5,8,9,11ನೇ ಕ್ಲಾಸ್‌ ಬೋರ್ಡ್‌ ಪರೀಕ್ಷೆ ಹೈಕೋರ್ಟ್‌ನಲ್ಲಿ ರದ್ದು

| Published : Mar 07 2024, 01:45 AM IST / Updated: Mar 07 2024, 03:48 PM IST

ಸಾರಾಂಶ

ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5, 8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿಗೆ (11ನೇ ತರಗತಿ) ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಪ್ರತ್ಯೇಕ ಸುತ್ತೋಲೆಯನ್ನು ರದ್ದುಪಡಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5, 8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿಗೆ (11ನೇ ತರಗತಿ) ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಪ್ರತ್ಯೇಕ ಸುತ್ತೋಲೆಯನ್ನು ರದ್ದುಪಡಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ 2023ರ ಅ.6 ಮತ್ತು 9ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ‘ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ’ (ರುಪ್ಸಾ) ಹಾಗೂ ‘ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ’ (ಅವರ್‌ ಸ್ಕೂಲ್ಸ್‌) ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರ ನ್ಯಾಯಪೀಠ ಈ ತೀರ್ಪು ನೀಡಿದೆ.

ಇದರಿಂದ 5, 8, 9 ಹಾಗೂ 11ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಅಲ್ಲದೆ, ಇದೇ ತರಗತಿಗಳಿಗೆ ಮಾ.11ರಿಂದ ಆರಂಭಗೊಳ್ಳಲಿರುವ ಬೋರ್ಡ್ ಪರೀಕ್ಷೆ ಸಹ ರದ್ದಾದಂತಾಗಿದೆ. 

ಒಂದು ವೇಳೆ ರಾಜ್ಯ ಸರ್ಕಾರ, ಈ ತೀರ್ಪು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದರೆ, ಮತ್ತೊಂದು ಸುತ್ತಿನ ಕಾನೂನು ಹೋರಾಟ ನಡೆಯುವ ಸಾಧ್ಯತೆಯಿದೆ. ಮೇಲ್ಮನವಿ ಸಲ್ಲಿಸುವುದಾಗಿ ಸರ್ಕಾರ ಹೇಳಿದೆ.

ಬೋರ್ಡ್‌ ಎಕ್ಸಾಂ ರದ್ದು ಏಕೆ?:
ಕರ್ನಾಟಕ ಶಿಕ್ಷಣ ಕಾಯ್ದೆ ಸೆಕ್ಷನ್‌ 22 ಮತ್ತು ಸೆಕ್ಷನ್‌ 145(4) ಪ್ರಕಾರ ವಿದ್ಯಾರ್ಥಿಗಳ ಪರೀಕ್ಷೆಯ ಆಂತರಿಕ ಅಥವಾ ಬಾಹ್ಯ ಮೌಲ್ಯಮಾಪನ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೆ, ಕಾಯ್ದೆಯಡಿಯಲ್ಲಿ ಸ್ಪಷ್ಟ ನಿಯಮ ರೂಪಿಸಬೇಕು. 

ಯಾವುದೇ ನಿಯಮ ರೂಪಿಸುವ ಅಥವಾ ಬದಲಾವಣೆ ಮಾಡಿ ಆದೇಶ ಪ್ರಕಟಿಸುವ ಮುನ್ನ ಶಾಸನ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯಬೇಕಾಗುತ್ತದೆ. 

ಬೋರ್ಡ್‌ ಪರೀಕ್ಷೆ ವ್ಯವಸ್ಥೆ ಸಹ ಪರೀಕ್ಷೆ ನಡೆಸುವ ಮತ್ತು ಪರೀಕ್ಷಾ ಶುಲ್ಕ ಸ್ವೀಕಾರಕ್ಕೆ ಸಂಬಂಧಿಸಿದ ವಿಷಯ ಒಳಗೊಂಡಿದೆ. ಸರ್ಕಾರ ಮಾತ್ರ ನಿಯಮಗಳನ್ನು ರೂಪಿಸದೇ ನೇರವಾಗಿ ಅಧಿಸೂಚನೆ ಹೊರಡಿಸಿ ಬೋರ್ಡ್ ಪರೀಕ್ಷೆ ನಿಗದಿಪಡಿಸಿದೆ ಎಂದು ತೀರ್ಪಿನಲ್ಲಿ ನ್ಯಾಯಪೀಠ ಆಕ್ಷೇಪಿಸಿದೆ.

ಅಲ್ಲದೆ, ನಿಯಮಗಳನ್ನು ರೂಪಿಸುವ ಬದಲು ಸುತ್ತೋಲೆ ಹೊರಡಿಸಿ ಎಲ್ಲ ಶಾಲೆಗಳು ಪಾಲನೆ ಮಾಡುವಂತೆ ಬಲವಂತ ಮಾಡಲಾಗಿದೆ. ಸುತ್ತೋಲೆ ಮೂಲಕ ನಿಯಮ ಜಾರಿಗೊಳಿಸಲು ಸಾಧ್ಯವಿಲ್ಲ. 

ಆದ್ದರಿಂದ ಸುತ್ತೋಲೆ ಹೊರಡಿಸುವ ಮೂಲಕ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಮುಂದಾಗಿರುವ ಶಿಕ್ಷಣ ಇಲಾಖೆಯ ಕ್ರಮ ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್​ 22 ಮತ್ತು 145(4)ರ ಸ್ಪಷ್ಟ ಉಲ್ಲಂಘನೆಯಾಗಿದೆ ಹಾಗೂ ದೋಷಪೂರಿತವಾಗಿದೆ. 

ಆದ್ದರಿಂದ ಸುತ್ತೋಲೆಗಳು ರದ್ದುಪಡಿಸಲು ಅರ್ಹವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.ಪರೀಕ್ಷೆ ವ್ಯವಸ್ಥೆಯಲ್ಲಿನ ಬದಲಾವಣೆಯು ಅತ್ಯಂತ ಮಹತ್ವದ ವಿಚಾರವಾಗಿದ್ದು, ಬೃಹತ್‌ ಪ್ರಮಾಣದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವಂತಹದ್ದಾಗಿದೆ. 

ಹಾಗಾಗಿ, ಪರೀಕ್ಷೆ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದಲ್ಲಿ ಶಿಕ್ಷಣ ಇಲಾಖೆಯು ಯಾವುದೇ ಆಕ್ಷೇಪಗಳು ಇಲ್ಲದಂತೆ ಮತ್ತು ಕಾಯ್ದೆಯಲ್ಲಿ ನಿಗದಿ ಪಡಿಸಿರುವ ಕಾರ್ಯವಿಧಾನಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್‌ ತೀರ್ಪಿನಲ್ಲಿ ಸಲಹೆ ನೀಡಿದೆ.

ಅರ್ಜಿದಾರರ ವಾದ ಏನಿತ್ತು?
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕೆ.ವಿ.ಧನಂಜಯ, ಸುದರ್ಶನ್‌, ಎ.ವೇಲನ್‌, ಅನಿರುದ್ಧ್‌ ಎ. ಕುಲಕರ್ಣಿ, ಅನನ್ಯ ಕೃಷ್ಣ, ಡಿ.ಎಂ. ಸಾಯಿನಾಥ್‌ ಅವರು ವಾದ ಮಂಡಿಸಿ, ಸರ್ಕಾರದ ಮಾಧ್ಯಮಿಕ ಶಿಕ್ಷಣ ಮಂಡಳಿಗೆ ಸಂಯೋಜಿತವಾಗಿರುವ ಶಾಲೆಗಳಲ್ಲಿ 5, 8, 9 ಮತ್ತು 11 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 22ರ ಪ್ರಕಾರ ಈ ಅಧಿಸೂಚನೆ ಹೊರಡಿಸಲಾಗಿದೆ. 

ಸೆಕ್ಷನ್ 22ರ ಪ್ರಕಾರ ಸರ್ಕಾರ ಪರೀಕ್ಷಾ ವ್ಯವಸ್ಥೆಯನ್ನು ‘ನಿಯಮ’ದ ಮೂಲಕ ಮಾತ್ರ ಪರಿಚಯಿಸಬಹುದೇ ಹೊರತು ಸುತ್ತೋಲೆ ಹೊರಡಿಸುವುದು ಸೇರಿದಂತೆ ಇತರೆ ರೀತಿಯಲ್ಲಿ ಅಲ್ಲ. ಪರೀಕ್ಷಾ ಪದ್ದತಿಯಲ್ಲಿ ಬದಲಾವಣೆ ಮಾಡಬೇಕಾದರೆ, ಕಾಯ್ದೆ ಅಡಿಯಲ್ಲಿ ಮೊದಲು ನಿಯಮಗಳನ್ನು ರೂಪಿಸಬೇಕು. 

ರೂಪಿಸಿದ ನಿಯಮಗಳನ್ನು ಶಾಸಕಾಂಗದಲ್ಲಿ ಚರ್ಚಿಸಿ ಅನುಮೊದನೆಗೊಂಡ ಬಳಿಕವಷ್ಟೇ ಅಂತಿಮಗೊಳಿಸಿ ಜಾರಿಗೆ ತರಬೇಕು. ಆದರೆ, ಪ್ರಕರಣದಲ್ಲಿ ಸರ್ಕಾರ ಯಾವುದೇ ನಿಯಮವನ್ನು ರೂಪಿಸದೆ ಸುತ್ತೋಲೆ ಹೊರಡಿಸಿದೆ ಎಂದು ವಾದ ಮಂಡಿಸಿದರು.

ಅಲ್ಲದೆ, ಸರ್ಕಾರ ಹೊರಡಿಸಿರುವ ದೋಷಪೂರಿತ ಸುತ್ತೋಲೆ/ಅಧಿಸೂಚನೆಗಳಿಗೆ ಕಾನೂನಿನ ಬೆಂಬಲ ಹಾಗೂ ಮಾನ್ಯತೆ ಇಲ್ಲ. ಸರ್ಕಾರದ ಆದೇಶ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಸಹ ಸರ್ಕಾರ ಹೇಳಿದೆ. 

ಆದರೆ, ಅಧಿಸೂಚನೆಗಳು/ ಆದೇಶಗಳು ''''ನಿಯಮಗಳು'''' ಅಲ್ಲ. ಹಾಗಾಗಿ, ಈ ಅಧಿಸೂಚನೆಗಳು/ ಆದೇಶಗಳ ಉಲ್ಲಂಘನೆಯು ಕಾಯ್ದೆಯ ಯಾವುದೇ ನಿಬಂಧನೆಗಳ ಉಲ್ಲಂಘನೆಯಾಗುವುದಿಲ್ಲ. ಸರ್ಕಾರ ತನ್ನ ಸುತ್ತೋಲೆಯನ್ನು ಸಮರ್ಥಿಸಿಕೊಳ್ಳಲು ಕರ್ನಾಟಕ ಶಿಕ್ಷಣ ಕಾಯ್ದೆ ಸೆಕ್ಷನ್‌ 7 ಅನ್ನು ಆಶ್ರಯಿಸಿದೆ. 

ಆ ಸೆಕ್ಷನ್ 7 ಸಹ ಸರ್ಕಾರದ ಸುತ್ತೋಲೆಯನ್ನು ಬೆಂಬಲಿಸುವುದಿಲ್ಲ. ಸೆಕ್ಷನ್‌ 7 ಅನ್ನು ನಿಯಮಗಳ ಅನುಪಸ್ಥಿತಿಯಲ್ಲಿ ಪರೀಕ್ಷಾ ಯೋಜನೆಯನ್ನು ಹೇರುವ ಅಧಿಕಾರವನ್ನು ಸರ್ಕಾರಕ್ಕೆ ನೀಡುತ್ತದೆ ಎಂದು ಅರ್ಥೈಸಲಾಗುವುದಿಲ್ಲ ಎಂದು ವಕೀಲರು ಬಲವಾಗಿ ವಾದಿಸಿದರು.

ಅದೇ ರೀತಿ ಆರ್‌ಟಿಇ ಕಾಯ್ದೆ ಸೆಕ್ಷನ್ 30ರ ಪ್ರಕಾರ ಪ್ರಾಥಮಿಕ ಶಿಕ್ಷಣದವರೆಗೆ ಬೋರ್ಡ್ ಪರೀಕ್ಷೆ ಬರೆಯವಂತೆ ಮಕ್ಕಳಿಗೆ ಬಲವಂತಪಡಿಸುವಂತಿಲ್ಲ. 

ಸೆಕ್ಷನ್ 16ರ ಪ್ರಕಾರ 5 ಮತ್ತು 8ನೇ ತರಗತಿ ಮಕ್ಕಳಿಗೆ ಸಾಮಾನ್ಯ ವಾರ್ಷಿಕ ಪರೀಕ್ಷೆ ನಡೆಸಬೇಕು. ಇವರೆಡಕ್ಕೂ ವಿರುದ್ಧವಾಗಿ ಸರ್ಕಾರ ಸುತ್ತೋಲೆ/ಅಧಿಸೂಚನೆ ಹೊರಡಿಸಿದೆ. ಈ ಪ್ರಕರಣದಲ್ಲಿ ಸರ್ಕಾರ ಈ ಕಾರ್ಯ ವಿಧಾನವನ್ನು ಪಾಲಿಸಿಲ್ಲ. ಸುತ್ತೋಲೆಗಳು ಕೇವಲ ಆದೇಶವಾಗಿದ್ದು, ದೋಷಪೂರಿತವಾಗಿವೆ ಎಂದು ವಾದ ಮಂಡಿಸಿದರು.

ಅಂತಿಮವಾಗಿ ಶಿಕ್ಷಣ ಇಲಾಖೆಯ ಸುತ್ತೋಲೆ ಕೇವಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. ಇದು ಪಠ್ಯಕ್ರಮದ ಭಾಗವಲ್ಲ. ಆದರೆ, ಬೋರ್ಡ್ ಪರೀಕ್ಷೆಗೆ ಕಲಿಕಾ ಚೇತರಿಕೆ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಸಿದ್ಧಪಡಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಖಾಸಗಿ ಶಾಲೆಗಳ ಪಠ್ಯಕ್ರಮ ಹಾಗೂ ಸರ್ಕಾರಿ ಶಾಲೆಗಳ ಪಠ್ಯಕ್ರಮ ವಿಭಿನ್ನವಾಗಿವೆ. 

ಕಲಿಕಾ ಚೇತರಿಕೆ ಪಠ್ಯಕ್ರಮದ ಪ್ರಶ್ನೆಗಳಿಗೆ ಖಾಸಗಿ ಶಾಲಾ ಮಕ್ಕಳು ಉತ್ತರಿಸಲು ಕಷ್ಟ. ಹಾಗಾಗಿ, ಎಲ್ಲ ಮಕ್ಕಳಿಗೂ ಅನ್ವಯವಾಗುವಂತೆ ಬೋರ್ಡ್ ಮಟ್ಟದ ಪರೀಕ್ಷೆ ನಡೆಸುವುದಕ್ಕೆ ಅವಕಾಶ ನೀಡಬಾರದು. ಸರ್ಕಾರದ ಸುತ್ತೋಲೆ/ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದರು.

ಸರ್ಕಾರದ ಸಮರ್ಥನೆ ಏನು?
ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 22ರಡಿ ನಿಯಮಗಳನ್ನು ರೂಪಿಸುವುದು ಕಡ್ಡಾಯವಲ್ಲ. ಯಾವ ಸಂದರ್ಭದಲ್ಲಿ ನಿಯಮಗಳನ್ನು ರೂಪಿಸಬೇಕು ಎಂಬ ವಿಶೇಷಾಧಿಕಾರವನ್ನು ಸರ್ಕಾರ ಹೊಂದಿದೆ. 

ಉದ್ದೇಶಿತ ಬೋರ್ಡ್ ಪರೀಕ್ಷೆ ಅಥವಾ ಮೌಲ್ಯಮಾಪನ ಪೂರ್ವಸಿದ್ಧತಾ ಸ್ವರೂಪದ್ದಾಗಿದ್ದು, 10 ಮತ್ತು 12ನೇ ತರಗತಿಗೆ ಎದುರಾಗುವ ಬೋರ್ಡ್ ಪರೀಕ್ಷೆಗೆ ಮಕ್ಕಳನ್ನು ಸನ್ನದ್ಧಗೊಳಿಸುವ ಉದ್ದೇಶವಾಗಿದೆ. 

ಶಿಕ್ಷಣದ ಗುಣಮಟ್ಟದಲ್ಲಿ ಏಕರೂಪತೆ ತರುವ ಉದ್ದೇಶವೂ ಇದು ಒಳಗೊಂಡಿದೆ. ಕಲಿಕಾ ಚೇತರಿಕೆ ಕೂಡಾ ಪಠ್ಯಕ್ರಮದ ಭಾಗವೇ ಆಗಿದೆ. ಸಾಮಾನ್ಯ ಪಠ್ಯಕ್ರಮದಿಂದಲೇ ಕಲಿಕಾ ಚೇತರಿಕೆ ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಅದರಂತೆ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಸರ್ಕಾರ ಮನವಿ ಮಾಡಿತ್ತು.

ಕಳೆದ ವರ್ಷವೂ ಈ ಸಮಸ್ಯೆ ಆಗಿತ್ತು: ಕಳೆದ ವರ್ಷವೂ 5 ಮತ್ತು 8ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆಗೆ ನಿಗದಿಪಡಿಸಿ ‘ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ-2009ರಡಿ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಆ ಅಧಿಸೂಚನೆಯನ್ನೂ ರುಪ್ಸಾ ಹಾಗೂ ಅವರ್‌ ಸ್ಕೂಲ್ಸ್‌ ಸಂಘಟನೆಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. 

ಅಧಿಸೂಚನೆಯನ್ನು 2023ರ ಫೆಬ್ರವರಿಯಲ್ಲಿ ನ್ಯಾ. ಪ್ರದೀಪ್‌ಸಿಂಗ್ ಯೆರೂರ್ ಅವರ ನ್ಯಾಯಪೀಠ ರದ್ದುಪಡಿಸಿತ್ತು. ಅದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಆಗ ಪರೀಕ್ಷೆಗೆ ಎರಡು-ಮೂರು ದಿನಗಳಷ್ಟೇ ಇದ್ದ ಕಾರಣ ಪರೀಕ್ಷೆಗಳು ನಡೆಯಲಿ. 

ಆದರೆ, ಫಲಿತಾಂಶ ಮೇಲ್ಮನವಿಯಲ್ಲಿನ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ವಿಭಾಗೀಯ ನ್ಯಾಯಪೀಠ ಹೇಳಿತ್ತು. ಈ ಮಧ್ಯೆ ಮೇಲ್ಮನವಿಯನ್ನು ಸರ್ಕಾರ ವಾಪಸ್ ಪಡೆದುಕೊಂಡಿತ್ತು. 

ಹಾಗಾಗಿ, ಈಗ ಮಾ.6 ರಂದು ನೀಡಿರುವ ತೀರ್ಪಿನಿಂದ ಕಳೆದ ವರ್ಷ ಫೆಬ್ರವರಿಯಲ್ಲಿ ನೀಡಿದ್ದ ತೀರ್ಪು ಸಹ ಅಂತಿಮ ಸ್ವರೂಪ ಪಡೆದುಕೊಂಡಂತಾಗಿದೆ.

ನಿಯಮಕ್ಕೆ ಅನುಮೋದನೆ ಇಲ್ಲ: ಬೋರ್ಡ್‌ ಪರೀಕ್ಷೆ ಪರಿಚಯಿಸಬೇಕಾದರೆ ಮೊದಲಿಗೆ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಕರಡು ನಿಯಮ ರೂಪಿಸಿ ಸಾರ್ವಜನಿಕ ಪ್ರಕಟಣೆ ನೀಡಿ ಆಕ್ಷೇಪಣೆ ಆಹ್ವಾನಿಸಬೇಕು. 

ಬಳಿಕ ಶಾಸಕಾಂಗದಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕು. ಈ ಪ್ರಕರಣದಲ್ಲಿ ಸರ್ಕಾರವು ಅಧಿಸೂಚನೆ ಹೊರಡಿಸಿದೆ ಹೊರತು ನಿಯಮ ರೂಪಿಸಿ ಶಾಂಸಕಾಂಗದಿಂದ ಅನುಮೋದನೆ ಪಡೆದಿಲ್ಲ.- ಕೆ.ವಿ. ಧನಂಜಯ, ಸುಪ್ರೀಂ ಕೋರ್ಟ್‌ ಹಿರಿಯ ವಕೀಲರು

ಯಾತನೆ ಆಗುವ ನಿಯಮ: ಸರ್ಕಾರ ಅಧಿಸೂಚನೆ ಹೊರಡಿಸಿ ಬೋರ್ಡ್‌ ಪರೀಕ್ಷೆ ನಡೆಸಲು ಪರಿಚಯಲು ಹೇಗೆ ಸಾಧ್ಯ? 5, 8, 9 ತರಗತಿಯ ಮಕ್ಕಳು ಬೋರ್ಡ್‌ ಪರೀಕ್ಷೆ ಬರೆಯುವಷ್ಟು ಮಾನಸಿಕವಾಗಿ ಪ್ರಬುದ್ಧವಾಗಿರುವುದಿಲ್ಲ. 

ಬೋರ್ಡ್‌ ಪರೀಕ್ಷೆಯಿಂದ ಆ ವಿದ್ಯಾರ್ಥಿಗಳು ಮಾನಸಿಕ ಯಾತನೆ ಅನುಭವಿಸುತ್ತಾರೆ. ಈ ವಾದ ಪುರಸ್ಕರಿಸಿ ಸರ್ಕಾರದ ಅಧಿಸೂಚನೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.- ಸುದರ್ಶನ್‌, ರುಪ್ಸಾ ಪರ ವಕೀಲರು