ಸಾರಾಂಶ
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜ್ಯಾದ್ಯಂತ ನಿರ್ಮಾಣವಾಗುತ್ತಿರುವ 1.80 ಲಕ್ಷ ಮನೆಗಳ ಪೈಕಿ ಮೊದಲ ಹಂತದಲ್ಲಿ ಬೆಂಗಳೂರಿನ ಕೆ.ಆರ್.ಪುರಂ ನಾಗೇಶ್ವರ ನಾಗೇನಹಳ್ಳಿಯಲ್ಲಿ ಕಳೆದ ವರ್ಷ 36789 ಮನೆಗಳನ್ನು ಫಲಾನುಭವಿಗಳಿಗೆ ಈಗಾಗಲೇ ಹಸ್ತಾಂತರ ಮಾಡಲಾಗಿದೆ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮೃತ ಹಸ್ತರದಿಂದ ಏ. 27ರಂದು ಲೋಕಾರ್ಪಣೆಗೊಳ್ಳಲಿರುವ ಮಂಟೂರ ರಸ್ತೆಯ ಆಶ್ರಯ ಮನೆಗಳ ಅಂತಿಮ ಹಂತದ ಕಾಮಗಾರಿಯನ್ನು ಸ್ಲಂ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಶುಕ್ರವಾರ ಪರಿಶೀಲಿಸಿ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಅಗತ್ಯ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜ್ಯಾದ್ಯಂತ ನಿರ್ಮಾಣವಾಗುತ್ತಿರುವ 1.80 ಲಕ್ಷ ಮನೆಗಳ ಪೈಕಿ ಮೊದಲ ಹಂತದಲ್ಲಿ ಬೆಂಗಳೂರಿನ ಕೆ.ಆರ್.ಪುರಂ ನಾಗೇಶ್ವರ ನಾಗೇನಹಳ್ಳಿಯಲ್ಲಿ ಕಳೆದ ವರ್ಷ 36789 ಮನೆಗಳನ್ನು ಫಲಾನುಭವಿಗಳಿಗೆ ಈಗಾಗಲೇ ಹಸ್ತಾಂತರ ಮಾಡಲಾಗಿದೆ. ಮುಂದುವರೆದ ಭಾಗವಾಗಿ ರಾಜ್ಯಾದ್ಯಂತ 2ನೇ ಹಂತದ 42345 ಮನೆಗಳ ಹಸ್ತಾಂತರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಏ. 27ರಂದು ಹಸ್ತಾಂತರಿಸಲಿದ್ದಾರೆ ಎಂದರು.ಬಿಜೆಪಿ ಆಡಳಿತಾವಧಿಯಲ್ಲಿ ಜನಪರ ಯೋಜನೆಗಳಿಗೆ ಉತ್ತೇಜನ ನೀಡುವುದನ್ನು ಬಿಟ್ಟು, ಬರೀ ರಾಜಕೀಯ ಮಾಡುತ್ತ ದುರಾಡಳಿತ ನಡೆಸಿದ್ದರ ಫಲವಾಗಿಯೇ ಇಂದು ಬಿಜೆಪಿಗೆ ನೆಲೆ ಇಲ್ಲದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಹೆಚ್ಚುವರಿ ಆಯುಕ್ತ ವಿಜಯಕುಮಾರ ಸೇರಿದಂತೆ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.