ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಎಲ್‌ಕೆಜಿಯಿಂದ ಪಿಜಿ ವರೆಗಿನ ವಿದ್ಯಾಭ್ಯಾಸದಲ್ಲಿ ಅಂಗವಿಕಲರಿಗೆ ಶೇ.5ರಷ್ಟು ಸ್ಥಾನ ಮೀಸಲಿರಿಸಲಾಗಿದೆ ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ಅನುಷ್ಠಾನಗೊಳಿಸುವ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ರಾಷ್ಟ್ರದಲ್ಲಿನ ವಿಕಲಚೇತನ ವ್ಯಕ್ತಿಗಳಿಗೆ ಅಗತ್ಯವಿರುವ ಆರೋಗ್ಯ, ಶೈಕ್ಷಣಿಕ, ಉದ್ಯೋಗ ಮತ್ತು ತರಬೇತಿ ಹಾಗೂ ಸಾಮಾಜಿಕ ಭದ್ರತೆಗಳಂತಹ ಪುನರ್ವಸತಿ ಸೇವೆ ಕಲ್ಪಿಸುವುದರ ಮೂಲಕ ಅವರಿಗೆ ಸಮಾನ ಅವಕಾಶ ಕಲ್ಪಿಸಿ ಅವರನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ನ್ನು ಜಾರಿಗೆ ತಂದಿದ್ದು, ಈ ಅಧಿನಿಯಮವನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಅಂಗವಿಕಲ ವ್ಯಕ್ತಿಗಳ ನಿಯಮಗಳು-2019ನ್ನು ರೂಪಿಸಿದೆ. ವಿಕಲಚೇತನ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವುದರ ಮೂಲಕ ಅವರ ಹಕ್ಕುಗಳನ್ನು ಸಂರಕ್ಷಿಸಲು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.ರಾಜ್ಯದಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಅನುಷ್ಠಾನಕ್ಕಾಗಿ ರಾಜ್ಯ ಆಯುಕ್ತರ ಕಚೇರಿಯನ್ನು ಸ್ಥಾಪಿಸಿದ್ದು, ಈ ಕಚೇರಿಗೆ ಆಯುಕ್ತರನ್ನು ನೇಮಕ ಮಾಡಿದೆ. ಅಲ್ಲದೆ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ಸಕ್ಷನ್ 80ರ ಪ್ರಕಾರ ಆಯುಕ್ತರಿಗೆ ಕೆಲ ಅಧಿಕಾರಗಳನ್ನು ಪ್ರತ್ಯಯೋಜಿಸಲಾಗಿದ್ದು, ಜಿಲ್ಲೆಗಳಲ್ಲಿ ವಿವಿಧ ಇಲಾಖೆಗಳು ಈ ಅಧಿನಿಯಮವನ್ನು ಅನುಷ್ಠಾನಗೊಳಿಸುತ್ತಿರುವ ಬಗ್ಗೆ ಇಲಾಖಾವಾರು ಜಿಲ್ಲಾ ಅಂಗವಿಕಲರ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಶಿಕ್ಷಣ ಮೀಸಲಾತಿ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಅಂಗವಿಕಲರಿಗಾಗಿಯೇ ಇರುವ ಶೇ. 4 ಮತ್ತು 5 ರ ಮೀಸಲಾತಿ ಇದ್ದು, ಅದರ ಪರಿಶೀಲನೆಗಾಗಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಲ್ಲಾ ಸಾರ್ವಜನಿಕ ಸ್ಥಳಗಳು ವಿಕಲಚೇತನ ಸ್ನೇಹಿಯಾಗಿರಬೇಕು. ಆ ಸ್ಥಳಗಳಲ್ಲಿ ಅಂಗವಿಕಲರ ಓಡಾಟಕ್ಕೆ ಸುಲಭ ದಾರಿ, ವೀಲ್ ಚೇರ್ ವ್ಯವಸ್ಥೆ, ಶೌಚಾಲಯ ಸೇರಿದಂತೆ ಅಗತ್ಯವಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳಿರಬೇಕು. ಈ ಹಿನ್ನೆಲೆ ಭಾರತ ರಾಷ್ಟ್ರದಲ್ಲಿ ಸುಗಮ್ ಯಾತ್ರಾ ಕಾರ್ಯಕ್ರಮ ಜಾರಿಯಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಹಳ್ಳಿ-ಹಳ್ಳಿಗಳಲ್ಲಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಒಂದು ಆ್ಯಪ್ ಸಿದ್ಧಪಡಿಸಲಾಗಿದ್ದು, ಆ್ಯಪ್‌ನಲ್ಲಿ ಅಲ್ಲಿನ ವ್ಯವಸ್ಥೆಯ ಬಗ್ಗೆ ವಿಕಲಚೇತನರಿಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಅಂಗವಿಕಲರಿಗೆ ಇರುವ ಸರ್ಕಾರದ ಸೌಲಭ್ಯ ಒದಗಿಸಲು ಅಂಗವಿಕಲರಿಂದ ಅಂಗವಿಕಲರ ಅಭಿವೃದ್ಧಿ ಎಂಬಂತೆ ಗ್ರಾಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಕರ್ನಾಟಕದಲ್ಲಿ ಸುಮಾರು 7 ಸಾವಿರ ಅಂಗವಿಕಲರ ಪುನರವಸತಿ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿರುವುದು ದೇಶದಲ್ಲಿಯೇ ನಮ್ಮ ರಾಜ್ಯ ಮಾದರಿಯಾಗಿದೆ ಎಂದರು.ಭಾರತ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ವಿಶೇಷಚೇತನರ ಆರೈಕೆದಾರರ ರಕ್ಷಣೆ ಎಂಬ ಕಾರ್ಯಕ್ರಮವನ್ನು ಎಪ್ರಿಲ್‌ನಿಂದ ಜಾರಿಗೆ ತರಲಾಗುತ್ತಿದ್ದು, ಇದರ ಉದ್ದೇಶ ಅಂಗವಿಕಲರ ಪೋಷಕರಿಗೆ ಪ್ರೋತ್ಸಾಹಿಸುವುದಾಗಿದೆ. ರಾಜ್ಯ ಸರ್ಕಾರದಿಂದ ನಡೆಸುವಂತಹ ಸುಮಾರು 900 ವಸತಿ ಶಾಲೆಗಳಲ್ಲಿ 25 ಪ್ರತಿಶತ ಅಂಗವಿಕಲತೆ ಹೊಂದಿದ ಮಕ್ಕಳಿಗೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೇ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲು ಅವಕಾಶವಿದೆ. ರಾಷ್ಟ್ರೀಯ ಅಂಗವಿಕಲರ ಅಭಿವೃದ್ಧಿ ಹಣಕಾಸು ಸಂಸ್ಥೆಯ ಮೂಲಕ ಪ್ರತಿ ವರ್ಷ ರಾಜ್ಯಕ್ಕೆ ₹100 ಕೋಟಿ ತರಬಹುದಾಗಿದ್ದು, ಅಂಗವಿಕಲರಿಗೆ ₹50 ಲಕ್ಷದವರೆಗೆ ಸಾಲ ಸೌಲಭ್ಯ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿದೆ ಎಂದು ಹೇಳಿದರು. ಈ ಸಂದರ್ಭ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ವಿಕಲಚೇತನರ ಪ್ರತಿನಿಧಿ ಬಿ.ಹಂಪಣ್ಣ ಸೇರಿದಂತೆ ಮತ್ತಿತರರಿದ್ದರು.