ಯರೇಹಂಚಿನಾಳ ಗ್ರಾಮದಲ್ಲಿ 4 ಶಾಸನಗಳು ಪತ್ತೆ

| Published : Feb 16 2025, 01:48 AM IST

ಸಾರಾಂಶ

ಇತ್ತೀಚೆಗೆ ತಾಲೂಕಿನ ಯರೇಹಂಚಿನಾಳ ಗ್ರಾಮಸ್ಥ ಎನ್.ಕೆ. ತೆಗ್ಗಿನಮನಿ ಅವರ ಮಾಹಿತಿ ಮೇರೆಗೆ ಶಾಸನದ ಬಗ್ಗೆ ಸಂಶೋಧಕಿ ಹನುಮಾಕ್ಷಿ ಗೋಗಿ ಪರಿವೀಕ್ಷಣೆ ಮಾಡಿದ್ದು, ಪೂರ್ಣ ಶಾಸನ ಮತ್ತು ತ್ರುಟಿತ ಶಾಸನಗಳು ಕಂಡುಬಂದಿವೆ.

ಜೈನ, ಶೈವ ಧರ್ಮದ ಪ್ರಭಾವ ಬೀರುವ ಶಾಸನ/ ಹನುಮಾಕ್ಷಿ ಗೋಗಿ ಶೋಧ

ಕನ್ನಡಪ್ರಭ ವಾರ್ತೆ ಕುಕನೂರು

ಇತ್ತೀಚೆಗೆ ತಾಲೂಕಿನ ಯರೇಹಂಚಿನಾಳ ಗ್ರಾಮಸ್ಥ ಎನ್.ಕೆ. ತೆಗ್ಗಿನಮನಿ ಅವರ ಮಾಹಿತಿ ಮೇರೆಗೆ ಶಾಸನದ ಬಗ್ಗೆ ಸಂಶೋಧಕಿ ಹನುಮಾಕ್ಷಿ ಗೋಗಿ ಪರಿವೀಕ್ಷಣೆ ಮಾಡಿದ್ದು, ಪೂರ್ಣ ಶಾಸನ ಮತ್ತು ತ್ರುಟಿತ ಶಾಸನಗಳು ಕಂಡುಬಂದಿವೆ.

ಹನುಮಾಕ್ಷಿ ಗೋಗಿ ಅವರ ಪತ್ರಿಕಾ ಹೇಳಿಕೆ ವಿವರ ಹೀಗಿದೆ. ಈ ಶಾಸನಗಳ ಶೋಧದಿಂದಾಗಿ ೧೨ನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ಈ ಗ್ರಾಮ ಅಸ್ತಿತ್ವದಲ್ಲಿತ್ತೆಂದು, ಜೈನ ಹಾಗೂ ಶೈವ ಧರ್ಮಗಳ ಪ್ರಭಾವವವಿತ್ತೆಂದು ತಿಳಿದು ಬರುತ್ತದೆ.

ಊರ ಕೆರೆಯ ಮೆಟ್ಟಿಲಿನ ಪಕ್ಕದ ಗೋಡೆಯಲ್ಲಿಯ ತ್ರುಟಿತ ಶಾಸನ ೧೨ನೇ ಶತಮಾನದ್ದು, ೧೭ ಅಡಿ ಅಗಲ ೭ ಅಡಿ ಎತ್ತರದ ಕರಿಕಲ್ಲಿನಲ್ಲಿ ಕೆತ್ತಲಾಗಿದೆ. ಶಾಸನದ ನಾಲ್ಕೂ ಸುತ್ತಲಿನ ಭಾಗಗಳಿಲ್ಲ. ಹುಲೆಯರ ಶಿವಮಯ್ಯನಾಯಕನು ಕೆರೆಯ ಏರಿಯ ಕೆಳಗಿರುವ ಎರಡು ಮತ್ತರು ಸುರಹೊನ್ನೆ ಹೂಗಳ ತೋಟ ಮತ್ತು ಕೆರೆಯ ಪಶ್ಚಿಮ ದಿಕ್ಕಿನಲ್ಲಿಯ ಮೂರು ಮತ್ತರು ಎರೆಯ ಭೂಮಿಯನ್ನು ದಾನವಾಗಿ ಯಾವುದೋ ದೇವರ ರಂಗಭೋಗಕ್ಕಾಗಿ ಕೊಟ್ಟು, ಚಂದ್ರ ಸೂರ್ಯ ತಾರೆಯರು ಇರುವವರೆಗೆ ದಾನವು ಅನೂಚಾನವಾಗಿ ನಡೆಯುವಂತೆ ಬಿಟ್ಟನೆಂದು ಈ ಅಪೂರ್ಣ ಶಾಸನವು ತಿಳಿಸುತ್ತದೆ. ದೇವರ ಪೂಜೆಗೆ ಬೇಕಾಗುವ ಸುರಹೊನ್ನೆ ಹೂವಿನ ತೋಟ, ಎರೆಯ ಹೊಲ, ಹುಲೆಯರ ಶಿವಮಯ್ಯ ನಾಯಕ, ಭೂಮಿಯ ಅಳತೆಯ ಪ್ರಕಾರವಾದ ಮತ್ತರುಗಳ ಉಲ್ಲೇಖವು ಗಮನ ಸೆಳೆಯುತ್ತದೆ.

2ನೇಯದು ಊರ ಕೆರೆಯ ಹತ್ತಿರದ ನಾಗರೆಡ್ಡಿ ಅವರ ಹಿತ್ತಲಿನ ಕಲ್ಲುಗೋಡೆಯಲ್ಲಿ ಸೇರಿಸಿದ ತ್ರುಟಿತ ಶಾಸನ. ೧೨ನೇ ಶತಮಾನದ್ದು, ೨೪ ಅಡಿ ಅಗಲ ೯ ಅಡಿ ಎತ್ತರದ ಕರಿಕಲ್ಲಿನಲ್ಲಿ ಕೆತ್ತಲಾಗಿದೆ. ಈ ಶಾಸನದ ಸುತ್ತಲಿನ ನಾಲ್ಕೂ ಭಾಗಗಳಿಲ್ಲ. ಪೆರ್ಮಾಡಿಯ ಬಿರುದಾವಳಿ ಮತ್ತು ಸಾಧನೆ ವಿವರ ಈ ಶಾಸನದಲ್ಲಿವೆ. ಈ ಪೆರ್ಮಾಡಿಯು ಕಲ್ಯಾಣ ಚಾಲುಕ್ಯ ಚಕ್ರವರ್ತಿ ಅಭಿನವ ಭೋಜನೆನಿಸಿದ ಆರನೆಯ ವಿಕ್ರಮಾದಿತ್ಯನೇ ಆಗಿದ್ದಾನೆ.

3ನೇ ಶಾಸನ ಹಾಳೂರಿನ ಹತ್ತಿರದ ಹೊಲದ ಹಳ್ಳದ ಬದುವಿನಲ್ಲಿಯ ಶಾಸನ. ೧೨ನೇ ಶತಮಾನದ್ದು. ೬ ಅಡಿ ಎತ್ತರ ಒಂದುವರೆ ಅಡಿ ಅಗಲದ ಕಗ್ಗಲ್ಲಿನ ಮೇಲ್ಭಾಗದ ೩ ಅಡಿ ಭಾಗವನ್ನು ಸಮತಟ್ಟಾಗಿ ಮಾಡಿಕೊಂಡು ಶಾಸನ ಕೆತ್ತಲಾಗಿದೆ. ಶಾಸನದ ಮೇಲ್ಭಾಗದ ೧ ಅಡಿಯ ಭಾಗದಲ್ಲಿ ಸೂರ್ಯ ಚಂದ್ರ, ಶಿವಲಿಂಗ, ಪೂಜಿಸುತ್ತಿರುವ ಯತಿ ಮತ್ತು ಕುಳಿತ ನಂದಿಗಳಿವೆ. ನಂತರದ ೨ ಅಡಿ ಭಾಗದಲ್ಲಿ ೯ ಸಾಲುಗಳ ಶಾಸನವನ್ನು ೧೨ನೆಯ ಶತಮಾನದ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಕೆತ್ತಲಾಗಿದೆ.

4ನೇಯದು ಪ್ರೌಢಶಾಲೆಯ ಆವರಣದಲ್ಲಿಯ ಬೇವಿನಗಿಡದ ಕಟ್ಟೆಯ ಮಧ್ಯದಲ್ಲಿ ತಲೆ ಕೆಳಗಾಗಿ ಸೇರಿಸಿದ ಶಾಸನ. ೧೩ನೇ ಶತಮಾನದ, ಒಂದುವರೆ ಅಡಿ ಅಗಲ ಒಂದುವರೆ ಅಡಿ ಎತ್ತರದ ಬಳಪದ ಕಲ್ಲು ಇದಾಗಿದೆ. ಶಾಸನದ ಹಿಂಭಾಗದಲ್ಲಿ ಉಡುಚಾದೇವಿಯ ಮೂರ್ತಿ ಕೆತ್ತಲಾಗಿದೆ. ಶಾಸನದ ನಾಲ್ಕೂ ಭಾಗ ಒಡೆದಿದ್ದು, ಸುಮಾರು ೧೩ನೇ ಶತಮಾನದ ಅಕ್ಷರಗಳಿವೆ.

ಶಾಂತಿನಾಥ ತೀರ್ಥಂಕರರನ್ನು ಸ್ತುತಿಸುವ ಈ ಶಾಸನವು ಜೈನ ನಿಷಧಿಯಾಗಿದ್ದು, ಯಾದವ ಚಕ್ರವರ್ತಿ ಕನ್ನರನನ್ನು ವಿಶೇಷಣಗಳೊಂದಿಗೆ ಬಣ್ಣಿಸುತ್ತ, ಅಪೂರ್ಣಗೊಳ್ಳುತ್ತದೆ. ಎರೆ ಹಂಚಿನಾಳ ಗ್ರಾಮದಲ್ಲಿ ಶಾಂತಿನಾಥ ತೀರ್ಥಂಕರರ ಬಸದಿಯೊಂದು ಇತ್ತೆಂಬುದು ಮತ್ತು ಬಹುಶಾಸ್ತ್ರ ತರ್ಕ್ಕಗಳಲ್ಲಿ ಪ್ರಾವೀಣ್ಯತೆ ಹೊಂದಿದ ಮುನಿಯೊಬ್ಬ ಇಲ್ಲಿ ಮರಣ ಅಪ್ಪಿದಾಗ, ಆತನ ಹೆಸರಿನಲ್ಲಿ ನಿಷಧಿಯೊಂದನ್ನು ನಿಲ್ಲಿಸಲಾಗಿತ್ತೆಂದು ತಿಳಿದುಬರುತ್ತದೆ. ‘ಕಹ್ನರರಾಯಂ ಪ್ರೌಢ ಪ್ರತಾಪ ಚಕ್ರವರ್ತ್ತಿ’ ಎನ್ನುವ ಉಕ್ತಿ ಶಾಸನದಲ್ಲಿ ಇರುವುದರಿಂದ ಯಾದವ ಚಕ್ರವರ್ತಿ ಕನ್ನರನ ಕಾಲದ (ಕ್ರಿ.ಶ.೧೨೪೭-೧೨೬೧) ಶಾಸನವಾಗಿದೆಯೆಂದು ಸ್ಪಷ್ಟವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.