ಕನ್ನಡಪ್ರಭ ವಾರ್ತೆ ಬೀದರ್
ವಿಶ್ವಕರ್ಮ ಸಮಾಜವನ್ನು ಎಸ್‌ಟಿಗೆ ಸೇರಿಸುವದರ ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಒತ್ತಾಯಿಸಿ ಬರುವ ಅಕ್ಟೋಬರ್‌ನಲ್ಲಿ 50 ಸಾವಿರ ಜನ ಸೇರಿಸಿ ಬೀದರ್‌ನಿಂದ ಬೆಂಗಳೂರಿಗೆ ಪಾದಯಾತ್ರೆ ಮೂಲಕ ತೆರಳುವ ಯೋಜನೆಯಿದೆ ಎಂದು ವಿಶ್ವಕರ್ಮ ಮಹಾಸಭಾದ ಸಂಸ್ಥಾಪಕ ರಾಜ್ಯಾಧ್ಯಕ್ಷ ಹಾಗೂ ಮಾಜಿ ಎಂಎಲ್ಸಿ ಕೆ.ಪಿ.ನಂಜುಂಡಿ ತಿಳಿಸಿದರು.ಭಾನುವಾರ ನಗರದ ಕುಂಬಾರವಾಡಾ ಬಳಿಯ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೀದರ್ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ್ದ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮ ಸಮಾಜ ಎಸ್‌ಟಿಗೆ ಹೋದಲ್ಲಿ ಜಾತಿ ಹೋದ ಹಾಗಲ್ಲ. ಅಷ್ಟಕ್ಕೂ ಎಸ್‌ಟಿ ಜಾತಿಯಲ್ಲ. ಅದಕ್ಕಿರುವ ಮತ್ತು ಸರ್ಕಾರ ನೀಡಿರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಒಂದು ಅವಕಾಶ ಎಂದು ಸ್ಪಷ್ಟಪಡಿಸಿ, ಇಲ್ಲಿಯವರೆಗೆ ಮೀಸಲಾತಿಗೆ ಸಂಬಂಧಿಸಿದಂತೆ 130ಕ್ಕೂ ಹೆಚ್ಚು ಸಮಾವೇಶಗಳನ್ನು ಮಾಡಿದ್ದೇನೆ. ಅಕ್ಟೋಬರ್‌ನಲ್ಲಿ ಎಲ್ಲ ಸಮಾಜದವರನ್ನೂ ಸೇರಿ ವಿಶ್ವಕರ್ಮ ಸಮಾಜ ಪ್ರಮುಖರ ಪಾದಯಾತ್ರೆ ನಡೆಯಲಿದೆ ಎಂದರು.1977ರಲ್ಲಿ ರಚಿತ ಹಾವನೂರ ಆಯೋಗದ ವರದಿಯಿಂದಲೇ ವಿಶ್ವಕರ್ಮ ಸಮಾಜ ವಂಚನೆಗೊಳಪಟ್ಟಿದೆ. ಗುಡ್ಡಗಾಡು, ಹಳ್ಳಿಗಾಡಿನಿಂದ ಬಂದಂಥ ಈ ವಿಶ್ವಕರ್ಮ ಸಮಾಜಕ್ಕೆ ಪರಿಶಿಷ್ಟ ಪಂಗಡದಲ್ಲಿ ಮೀಸಲಾತಿ ಕೊಡಬೇಕಿತ್ತು. ಆದರೆ ಚಾಮರಾಜನಗರ ಮತ್ತು ದಕ್ಷಿಣ ಕನ್ನಡದಲ್ಲಿ ಮಾತ್ರ ಕಮ್ಮಾರರಿಗೆ ಎಸ್‌ಟಿಯಲ್ಲಿ ಮೀಸಲಾತಿ ಕೊಟ್ಟು ಉಳಿದೆಲ್ಲ ಕಡೆಗೂ ಓಬಿಸಿಗೆ ಸೇರಿಸಿದ್ದಾರೆ ಅಲ್ಲಿ 102 ಸಮಾಜಗಳಿವೆ ಅದರಲ್ಲಿ ಬಲಿಷ್ಠವಾದವು ಬಹುತೇಕ. ಹೀಗಾಗಿ ಶೇ.15ರಲ್ಲಿ ನಮ್ಮವರಿಗೆ ಮೀಸಲಾತಿ ಸಿಗೋದೇ ಇಲ್ಲ ಹೀಗಾಗಿ ಎಸ್‌ಟಿಗೆ ಸೇರಿಸಲು ಕೇಳುತ್ತಿದ್ದೇವೆ ಎಂದು ಹೇಳಿದರು.
ಕುಲಶಾಸ್ತ್ರ ಅಧ್ಯಯನವಾಗಲಿ:
ಅಷ್ಟಕ್ಕೂ ನಾನು ಹೋರಾಟ ಮಾಡಿ ಕುಲಶಾಸ್ತ್ರ ಅಧ್ಯಯನ ಮಾಡಿಸಿದರೆ ರಾಜಕೀಯ ಕುತಂತ್ರವೋ, ನಮ್ಮ ಮೇಲಿನ ಮಲತಾಯಿ ಧೋರಣೆಯೋ ಗೊತ್ತಿಲ್ಲ. ಪ್ರೊ.ನಂಜುಂಡ ಅವರು ಕೊಟ್ಟಿರುವ ವರದಿಯಲ್ಲಿ ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ 5 ಕಸಬುಗಳನ್ನು ಮಾಡುತ್ತಿರುವ ವಿಶ್ವಕರ್ಮರಲ್ಲಿ ಮೀಸಲಾತಿ ಕೊಡುವಂಥಹ ಯಾವುದೇ ಲಕ್ಷಣ ಇಲ್ಲ ಎಂಬ ವರದಿ ನೀಡಿದ್ದಾರೆ. ಒಂದು ಕಡೆ ಕುಳಿತು, ಸಭೆಗಳನ್ನಷ್ಟೇ ಮಾಡಿ, ದುಡ್ಡು ಖರ್ಚು ಮಾಡಿ ವರದಿ ಮಾಡಿರುವ ಅವರು ಗುಡ್ಡಗಾಡು ಪ್ರದೇಶಗಳಿಗೆ ಹಳ್ಳಿಗಾಡುಗಳಿಗೆ ತಿರುಗಾಡಿ ವರದಿ ಮಾಡಿಲ್ಲ ಎಂದು ಬೇಸರಿಸಿದರು.
ಹೀಗಾಗಿ ರಾಜ್ಯ ಸರ್ಕಾರ ವಿಶ್ವಕರ್ಮ ಸಮಾಜದ ಕುರಿತಾಗಿ ಮತ್ತೊಮ್ಮೆ ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶಿಸಿ ಸಮೀಕ್ಷೆ ಮಾಡಿಸಿ ಅದರ ವರದಿ ತಯಾರಿಸಲು ಸರಿಯಾದವರಿಗೆ ಕೊಟ್ಟು ಈ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ಹಂಪಿ ಕಟ್ಟಿದ ಶಿಲ್ಪಿಗಳಿಗಿಲ್ಲ ಮಹತ್ವ:
ಹಂಪಿಯಲ್ಲಿ ವಿಶ್ವಕರ್ಮ ಸಮಾಜದ ಶಿಲ್ಪಿ ವಿಶ್ವವಿಖ್ಯಾತ ಆದರೂ ರಾಜ್ಯ ಸರ್ಕಾರದಿಂದ ನಡೆಯುವ ಹಂಪಿ ಉತ್ಸವದಲ್ಲಿ ನಮ್ಮ ಸಮಾಜದ ಕಾರ್ಯವನ್ನು ಸ್ಮರಿಸೋದೂ, ಸ್ವಾಮೀಜಿಗಳಿರಲಿ ನಮ್ಮಂಥಹ ರಾಜಕೀಯ ಧುರೀಣರನ್ನೂ ಕರೆಸೋದೂ ಇಲ್ಲ, ಕೇವಲ ನೃತ್ಯದಲ್ಲಿಯೇ ಕಾಲ ಕಳೆಯುತ್ತಾರೆ. ಹಾಗೆಯೇ ತಿಂಥಿಣಿ ಮೌನೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ವ್ಯವಸ್ಥೆ ಇಲ್ಲ. ನದಿಯಲ್ಲಿ ಸ್ನಾನ ಮಾಡಲೂ ಆಗದಂಥ ಅಸ್ವಚ್ಛತೆಯಿದೆ. ಹೆಣ್ಣು ಮಕ್ಕಳಿಗೆ ಬಟ್ಟೆ ಬದಲಿಸಲೂ ಜಾಗವಿಲ್ಲ. ಕುಡಿಯಲೂ ನೀರಿಲ್ಲ. ಹೀಗೆಯೇ ನಾವು ರಾಜಕೀಯವಾಗಿ ಅಷ್ಟೇ ಅಲ್ಲ, ಸಾಮಾಜಿಕವಾಗಿಯೂ ನಿರ್ಲಕ್ಷಕ್ಕೊಳಗಾಗಿದ್ದೇವೆ ಎಂದರು.ಸುಲೇಪೇಟ್ ಮಠದ ದೊಡ್ಡೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.