯ ಶ್ರೀಗಳ ಪರಿಣಾಮಕಾರಿ ಪ್ರವಚನ ವಾಣಿಯಿಂದ ಈ ಭಾಗದ ಶ್ರಾವಕ ಶ್ರಾವಕಿಯರು ಆಧ್ಯಾತ್ಮಿಕ ಔತಣ ಸವಿಯುವ ಭಾಗ್ಯ ಒದಗಿಬಂದಿದೆ.
-ಅರುಣಕುಮಾರ ಯಲಗುದ್ರಿ, ಚಾತುರ್ಮಾಸ ಸಮಿತಿ ಸಂಚಾಲಕ, ಕನ್ನಡಪ್ರಭ ಮತ್ತು ಸುವರ್ಣ ನ್ಯೂಜ್ ನ ಎಮಿನೆಂಟ್ ಇಂಜಿನಿಯರ್ 2023 ಅವಾರ್ಡ್ ಪುರಸ್ಕೃತರು