ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ೪.೫ ಕೋಟಿ ರು. ವೆಚ್ಚದಲ್ಲಿ ರೈತ ಸಭಾಂಗಣ ನವೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸುವ ಮೂಲಕ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಸೆಡ್ಡು ಹೊಡೆದಿದ್ದಾರೆ.
ಶುಕ್ರವಾರದಿಂದ ಮಂಡ್ಯದಲ್ಲಿ ನಡೆಯುತ್ತಿರುವ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಎಚ್.ಡಿ.ಕುಮಾರಸ್ವಾಮಿ ಅವರು ಸದ್ದಿಲ್ಲದೆ ರೈತಸಭಾಂಗಣ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.ನಗರದ ಪಾರಂಪರಿಕ ಕಟ್ಟಡ ಎನಿಸಿರುವ ರೈತಸಭಾಂಗಣವನ್ನು ೧ ಕೋಟಿ ರು. ವೆಚ್ಚದಲ್ಲಿ ನವೀಕರಣ ಮಾಡುವುದಾಗಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ದುರಸ್ತಿ ಕಾಮಗಾರಿ ಪೂರ್ಣಗೊಂಡ ಬಳಿಕ ರೈತಸಭಾಂಗಣ ಪುನಶ್ಚೇತನ ಕಾಮಗಾರಿ ಆರಂಭಿಸುವುದಾಗಿ ೩೦ ಜೂನ್ ೨೦೨೪ರಲ್ಲಿ ಮಾತುಕೊಟ್ಟಿದ್ದರು. ನಾಲ್ಕು ತಿಂಗಳು ಕಳೆದರೂ ಕಾಮಗಾರಿ ಆರಂಭಿಸುವ ಕುರಿತಂತೆ ಕಾಂಗ್ರೆಸ್ಸಿಗರು ಯಾರೂ ದನಿ ಎತ್ತಿರಲಿಲ್ಲ.
ಇದೀಗ ಕುಮಾರಸ್ವಾಮಿ ಅವರು ರೈತಸಭಾಂಗಣ ನವೀಕರಣದ ನೀಲಿ ನಕಾಶೆಯನ್ನು ಬಿಡುಗಡೆ ಮಾಡಿ ೪.೫ ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಹಿನ್ನಡೆ ಉಂಟುಮಾಡಿದ್ದಾರೆ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ.ಕರ್ನಾಟಕ ಸಂಘದಿಂದ ಪ್ರಸ್ತಾಪ:
ರೈತ ಸಭಾಂಗಣದ ದುಸ್ಥಿತಿಯನ್ನು ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಡಬೇಕೆಂಬ ಉದ್ದೇಶದಿಂದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ ಗೌಡ ಅವರು ಕಳೆದ ಜೂ.೩೦ರಂದು ರೈತಸಭಾಂಗಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದ್ದರು. ಅಂದು ಸಂಘಟಕರು ರೈತಸಭಾಂಗಣದ ನವೀಕರಣ ಕುರಿತಾಗಿ ಸಚಿವರ ಗಮನ ಸೆಳೆದಿದ್ದರು. ಸಚಿವರೂ ೧ ಕೋಟಿ ರು. ವೆಚ್ಚದಲ್ಲಿ ಸಭಾಂಗಣವನ್ನು ಆಧುನೀಕರಣ ಮಾಡಿಕೊಡುವ ಭರವಸೆ ನೀಡಿದ್ದರು.ಸಚಿವರ ಮಾತಿಗೆ ದನಿಗೂಡಿಸಿದ್ದ ಶಾಸಕ ಪಿ.ರವಿಕುಮಾರ್, ರೈತಸಭಾಂಗಣದ ನವೀಕರಣಕ್ಕೆ ಆರ್‌ಎಪಿಸಿಎಂಎಸ್‌ನಿಂದ ೨೦ ಲಕ್ಷ ರು. ಹಾಗೂ ಸರ್ಕಾರದಿಂದ ೮೦ ಲಕ್ಷ ರು. ಸೇರಿಸಿ ಒಂದು ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು.
ನವೀಕರಣದ ರೂವಾರಿ ಸಿ.ಎಸ್.ಪುಟ್ಟರಾಜು:ರೈತಸಭಾಂಗಣ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಬೇಕಾದರೆ ಅದರ ಮುಖ್ಯ ರೂವಾರಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು. ಅವರೂ ಕೂಡ ಜೂ.೩೦ರಂದು ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇದಿಕೆಯಲ್ಲಿದ್ದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ದೂರವಾಣಿ ಮುಖಾಂತರವೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ರೈತಸಭಾಂಗಣದ ನವೀಕರಣದ ವಿಷಯ ಪ್ರಸ್ತಾಪಿಸಿದಾಗ, ಒಂದು ಕೋಟಿಯಲ್ಲ, ಎರಡು ಕೋಟಿ ರು. ಖರ್ಚಾಗಲಿ ನಾನು ಕೊಡುತ್ತೇನೆ ಎಂದು ಭರವಸೆ ನೀಡಿದ್ದರು.
ಮರುದಿನವೇ ಸಿ.ಎಸ್.ಪುಟ್ಟರಾಜು ನಿರ್ಮಿತಿ ಕೇಂದ್ರದವರನ್ನು ಕರೆತಂದು ಅಂದಾಜುಪಟ್ಟಿ ತಯಾರಿಸಿದ್ದರು. ನೀಲಿನಕಾಶೆಯೊಂದಿಗೆ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ್ದರು. ೨ ಕೋಟಿ ರು. ನೀಡುವುದಾಗಿ ಮಾತು ಕೊಟ್ಟಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಇದೀಗ ೪.೫ ಕೋಟಿ ನೀಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿರುವುದು ಕಾಂಗ್ರೆಸ್ಸಿಗರಿಗೆ ಮುಜುಗರ ಉಂಟುಮಾಡಿದೆ.ರೈತಸಭಾಂಗಣದ ನವೀಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಧಿಕಾರಸ್ಥರ ನಡುವೆ ಪ್ರತಿಷ್ಠೆಯ ಪೈಪೋಟಿ ಏರ್ಪಟ್ಟು ಜೆಡಿಎಸ್ ಇದೀಗ ಮೇಲುಗೈ ಸಾಧಿಸಿದಂತಾಗಿದೆ.
ಹೇಗಿರಲಿದೆ ಹೊರಾಂಗಣ ವಿನ್ಯಾಸ:ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸಭಾಂಗಣ ನವೀಕರಣಗೊಳ್ಳಲಿದೆ. ಸಭಾಂಗಣ ಪ್ರವೇಶದ್ವಾರದಿಂದ ಎರಡೂ ಕಡೆಯಿಂದ ರಸ್ತೆಗೆ ಡಾಂಬರೀಕರಣ, ಕುವೆಂಪು ಪ್ರತಿಮೆ ಇರುವ ಉದ್ಯಾನವನ ಅಭಿವೃದ್ಧಿ, ಪಾರ್ಕಿಂಗ್ ಸ್ಥಳ, ಸಭಾಂಗಣದ ಮೇಲ್ಭಾಗದ ಮಧ್ಯದಲ್ಲಿ ವ್ಯ ಪಾಯಿಂಟ್ ಇರುವಂತೆ ನೀಲಿ ನಕಾಶೆಯನ್ನು ವಿನ್ಯಾಸಗೊಳಿಸಿದೆ.
‘ಮಂಡ್ಯ ಜನರ ಬಹುದಿನಗಳ ಕನಸು ಸಿ.ಎಸ್.ಪುಟ್ಟರಾಜು ಅವರ ಮೂಲಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ನೆರವೇರಿದೆ. ತುಂಬಾ ಸಂತೋಷವಾಗಿದೆ. ೪.೫ ಕೋಟಿ ರು. ವೆಚ್ಚದಲ್ಲಿ ರೈತಸಭಾಂಗಣ ನವೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿದೆ. ಹೀಗೆ ಅನೇಕ ಜನಪರವಾದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂಬುದು ನನ್ನ ಆಶಯ.’- ಪ್ರೊ.ಬಿ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ