ನರಗುಂದ ರೈತ ಬಂಡಾಯಕ್ಕೆ 45 ವರ್ಷ!

| Published : Jul 21 2025, 12:00 AM IST

ಸಾರಾಂಶ

ರೈತ ಬಂಡಾಯದ ಖ್ಯಾತಿಯ ನರಗುಂದದಲ್ಲಿ ಜು. 21ರಂದು ರೈತ ಹುತಾತ್ಮ ದಿನಾಚರಣೆ ನಡೆಯಲಿದ್ದು, ಸೋಮವಾರ ಈ ಹೋರಾಟಕ್ಕೆ 45 ವರ್ಷ ತುಂಬಲಿದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ರೈತ ಬಂಡಾಯದ ಖ್ಯಾತಿಯ ನರಗುಂದದಲ್ಲಿ ಜು. 21ರಂದು ರೈತ ಹುತಾತ್ಮ ದಿನಾಚರಣೆ ನಡೆಯಲಿದ್ದು, ಸೋಮವಾರ ಈ ಹೋರಾಟಕ್ಕೆ 45 ವರ್ಷ ತುಂಬಲಿದೆ.1980ರ ಅಂದಿನ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಲ್ಲಿಯ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ನೀರಾವರಿ ಜಮೀನುಗಳ ಮೇಲೆ ನೀರಿನ ಕರ ಹೇರಿತ್ತು. ತಾಲೂಕಿನ ರೈತರ ಪರಿಸ್ಥಿತಿ ಆರ್ಥಿಕವಾಗಿ ಸರಿ ಇಲ್ಲದ್ದರಿಂದ ನೀರಿನ ಕರ ಕಟ್ಟುವುದು ಕಷ್ಟವಾಗಿದೆ. ಆದ್ದರಿಂದ ಕರ ಮನ್ನಾ ಮಾಡಬೇಕೆಂದು ಸರ್ಕಾರಕ್ಕೆ ರೈತರು ಪರಿ ಪರಿಯಾಗಿ ಬೇಡಿಕೊಂಡರೂ ಸರ್ಕಾರ ನೀರಿನ ಕರ ಮನ್ನಾ ಮಾಡದೆ ರೈತನ ಜಮೀನು ಕಬ್ಜಾ ಕಾಲಂನಲ್ಲಿ ಸರ್ಕಾರವೆಂದು ನಮೂದು ಮಾಡುತ್ತೇವೆ ಎಂದು ಎಚ್ಚರಿಸಿತ್ತು. ಇದರಿಂದ ರೈತರು ರೊಚ್ಚಿಗೆದ್ದರು.

ಆ ವರ್ಷ ಜುಲೈ 21ರಂದು ನರಗುಂದದಲ್ಲಿ ನೀರಿನ ಕರ ವಿರುದ್ಧ ಹೋರಾಡಲು ಸಜ್ಜಾದರು. ವಿವಿಧ ಗ್ರಾಮಗಳಿಂದ ನೂರಾರು ಟ್ರ್ಯಾಕ್ಟರ್ ಮೂಲಕ ರೈತರು ಆಗಮಿಸಿ, ಹಳೇ ತಹಸೀಲ್ದಾರ್‌ ಕಾರ್ಯಾಲಯದ ಮುಂದೆ ಜಮಾಯಿಸಿದರು. ತಹಸೀಲ್ದಾರ್‌ ಕಚೇರಿಗೆ ಬೀಗ ಹಾಕಿ ಹೋರಾಟ ಆರಂಭಿಸಿದರು.

ಗೋಲಿಬಾರ್‌: ಆ ಸಮಯದಲ್ಲಿ ತಹಸೀಲ್ದಾರ್‌ ತನ್ನ ಸೇವೆಗೆ ಕಚೇರಿ ಒಳಗೆ ಹೋಗಲು ಪ್ರಯತ್ನಿಸಿದರು. ಆದರೆ ರೈತರು ತಹಸೀಲ್ದಾರರನ್ನು ತಡೆದಿದ್ದರಿಂದ ರೈತರು ಮತ್ತು ಈ ಅಧಿಕಾರಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ರೈತರ ಮೇಲೆ ಲಾರಿ ಚಾರ್ಜ್‌ ಮಾಡಿದರು. ರೈತರು ರೊಚ್ಚಿಗೆದ್ದು ತಹಸೀಲ್ದಾರ್‌ ಕಾರ್ಯಾಲಯಕ್ಕೆ ಬೆಂಕಿ ಹಚ್ಚಿದರು. ಈ ಸಮಯದಲ್ಲಿ ಪೊಲೀಸರು ಗೋಲಿಬಾರ್‌ ಮಾಡಿದರು. ಚಿಕ್ಕನರಗುಂದ ಗ್ರಾಮದ ಯುವ ರೈತ ಈರಪ್ಪ ಕಡ್ಲಿಕೊಪ್ಪ ಎದೆಗೆ ಗುಂಡು ತಾಗಿ ಮೃತಪಟ್ಟರು. ಆನಂತರ ಹೋರಾಟ ನಡೆದ ಸ್ಥಳ ದೊಡ್ಡ ರಣರಂಗವೆ ಆಗಿ ಪೊಲೀಸರು, ಅಧಿಕಾರಿಗಳ ಮಧ್ಯೆ ದೊಡ್ಡ ಹೋರಾಟವೇ ನಡೆದು ಹೋಯಿತು.

ಹುತಾತ್ಮರಾದ ರೈತರು: ಇದೇ ಸಮಯದಲ್ಲಿ ನವಲಗುಂದ ತಾಲೂಕಿನಲ್ಲಿ ನೀರಿನ ಕರ ವಿರುದ್ಧ ಹೋರಾಟ ನಡೆದಿತ್ತು. ನರಗುಂದದಲ್ಲಿ ಪೊಲೀಸರ ಗುಂಡಿಗೆ ರೈತ ಬಲಿಯಾಗಿರುವುದು ತಿಳಿದು ನವಲಗುಂದ ರೈತರು ಹೋರಾಟ ಉಗ್ರಗೊಳಿಸಿದರು. ಅಲ್ಲಿಯೂ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ರೈತ ಬಸಪ್ಪ ಲಕ್ಕುಂಡಿ ಎಂಬ ರೈತ ಪೊಲೀಸರ ಗುಂಡಿಗೆ ಬಲಿಯಾದರು. ಮುಂದೆ ಈ ನಾಡಿನಲ್ಲಿ ರೈತರ ದೊಡ್ಡ ಹೋರಾಟ ನಡೆದು ಅಂದಿನ ಗುಂಡೂರಾವ್‌ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಪತನವಾಯಿತು. ಹೀಗಾಗಿ ಈ ಹೋರಾಟ ಆಳುವ ಸರ್ಕಾರಗಳಿಗೆ ದೊಡ್ಡ ಪಾಠವಾಗಿ ಇತಿಹಾಸದಲ್ಲಿ ಉಳಿದಿದೆ.

ಆಚರಣೆಗೆ ಸೀಮಿತ: ಪ್ರತಿ ವರ್ಷ ಜು. 21ರಂದು ವೀರಪ್ಪ ಕಡ್ಲಿಕೊಪ್ಪ ಅವರ ಹುತಾತ್ಮ ದಿನಾಚರಣೆಗೆ ರಾಜ್ಯ, ದೇಶಗಳ ವಿವಿಧೆಡೆಯಿಂದ ರೈತ ಮುಖಂಡರು ಇಲ್ಲಿಗೆ ಆಗಮಿಸುತ್ತಾರೆ. ವೀರಗಲ್ಲಿಗೆ ಮಾಲೆ ಹಾಕಿದ ನಾಯಕರು ಉಗ್ರ ಭಾಷಣ ಮಾಡುತ್ತಾರೆ, ಹೋರಾಟ ಅಲ್ಲಿಗೇ ಸೀಮಿತವಾಗಿದೆ.

ವೀರಗಲ್ಲಿಗೆ ಸ್ವಂತ ಜಾಗ: ಖಾಸಗಿ ಜಾಗದಲ್ಲಿ ರೈತ ಹುತಾತ್ಮನ ವೀರಗಲ್ಲು ಸ್ಥಾಪನೆ ಮಾಡಲಾಗಿದೆ. ಕಳೆದ 44 ವರ್ಷಗಳಿಂದ ರೈತ ಹುತಾತ್ಮ ದಿನಾಚರಣೆ ನಡೆಯುತ್ತಿದೆ. ಈ ವರ್ಷ ರೈತರು ಜಾಗದ ಮಾಲೀಕರಾದ ದೇಸಾಯಿಗೌಡ ಪಾಟೀಲ ಮತ್ತು ಸಲೀಂ ಮೇಗಲಮನಿ ಅವರ ಮನವೊಲಿಸಿದ್ದು, ಅರ್ಧ ಗುಂಟೆ ಜಾಗ ಕೊಡಲು ಅವರು ಒಪ್ಪಿದ್ದಾರೆ. ಇಬ್ಬರು ಮಾಲೀಕರು ಬಾಂಡ್‌ನಲ್ಲಿ ಅರ್ಧ ಗುಂಟಿ ಜಾಗ ನೀಡುತ್ತೇವೆ ಎಂದು ಮುಚ್ಚಳಿಕೆ ಪತ್ರ ಬರೆದು ಕೊಟ್ಟದ್ದಾರೆ ಎಂದು ಕರ್ನಾಟಕ ರೈತ ಸೇನೆ ರಾಜ್ಯ ಅಧ್ಯಕ್ಷ ಶಂಕ್ರಣ್ಣ ಅಂಬಲಿ ತಿಳಿಸಿದ್ದಾರೆ.ರೈತ ಸಮುದಾಯ ಸರ್ಕಾರದ ವಿರುದ್ಧ ಹೋರಾಟ ಮಾಡಲು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಮಾತ್ರ ರೈತನ ಬೇಡಿಕೆಗಳಾದ ಕಳಸಾ ಬಂಡೂರಿ ಯೋಜನೆ ಜಾರಿಯಾಗಲು ಸಾಧ್ಯ ಆಗುತ್ತದೆ ಎಂದು ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.