ಶಾಲಾ ಕೊಠಡಿ ನಿರ್ಮಾಣಕ್ಕೆ ₹5 ಕೋಟಿ ಅನುದಾನ

| Published : Sep 10 2024, 01:38 AM IST

ಸಾರಾಂಶ

ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣಕ್ಕೆ ₹5 ಕೋಟಿ ಮೀಸಲಿಡಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣಕ್ಕೆ ₹5 ಕೋಟಿ ಮೀಸಲಿಡಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಸೋಮವಾರ ನಂದಿಹಳ್ಳಿ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಅಹವಾಲು ಆಲಿಸಿ ಅವರು ಮಾತನಾಡಿದರು. ಶಾಲೆಗಳ ಅಭಿವೃದ್ಧಿಯೇ ನನ್ನ ಗುರಿ. ಇದರಲ್ಲಿ ಯಾವುದೇ ರಾಜಕೀಯ ಮಾಡಬಾರದು. ಶಾಲೆಗೆ ಅಗತ್ಯವಿರುವ ಅತಿಥಿ ಶಿಕ್ಷಕರ ನೇಮಕಕ್ಕೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಗ್ರಾಮಗಳ ಅಭಿವೃದ್ಧಿ ಸೇರಿ ಸರ್ವಜನಾಂಗಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸಲು, ಮರಾಠಿ ಶಾಲೆಗಳ ಅಭಿವೃದ್ಧಿಗೂ ಬದ್ಧವಾಗಿದ್ದೇನೆ ಎಂದರು. ಈ ವೇಳೆ ಯುವರಾಜ ಕದಂ, ರೇಖಾ ಶಿಂಗೆನ್ನವರ, ಮಹಾದೇವ ಜಾಧವ, ಶಶಿಕಾಂತ ಪಾಟೀಲ ಇತರರು ಉಪಸ್ಥಿತರಿದ್ದರು.

ನಂತರ ಗ್ರಾಮದ ಹಿರಿಯ ಮರಾಠಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಕುಂದುಕೊರತೆ ಆಲಿಸಿ, ಮೂಲಸೌಕರ್ಯ ಒದಗಿಸುವ ಭರವಸೆ ನೀಡಿದರು. ಈ ವೇಳೆ ಗ್ರಾಮದ ಹಿರಿಯರು, ಶಾಲಾ ಸಿಬ್ಬಂದಿ, ಶಾಲಾ ಮಕ್ಕಳು ಉಪಸ್ಥಿತರಿದ್ದರು.ಇದಾದ ನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ ಸಚಿವರು, ಅಹವಾಲು ಸ್ವೀಕರಿಸಿದರು. ಜನಸ್ಪಂದನಾ ಕಾರ್ಯಕ್ರಮದ ಮೂಲಕ ಜನರ ಸಂಕಷ್ಟ ಆಲಿಸುವುದು ನನ್ನ ಕರ್ತವ್ಯ, ಮನವಿ ಸ್ವೀಕರಿಸಿ ಪರಿಹಾರ ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.