ಕೊಪ್ಪಳ ವಿಮಾನ ನಿಲ್ದಾಣ ಗಗನಕುಸುಮ!

| Published : Jul 06 2024, 12:55 AM IST

ಸಾರಾಂಶ

ಕೊಪ್ಪಳ ವಿಮಾನ ನಿಲ್ದಾಣಕ್ಕಾಗಿ ಹಿಂದಿನ ಸರ್ಕಾರ ಮಂಜೂರಾತಿ ನೀಡಿ ಭೂಸ್ವಾಧೀನಕ್ಕಾಗಿ ಬಿಡುಗಡೆ ಮಾಡಿದ್ದ ₹40 ಕೋಟಿ ಹಣವನ್ನು ವಾಪಸ್‌ ಪಡೆದು ಪರ್ಯಾಯ ಕಾಮಗಾರಿಗೆ ಬಳಕೆ ಮಾಡಲು ಕೆಕೆಆರ್‌ಡಿಬಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ವಿಮಾನ ನಿಲ್ದಾಣಕ್ಕಾಗಿ ಹಿಂದಿನ ಸರ್ಕಾರ ಮಂಜೂರಾತಿ ನೀಡಿ ಭೂಸ್ವಾಧೀನಕ್ಕಾಗಿ ಬಿಡುಗಡೆ ಮಾಡಿದ್ದ ₹40 ಕೋಟಿ ಹಣವನ್ನು ವಾಪಸ್‌ ಪಡೆದು ಪರ್ಯಾಯ ಕಾಮಗಾರಿಗೆ ಬಳಕೆ ಮಾಡಲು ಕೆಕೆಆರ್‌ಡಿಬಿ ಸಭೆಯಲ್ಲಿ ತೀರ್ಮಾನ ಮಾಡಿದ್ದರಿಂದ ಪ್ರತ್ಯೇಕ ವಿಮಾನ ನಿಲ್ದಾಣದ ಕನಸಿಗೆ ಎಳ್ಳುನೀರು ಬಿಟ್ಟಂತಾಗಿದೆ.

ಉಡಾನ್‌ ಯೋಜನೆ ಜಾರಿಗೆ ಖಾಸಗಿ ವಿಮಾನ ತಂಗುದಾಣ ಕಂಪನಿ ಸಹಕಾರ ನೀಡದೆ ಇರುವುದರಿಂದ ಜಿಲ್ಲೆಯಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಿಸಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರ ಭೂಸ್ವಾಧೀನಕ್ಕೆ ಕೆಕೆಆರ್‌ಡಿಬಿಗೆ ವಿಶೇಷ ಅನುಮತಿ ನೀಡಿ ₹40 ಕೋಟಿ ಬಿಡುಗಡೆ ಮಾಡಿತ್ತು.

ಆದರೆ, ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗದೆ ಇದ್ದಿದ್ದರಿಂದ ಈಗ ಕಾಂಗ್ರೆಸ್ ಸರ್ಕಾರ ಕೆಕೆಆರ್‌ಡಿಬಿಯಲ್ಲಿ ಪರಾಮರ್ಶೆಗೆ ವಿಷಯ ತಂದು, ಭೂ ಸ್ವಾಧೀನಕ್ಕಾಗಿ ನಿಗದಿಯಾಗಿದ್ದ ₹40 ಕೋಟಿಯನ್ನು ಪರ್ಯಾಯ ಕಾಮಗಾರಿಗೆ ಬಳಕೆ ಮಾಡಲು ಅನುಮತಿಸಿದೆ. ಈ ಮೂಲಕ ಪರೋಕ್ಷವಾಗಿ ವಿಮಾನ ನಿಲ್ದಾಣ ಯೋಜನೆ ಕೈಬಿಟ್ಟಂತೆ ಎಂದೇ ವಿಶ್ಲೇಷಣೆ ಮಾಡಲಾಗುತ್ತದೆ.

ವ್ಯಾಪಕ ಆಕ್ರೋಶ: ವಿಮಾನ ನಿಲ್ದಾಣಕ್ಕೆ ನಿಗದಿಯಾಗಿದ್ದ ಅನುದಾನ ಬಳಕೆಯಾಗದೆ ಹಾಗೆ ಉಳಿದಿದೆ. ಅದು ಲ್ಯಾಪ್ಸ್ ಆಗಬಾರದು ಎನ್ನುವ ಕಾರಣಕ್ಕೆ ಬೇರೆ ಕಾಮಗಾರಿಗೆ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಹಾಗಂತ ವಿಮಾನ ನಿಲ್ದಾಣ ಯೋಜನೆಯನ್ನೇನೂ ಕೈಬಿಟ್ಟಿಲ್ಲ ಎಂದು ಹಾಲಿ ಶಾಸಕರು ಮತ್ತು ಸಚಿವರು ಸಬೂಬು ನೀಡುತ್ತಿದ್ದಾರೆ.

ಈಗ ವಿಮಾನ ನಿಲ್ದಾಣಕ್ಕೆ ಸ್ಥಳ ಅಂತಿಮ ಆಗಿಲ್ಲ. ಈಗಾಗಲೇ ಗುರುತಿಸಿದ್ದ ಯೋಗ್ಯವಲ್ಲ ಎನ್ನುವ ಕಾರಣಕ್ಕಾಗಿಯೇ ಭೂ ಸ್ವಾಧೀನ ಪ್ರಾರಂಭಿಸಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ಪರ್ಯಾಯ ಮತ್ತು ಸೂಕ್ತ ಸ್ಥಳ ಗುರುತಿಸಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಅಗತ್ಯಬಿದ್ದರೆ ₹100 ಕೋಟಿ ನೀಡಲು ಕೆಕೆಆರ್‌ಡಿಬಿ ಸಭೆಯಲ್ಲಿ ಚಿಂತನೆ ಮಾಡಲಾಗಿದೆ. ವಿನಾಕಾರಣ ತಪ್ಪಾಗಿ ಅರ್ಥೈಸುವುದು ಸರಿಯಲ್ಲ ಎನ್ನುತ್ತಾರೆ ಶಾಸಕ ರಾಘವೇಂದ್ರ ಹಿಟ್ನಾಳ.

ಸ್ಥಳದ ಸಮಸ್ಯೆ: ಈ ಹಿಂದೆ ನಿಗದಿಯಾಗಿದ್ದ ವಿಮಾನ ನಿಲ್ದಾಣದ ಜಾಗದ ಕುರಿತು ಅಪಸ್ವರ ಇತ್ತಾದರೂ, ಆದಲ್ಲಿ ಆಗಲಿ ಬಿಡಿ ಎಂದು ಸುಮ್ಮನಿದ್ದವರೆಲ್ಲ ಈಗ ಪರ್ಯಾಯ ಸ್ಥಳ ಗುರುತಿಸುವುದೇ ಸೂಕ್ತ ಎನ್ನುವ ವಾದ ಮುಂದಿಡುತ್ತಾ ಕೆಕೆಆರ್‌ಡಿಬಿಯಲ್ಲಿ ಕೈಗೊಂಡ ತೀರ್ಮಾನ ಸ್ವಾಗತಿಸುತ್ತಿದ್ದಾರೆ.ವಿಮಾನ ನಿಲ್ದಾಣಕ್ಕೆ ನಿಗದಿಯಾಗಿದ್ದ ಅನುದಾನ ಬಳಕೆಯಾಗದೆ ಇರುವುದರಿಂದ ಪರ್ಯಾಯ ಕಾಮಗಾರಿಗೆ ಬಳಕೆ ಮಾಡಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳ ಗುರುತಿಸಿ, ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಅಗತ್ಯ ಅನುದಾನ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳುತ್ತಾರೆ.

ವಿಮಾನ ನಿಲ್ದಾಣಕ್ಕೆ ನಿಗದಿಯಾಗಿದ್ದ ಅನುದಾನ ಬೇರೆ ಕಾಮಗಾರಿಗೆ ಬಳಕೆ ಮಾಡಿದ್ದರಿಂದ ಇಡೀ ಯೋಜನೆಗೆ ಹಿನ್ನಡೆಯಾಗಿದೆ. ಆದ್ದರಿಂದ ಈ ತೀರ್ಮಾನ ಕೈಬಿಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್‌ ಹೇಳುತ್ತಾರೆ.ವಿಮಾನ ನಿಲ್ದಾಣ ಅನುದಾನ ಬೇರೆ ಕಾರ್ಯಗಳಿಗೆ ಉಗ್ರ ಹೋರಾಟ : ಸಿವಿಸಿ ಎಚ್ಚರಿಕೆ

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೀಸಲಿಟ್ಟ ಅನುದಾನವನ್ನು ಬೇರೆ ಕಾರ್ಯಗಳಿಗೆ ಬಳಸುವ ನಿರ್ಧಾರದಿಂದ ಈ ಕೂಡಲೇ ಶಾಸಕ ರಾಘವೇಂದ್ರ ಹಿಟ್ನಾಳ್ ಹಿಂದೆ ಸರಿದು, ವಿಮಾನ ನಿಲ್ದಾಣ ಕಾಮಗಾರಿಗೆ ಆದ್ಯತೆ ನೀಡಬೇಕೆಂದು ಜೆಡಿಎಸ್‌ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಭಿವೃದ್ಧಿ ಹೆಸರಿನಲ್ಲಿ ಮತ ಪಡೆದ ಶಾಸಕ ಹಿಟ್ನಾಳ್ ಅಭಿವೃದ್ಧಿ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ರಾಘವೇಂದ್ರ ಹಿಟ್ನಾಳ್ ಅವರಿಗೆ ಕೆಟ್ಟು ಹೋದ ರಸ್ತೆಗಳು ಹಾಗೂ ಹಳ್ಳ ಹಿಡಿದ ಅಭಿವೃದ್ಧಿ ಕಾಮಗಾರಿಗಳು ಕಾಣಿಸುತ್ತಿಲ್ಲ. ವಿಮಾನ ನಿಲ್ದಾಣ ಬಿಟ್ಟು ಬೇರೆ ಕಾಮಗಾರಿಗಳಿಗೆ ಮೀಸಲಿಟ್ಟ ಅನುದಾನ ಬಳಸಿಕೊಳ್ಳುವ ಪ್ರಯತ್ನ ಮಾಡಿದರೆ ತಮ್ಮ ಪಕ್ಷದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.