ಸಂಪೂರ್ಣ ಹಾನಿಯಾದ ಮನೆಗೆ 5 ಲಕ್ಷ ಪರಿಹಾರ ನೀಡಿ: ಯಶ್ಪಾಲ್ ಸುವರ್ಣ

| Published : Jul 06 2024, 12:54 AM IST

ಸಾರಾಂಶ

ಉಡುಪಿ ಸಮೀಪದ ಕರ್ಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಪಾಡಿ ಭಾಗದಲ್ಲಿ ಭಾರಿ ಗಾಳಿ ಹಾಗೂ ಮಳೆಯಿಂದ ಹಾನಿಗೀಡಾದ ಪ್ರದೇಶ, ಮನೆಗಳಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಮಳೆಯಿಂದ ಸಂಪೂರ್ಣ ಹಾನಿಗೊಳಗಾಗಿರುವ ಮನೆಗಳ ಕುಟುಂಬಸ್ಥರಿಗೆ 5 ಲಕ್ಷ ರು. ಪರಿಹಾರ ನೀಡಬೇಕು ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಅವರು ಶುಕ್ರವಾರ ಉಡುಪಿ ಸಮೀಪದ ಕರ್ಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಪಾಡಿ ಭಾಗದಲ್ಲಿ ಭಾರಿ ಗಾಳಿ ಹಾಗೂ ಮಳೆಯಿಂದ ಹಾನಿಗೀಡಾದ ಪ್ರದೇಶ, ಮನೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳದಲ್ಲಿ ಉಪಸ್ಥಿತರಿದ್ದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಹಾನಿಗೀಡಾದ ಮನೆ ಹಾಗೂ ತೋಟ ಹಾಗೂ ಕೃಷಿ ಬೆಳೆ ಹಾನಿಯ ಬಗ್ಗೆ ವರದಿ ನೀಡಿ ಗರಿಷ್ಠ ಪರಿಹಾರಕ್ಕೆ ಶಿಫಾರಸ್ಸು ಮಾಡುವಂತೆ ಸೂಚನೆ ನೀಡಿದರು.

ಸಂಪೂರ್ಣ ಹಾನಿಯಾದ ಮನೆಗಳ ಮರು ನಿರ್ಮಾಣಕ್ಕೆ ಈ ಹಿಂದೆ ರಾಜ್ಯ ಸರ್ಕಾರ 5 ಲಕ್ಷ ರು. ಪರಿಹಾರ ನೀಡುತ್ತಿತ್ತು. ಅದನ್ನು ಕಾಂಗ್ರೆಸ್ ಸರ್ಕಾರ 1.50 ಲಕ್ಷ ರು.ಗೆ ಕಡಿತಗೊಳಿಸಿದ್ದು, ಇದು ಮನೆ ಮರು ನಿರ್ಮಾಣಕ್ಕೆ ಸಾಲುವುದಿಲ್ಲ. ಆದ್ದರಿಂದ ಸರ್ಕಾರ ಈ ಮೊತ್ತವನ್ನು 5 ಲಕ್ಷ ರು.ಗಳಿಗೆ ಏರಿಸಬೇಕು ಹಾಗೂ ತುರ್ತು ಸಂದರ್ಭದಲ್ಲಿ 25 ಸಾವಿರ ರು.ಗಳನ್ನು ಸ್ಥಳದಲ್ಲಿಯೇ ವಿತರಣೆ ಮಾಡಬೇಕು ಎಂದವರು ಹೇಳಿದರು.

ಘಟನೆ ಸಂಭವಿಸಿದ ಕೂಡಲೇ ಶಾಸಕರ ಸೂಚನೆ ಮೇರೆಗೆ ರಾತ್ರೋರಾತ್ರಿ ತಕ್ಷಣ ಪರಿಹಾರ ಕಾರ್ಯಾಚರಣೆಯಲ್ಲಿ ಸಹಕರಿಸಿದ ಕಂದಾಯ, ಅರಣ್ಯ ಅಗ್ನಿಶಾಮಕ, ಮೆಸ್ಕಾಂ, ಪೊಲೀಸ್ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ಕರ್ಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನಕರ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ಸೌಮ್ಯ, ಪಂ.ಅ.ಅಧಿಕಾರಿ ರವಿರಾಜ್, ಬಿಜೆಪಿ ಮಂಡಲ ಅಧ್ಯಕ್ಷ ರಾಜೀವ್ ಕುಲಾಲ್, ಕಾರ್ಯದರ್ಶಿ ನವೀನ್ ಪುತ್ರನ್, ಪಕ್ಷದ ಪ್ರಮುಖರಾದ ಆದರ್ಶ ಶೆಟ್ಟಿ ಕೆಂಜೂರು, ವಿನುತ್ ಶೆಟ್ಟಿ, ಸುಧಾಕರ ಸುವರ್ಣ, ರಘು ನಾಯ್ಕ್, ಉಪೇಂದ್ರ, ಆಶಾ, ಅಕ್ಷಯ್, ಮಣಿಕಂಠ ಮೊದಲಾದವರು ಉಪಸ್ಥಿತರಿದ್ದರು.