ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆಯ ಬಳಿ ಬಹು ದಿನಗಳಿಂದ ನಡೆಯುತ್ತಿದ್ದ ಉತ್ಖನನ ಕಾರ್ಯ ಗುರುವಾರ ಮುಕ್ತಾಯಗೊಳಿಸುವ ಸಂದರ್ಭದಲ್ಲಿ ಮೂರನೇ ಅಸ್ಥಿಪಂಜರ ಪತ್ತೆಯಾಗಿದೆ.

ಮಾನವನ ಎರಡು ಅಸ್ಥಿಪಂಜರ ದೊರೆತ ಸ್ಥಳದಲ್ಲಿನ ಎಲ್ಲ ಮೂಳೆಗಳನ್ನು ಬಹು ಸೂಕ್ಷ್ಮವಾಗಿ ತೆಗೆದು ಸುರಕ್ಷಿತವಾಗಿ ಇಡಲಾಯಿತು. ನಂತರ ಮಡಿಕೆಗಳನ್ನು ಹೊರತೆಗೆದು ಆಧುನಿಕ ತಂತ್ರಜ್ಞಾನ ಬಳಸಿ ವೈಜ್ಞಾನಿಕ ಅಧ್ಯಯನಕ್ಕೆ ತೆಗೆದಿಡುವ ಕಾರ್ಯ ಆಯಿತು.

ಇದೇ ಸಂದರ್ಭದಲ್ಲಿ ಮೂರನೇ ನೆಲೆಯಲ್ಲಿ ಕಂಡು ಬಂದು ಚಿಕ್ಕ ಗಾತ್ರದ ಮಡಿಕೆ ಹೊರತೆಗೆದ ನಂತರ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ಅವರಿಗೆ ಅದರ ತಳಭಾಗದಲ್ಲಿ ಮಾನವನ ತಲೆಬುರುಡೆ ಗೋಚರಿಸಿದೆ. ಉತ್ಖನನ ಕಾರ್ಯ ಮುಂದುವರೆಸಿದಾಗ ಬುರುಡೆಯ ತಳಭಾಗದಲ್ಲಿ ಮತ್ತೊಂದು ಮಡಿಕೆ ಇರುವುದು ಹಾಗೂ ಬುರಡೆಗೆ ಅಂಟಿಕೊಂಡು ಭುಜದ ಭಾಗಗಳು ಗೋಚರಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ ನಮಿತಾ, ಅಮೆರಿಕದಲ್ಲಿ ಸೆಮಿಸ್ಟರ್ ತರಗತಿಗಳು ಆರಂಭಗೊಂಡಿರುವುದರಿಂದ ತಾವು ನಿರ್ಗಮಿಸುತ್ತಿದ್ದು, ಸಂಪೂರ್ಣ ಅಸ್ಥಿಪಂಜರ ತೆಗೆಯುವ ಕಾರ್ಯ ಮಾಡದೇ ಹಾಗೆಯೇ ಮುಚ್ಚಲಾಗುವುದು ಎಂದರು.

ಭವಿಷ್ಯದಲ್ಲಿ ಯಾರಾದರೂ ಆಸಕ್ತರು ಉತ್ಖನನ ಕಾರ್ಯ ಮುಂದುವರೆಸಿದಲ್ಲಿ ಅವರಿಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.


ಇಲ್ಲಿ ದೊರೆತ ಪ್ರಾಚ್ಯವಸ್ತುಗಳಲ್ಲಿ ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಾನವನ ಆಸ್ಥಿಪಂಜರವನ್ನು ಕಾರ್ಬನ್ ಡೇಟಿಂಗ್ ಗೆ ಕಳುಹಿಸಿ ನಿಖರ ಮಾಹಿತಿ ಪಡೆಯಲಾಗುವುದು ಎಂದು ಉತ್ಖನನ ಕಾರ್ಯದ ನಿರ್ದೇಶಕ ಹಾಗೂ ಹಂಪಿ, ಕಮಲಾಪುರದ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ.ಆರ್.ಶೇಜೇಶ್ವರ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ''''ಬೂದಿದಿಬ್ಬ'''' ಸೇರಿದಂತೆ ಇಲ್ಲಿನ ಪ್ರಾಗೈತಿಹಾಸಿಕ ನೆಲೆಗಳನ್ನು ಸಂರಕ್ಷಿತ ಪ್ರದೇಶವಾಗಿ ಘೋಷಿಸಲು ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಉತ್ಖನನ ತಂಡದಲ್ಲಿ ಪಂಜಾಬ್‌ನ ಮೊಹಾಲಿಯ ಐಐಎಸ್‌ಇಆರ್ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಪ್ರಾಂಜಲ್ ದುಬೆ, ಸಂಶೋಧನಾರ್ಥಿ ಅಶೋಕ ವಿ. ಅಬಕಾರಿ, ಮಧ್ಯಪ್ರದೇಶದ ಸಾಗರದ ಡಾ. ಹರಿಸಿಂಗ್ ವಿಶ್ವವಿದ್ಯಾಲಯದ ಕಾವ್ಯ, ಗುಜರಾತ್ ವಡೋದರಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಮಧುರ ತಂಡದಲ್ಲಿದ್ದರು.