ಗುರುಮಠಕಲ್ ಅಭಿವೃದ್ಧಿಗೆ 40 ವರ್ಷ ಸಾಕಾಗಲಿಲ್ಲವೇ: ಖರ್ಗೆಗೆ ಜಾಧವ್ ಪ್ರಶ್ನೆ

| Published : Apr 29 2024, 01:30 AM IST

ಗುರುಮಠಕಲ್ ಅಭಿವೃದ್ಧಿಗೆ 40 ವರ್ಷ ಸಾಕಾಗಲಿಲ್ಲವೇ: ಖರ್ಗೆಗೆ ಜಾಧವ್ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಗುರುಮಠಕಲ್ ಕ್ಷೇತ್ರ ಅಭಿವೃದ್ಧಿಪಡಿಸಲು ಯಾಕೆ ಸಾಧ್ಯವಾಗಿಲ್ಲ ಎಂಬುದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರ ನೀಡಲಿ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ನೇರ ಪ್ರಶ್ನೆ.

ಕನ್ನಡಪ್ರಭ ವಾರ್ತೆ ಗುರುಮಠಕಲ್

40 ವರ್ಷಗಳಿಂದ ಗುರುಮಠಕಲ್ ಕ್ಷೇತ್ರದಲ್ಲಿ ಶಾಸಕರಾಗಿ ಹಾಗೂ ಎರಡು ಬಾರಿ ಲೋಕಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದರೂ ಗುರುಮಠಕಲ್ ಕ್ಷೇತ್ರ ಅಭಿವೃದ್ಧಿಪಡಿಸಲು ಯಾಕೆ ಸಾಧ್ಯವಾಗಿಲ್ಲ ಎಂಬುದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರ ನೀಡಲಿ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ನೇರ ಪ್ರಶ್ನೆ ಹಾಕಿದ್ದಾರೆ.

ಗುರುಮಠಕಲ್ ಮಂಡಲದ ಬಳಿಚಕ್ರ ಮಹಾ ಶಕ್ತಿ ಕೇಂದ್ರದಲ್ಲಿ ಭಾನುವಾರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಗುರುಮಠಕಲ್ ಕ್ಷೇತ್ರದ ಅವಸ್ಥೆಯನ್ನು ನೋಡಿದಾಗ ಮರುಕ ಹುಟ್ಟುತ್ತದೆ. ಎಂಟು ಬಾರಿ ಶಾಸಕರಾಗಿ 40 ವರ್ಷ ಕ್ಷೇತ್ರವನ್ನು ಪ್ರತಿನಿಧಿಸಿದರೂ ಇಲ್ಲಿನ ಬಡತನ ಹಸಿವು, ಕಷ್ಟ ನಿವಾರಣೆ ಮಾಡಲು ಸಾಧ್ಯವಾಗದೆ ಇಲ್ಲಿನ ಜನ ಮುಂಬೈ ಹೈದರಾಬಾದ್ ಬೆಂಗಳೂರಿಗೆ ವಲಸೆ ಹೋಗುತ್ತಿರುವುದು ಈಗಲೂ ಮುಂದುವರೆದಿದೆ. ಮೋದಿಯವರ ಕೊಡುಗೆ ಏನು? ಜಾಧವ್ ಅವರ ಕೊಡುಗೆ ಏನು? ಎಂದು ಪ್ರಶ್ನಿಸುತ್ತಿರುವ ಖರ್ಗೆ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದವರು ಗುರುಮಠಕಲ್ ಕ್ಷೇತ್ರದ ಹಿಂದುಳಿದಿರುವಿಕೆಗೆ ಉತ್ತರ ನೀಡಲಿ ಎಂದರು.

ಸೋಲಿಲ್ಲದ ಸರದಾರ ಎಂದು ಹೇಳುತ್ತಿರುವವರಲ್ಲಿ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ರೀತಿಯ ಸಮಸ್ಯೆ ಇನ್ನೂ ಜೀವಂತವಾಗಿದೆ. ಈ ಭಾಗದ ನಿರುದ್ಯೋಗ ಸಮಸ್ಯೆ ಹಾಗೂ ವಲಸೆ ಹೋಗುವುದನ್ನು ತಪ್ಪಿಸಲು ಒಂದು ಲಕ್ಷ ನೇರ ಉದ್ಯೋಗ ಹಾಗೂ ಎರಡು ಲಕ್ಷ ಪರೋಕ್ಷ ಉದ್ಯೋಗ ಕಲ್ಪಿಸುವ ಮೆಗಾ ಜವಳಿ ಪಾರ್ಕ್ ಯೋಜನೆಯನ್ನು ಮೋದಿಯವರು ಕೊಡುಗೆಯಾಗಿ ನೀಡಿದ್ದಾರೆಂದರು.

ಬಿಜೆಪಿ ಮೋದಿ ಅವರ ಹೆಸರಿನಲ್ಲಿ ಮತ ಕೇಳುತ್ತಿದೆ ಎಂದು ಟೀಕಿಸುವ ಕಾಂಗ್ರೆಸ್ ಕಲ್ಬುರ್ಗಿ ಮತಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಸಾಧನೆಯನ್ನು ಮುಂದಿಟ್ಟು ಮತ ಕೇಳುತ್ತಿದೆ ಎಂದರಲ್ಲದೆ, ಕಾಂಗ್ರೆಸ್ ಬಂದರೆ ಗುರುಮಠಕಲ್ ನಂತೆ ಹಿಂದುಳಿದಿರುವಿಕೆಯನ್ನು ಕಾಣಬೇಕಾಗುತ್ತದೆ. ಮಾವನ (ಮಲ್ಲಿಕಾರ್ಜುನ ಖರ್ಗೆ) ಹೆಸರಿನಲ್ಲಿ ಅಳಿಯ (ರಾಧಾಕೃಷ್ಣ ದೊಡ್ಡಮನಿ)ಮತ ಕೇಳುವ ದುಸ್ಥಿತಿ ಕಲ್ಬುರ್ಗಿಯಲ್ಲಿ ಕಾಣುತ್ತಿದೆ. 100 ಮೀಟರ್ ನಡೆಯಲಾಗದವರು ಉರಿ ಬಿಸಿಲನ್ನು ತಾಳಲಾಗದವರು ಮತಕ್ಕಾಗಿ ಓಡಾಡುತ್ತಿದ್ದಾರೆಂದು ಗೇಲಿ ಮಾಡಿದರು.

ಬಿಜೆಪಿಯ ಮುಖಂಡರಾದ ಲಲಿತಾ ಆನಪೂರ್, ಶರಣಪ್ಪ ಹದನನೂರ್ . ದೇವೇಂದ್ರ ನಾದ್ ಮಾತನಾಡಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಹನಗೇರಿ, ಜಗದೀಶ್ ಚಂದ್ರ ಮೆಂಗಜಿ, ವೀರಭದ್ರ ಪಲಿಮುನೂರ್, ವೀರಯ್ಯಸ್ವಾಮಿ ಅಮೃತ ಬೋರಬಂಡ, ಶಂಕ್ರಪ್ಪ ಬೋಳೇರ, ಸೋಮಲಾ, ವೆಂಕಪ್ಪ ,ಲಕ್ಷ್ಮಣ ನಾಯಕ್ ಚಂದ್ರಕಲಾ ಮಲ್ಲಿಕಾರ್ಜುನ ಮತ್ತಿದ್ದರು ಉಪಸ್ಥಿತರಿದ್ದರು.