ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ₹425 ಕೋಟಿ ಅನುದಾನ

| Published : Sep 26 2025, 02:10 AM IST

ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ₹425 ಕೋಟಿ ಅನುದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಯೋಜನೆ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿ ಜಿಲ್ಲೆಯ ಸಿಹಿಸುದ್ದಿ ನೀಡಿದ್ದ ಜಿಲ್ಲೆಯ ಜನರಿಗೆ ಈಗ ಕಾಂಗ್ರೆಸ್‌ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಬಾಗಲಕೋಟೆ ಮೆಡಿಕಲ್‌ ಕಾಲೇಜಿಗೆ 450 ಕೋಟಿ ಅನುದಾನಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಯೋಜನೆ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿ ಜಿಲ್ಲೆಯ ಸಿಹಿಸುದ್ದಿ ನೀಡಿದ್ದ ಜಿಲ್ಲೆಯ ಜನರಿಗೆ ಈಗ ಕಾಂಗ್ರೆಸ್‌ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಮತ್ತೊಂದು ಬಂಪರ್‌ ಘೋಷಣೆ ಮಾಡಿದೆ.

ಗುರುವಾರ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ₹425 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಮೆಡಿಕಲ್‌ ಕಾಲೇಜು ಆರಂಭ ಆಗುವುದೋ ಇಲ್ಲವೋ ಎಂಬ ಜಿಜ್ಞಾಸೆಯಲ್ಲಿದ್ದ ಜಿಲ್ಲೆಯ ಜನತೆಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. 150 ಸೀಟುಗಳೊಂದಿಗೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಆರಂಭಿಸಲು ₹450 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಈ ಯೋಜನೆಯು ಕಾಲೇಜು ಕಟ್ಟಡ, ಹಾಸ್ಟೆಲ್‌ಗಳು, ಬೋಧಕ , ಬೋಧಕೇತರ ಸಿಬ್ಬಂದಿ ವಸತಿ ಗೃಹಗಳು ಮತ್ತು ಇತರ ಸೌಲಭ್ಯ ಒಳಗೊಂಡಿದೆ.

ಈ ಮಹತ್ವದ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹಾಗೂ ವಿಶೇಷವಾಗಿ ಅವಿರತ ಪ್ರಯತ್ನ ಮಾಡಿದ ಶಾಸಕ, ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿಯವರಿಗೆ ಜಿಲ್ಲೆಯ ಶಾಸಕರಿಗೆ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ತೀರ್ಮಾನದಿಂದ ಜಿಲ್ಲೆಯ ವೈದ್ಯಕೀಯ ಶಿಕ್ಷಣದ ವಿಸ್ತರಣೆ, ಮೂಲಸೌಕರ್ಯಗಳ ಬಲವರ್ಧನೆ ಹಾಗೂ ಸಾಮಾನ್ಯ ಜನತೆಗೆ ಉತ್ತಮ ಆರೋಗ್ಯ ಸೇವೆ ಲಭ್ಯವಾಗಲಿದೆ. ಬಾಗಲಕೋಟೆ ಜಿಲ್ಲೆಯ ದೀರ್ಘಕಾಲದ ಬಯಕೆಯನ್ನು ನೆರವೇರಿಸಿರುವ ಸರ್ಕಾರದ ಈ ಐತಿಹಾಸಿಕ ತೀರ್ಮಾನ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದ್ದಾರೆ.ಬಾಗಲಕೋಟೆಯಲ್ಲಿ ಸ್ಥಾಪನೆಯಾಗಲಿರುವ ವೈದ್ಯಕೀಯ ಮಹಾವಿದ್ಯಾಲಯಕ್ಕೆ ₹450 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿರುವುದು ದೊಡ್ಡ ಕೊಡುಗೆಯಾಗಿದೆ. ಈ ಕಾಲೇಜು ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಒದಗಿಸಲಿದೆ. ಕಟ್ಟಡ ನಿರ್ಮಾಣದ ಜೊತೆಗೆ ಬಾಲಕ-ಬಾಲಕಿಯರ ಹಾಸ್ಟೆಲ್‌ಗಳು, ಸಿಬ್ಬಂದಿ ವಸತಿಗೃಹಗಳು ಮತ್ತು ಆಧುನಿಕ ಸೌಲಭ್ಯಗಳಿಗೆ ಈ ಅನುದಾನ ಬಳಸಲಾಗುವುದು. ಈ ಯೋಜನೆಯಿಂದ ಬಾಗಲಕೋಟೆ ಜಿಲ್ಲೆಯ ಆರೋಗ್ಯ ಸೇವೆಗಳೂ ಸುಧಾರಿಸಲಿವೆ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಪ್ರಮುಖ, ಬಾಗಲಕೋಟೆ ವೈದ್ಯಕೀಯ ಕಾಲೇಜು ಈ ಭಾಗದ ಯುವಕರಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ.

- ಆರ್.ಬಿ. ತಿಮ್ಮಾಪೂರ ಜಿಲ್ಲಾ ಉಸ್ತುವಾರಿ ಸಚಿವಬಾಗಲಕೋಟೆಗೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸಂಪುಟ ಸಭೆಯಲ್ಲಿ ₹450 ಕೋಟಿ ಆರಂಭಿಕ ಅನುಮೋದನೆ ನೀಡುವ ಮೂಲಕ ಮುಳುಗಡೆ ಜಿಲ್ಲೆಯ ಜನತೆಗೆ ಸರ್ಕಾರ ಮಹತ್ತರ ಕೊಡುಗೆ ನೀಡಿದೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ಮುಳಗಡೆಯಾಗಿರುವ ಬಾಗಲಕೋಟೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮುಕುಟಪ್ರಾಯವಾಗಿದೆ. ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಜಿಲ್ಲೆಯ ಜನರಿಗೆ ಸಂತಸ ಉಂಟು ಮಾಡಿದೆ. ಈ ವೈದ್ಯಕೀಯ ಕಾಲೇಜಿಗೆ ಶ್ರಮಿಸಿದ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕ ಎಚ್.ವೈ. ಮೇಟಿ ಸೇರಿದಂತೆ ಎಲ್ಲ ನಾಯಕರಿಗೆ ಧನ್ಯವಾದಗಳು. ಶೀಘ್ರದಲ್ಲಿ ಬಾಗಲಕೋಟೆ ಜಿಲ್ಲೆಯ ಜನರಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಕಾಮಗಾರಿ ಆರಂಭಗೊಳ್ಳಲಿದೆ.

- ರಕ್ಷಿತಾ ಭರತಕುಮಾರ ಈಟಿ ಜಿಲ್ಲಾಧ್ಯಕ್ಷೆ ಕಾಂಗ್ರೆಸ್ ಮಹಿಳಾ ಘಟಕ