‘ಶೋಲೆ’ ಚಿತ್ರಕ್ಕೆ 50: ಬೆಟ್ಟಕ್ಕಿಲ್ಲ ಅಭಿವೃದ್ಧಿ ಒತ್ತು

| Published : Aug 15 2025, 01:00 AM IST

ಸಾರಾಂಶ

ರಾಮನಗರ: ರಾಮನಗರದಲ್ಲಿರುವ ರಾಮದೇವರಬೆಟ್ಟದಲ್ಲಿ ಚಿತ್ರೀಕರಣಗೊಂಡ ಬಾಲಿವುಡ್ ಎವರ್ ಗ್ರೀನ್ ‘ಶೋಲೆ’ ಚಿತ್ರ ಬಿಡುಗಡೆಗೊಂಡು ಇಂದಿಗೆ 50 ವರ್ಷ ಪೂರ್ಣಗೊಳಿಸುತ್ತಿದೆ.

ರಾಮನಗರ: ರಾಮನಗರದಲ್ಲಿರುವ ರಾಮದೇವರಬೆಟ್ಟದಲ್ಲಿ ಚಿತ್ರೀಕರಣಗೊಂಡ ಬಾಲಿವುಡ್ ಎವರ್ ಗ್ರೀನ್ ‘ಶೋಲೆ’ ಚಿತ್ರ ಬಿಡುಗಡೆಗೊಂಡು ಇಂದಿಗೆ 50 ವರ್ಷ ಪೂರ್ಣಗೊಳಿಸುತ್ತಿದೆ.

1974 ಆಗಸ್ಟ್ 15ರ ಶುಕ್ರವಾರದಂದು ಬಿಡುಗಡೆ ಕಂಡ ‘ಶೋಲೆ’ ಚಿತ್ರ 2025ರ ಆಗಸ್ಟ್ 15ರ ಶುಕ್ರವಾರಕ್ಕೆ 50 ವರ್ಷಗಳನ್ನು ಪೂರೈಸಿದೆ. ಬಿಡುಗಡೆಯಾದ 5- ವರ್ಷಗಳ ಬಳಿಕವೂ ಅದೇ ಕ್ರೇಜ್ ಉಳಿಸಿಕೊಂಡಿದೆ. ಒಮ್ಮೆ ನೋಡಿದರೆ ಮರೆಯಲಾಗದ ಅನುಭವ ನೀಡುವ ಚಿತ್ರ.

70-80ರ ದಶಕದಲ್ಲಿ ನಿರ್ಮಾಣವಾದ ಶೋಲೆ ಚಲನಚಿತ್ರದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ಹೀಗಾಗಿ ಶೋಲೆ ಬಾಲಿವುಡ್ ಎವರ್ ಗ್ರೀನ್ ಸೂಪರ್ ಹಿಟ್ ಚಿತ್ರವಾಗಿದೆ. ಬಾಲಿವುಡ್ ನಟರಾದ ಅಮಿತಾಬ್‌ ಬಚ್ಚನ್, ಧರ್ಮೇಂದ್ರ, ಸಂಜೀವ್ ಕುಮಾರ್, ಹೇಮಮಾಲಿನಿ, ಜಯಾ ಬಚ್ಚನ್, ಅಮ್ಜದ್ ಖಾನ್ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾಗೆ ಸಲ್ಮಾನ್ ಖಾನ್ ತಂದೆ ಸಲೀಮ್ ಹಾಗೂ ಜಾವೇದ್ ಅಖ್ತರ್ ಚಿತ್ರಕಥೆ ಬರೆದಿದ್ದರು. ರಮೇಶ್ ಸಿಪ್ಪಿ ಚಿತ್ರವನ್ನು ನಿರ್ದೇಶನ ಮಾಡಿದ್ದರು.

ಈ ಸಿನಿಮಾದ ಹೆಸರು ಕೇಳಿದಾಕ್ಷಣ ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟ ನೆನಪಾಗುತ್ತದೆ. ಚಿತ್ರದಲ್ಲಿನ ಕಾಲ್ಪನಿಕ ಗ್ರಾಮ ರಾಮಘಡ್​ನ ಸಿನಿಮಾ ಚಿತ್ರೀಕರಣ ನಡೆದಿದ್ದು ರಾಮನಗರದಲ್ಲಿ. ಗಬ್ಬರ್‌ಸಿಂಗ್​ನ ದೃಶ್ಯಗಳ ಚಿತ್ರೀಕರಣ ನಡೆದ ಈ ಬೆಟ್ಟ ಇವತ್ತಿಗೂ ಶೋಲೆ ಬೆಟ್ಟ ಎಂದೇ ಫೇಮಸ್​. 50 ವರ್ಷ ಪೂರೈಸಿರುವ ‘ಶೋಲೆ’ ಚಿತ್ರ ಮಾಡಿದ ದಾಖಲೆಗಳು ಒಂದೆರಡಲ್ಲ. ಈ ಚಿತ್ರ ಅಮಿತಾಬ್‌ ಬಚ್ಚನ್ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿತು. ಚಿತ್ರದಲ್ಲಿ ನಟಿಸಿದ ಎಲ್ಲಾ ಕಲಾವಿದರು ಭರ್ಜರಿ ಮೈಲೇಜ್ ಪಡೆದರು. 24 ಕೋಟಿ ರುಪಾಯಿ ಬಜೆಟ್‌ ಈ ಚಿತ್ರ ಸಾವಿರಾರು ಕೋಟಿ ಗಳಿಸಿ ಅತಿ ಹೆಚ್ಚು ವೀಕ್ಷಣೆ ಕಂಡ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಸಿನಿ ರಂಗದ ಹಲವು ದಾಖಲೆ ಮುರಿದ ಚಿತ್ರ:

‘ಶೋಲೆ’ ಸಿನಿಮಾಗೆ ಈ ಮೊದಲು 25 ವರ್ಷ ತುಂಬಿದಾಗ ಸಿಲ್ವರ್ ಜೂಬ್ಲಿ ಆಚರಿಸಲಾಯಿತು. ಈ ವೇಳೆ 100ಕ್ಕೂ ಅಧಿಕ ಥಿಯೇಟರ್​ಗಳಲ್ಲಿ ಇದನ್ನು ಸಂಭ್ರಮಿಸಲಾಯಿತು. ಮುಂಬೈನ ಮಿನರ್ವಾ ಥಿಯೇಟರ್​ನಲ್ಲಿ ಈ ಚಿತ್ರ 5 ವರ್ಷಕ್ಕೂ ಅಧಿಕ ಕಾಲ ಪ್ರದರ್ಶನ ಕಂಡಿತು. ಅತಿ ದೀರ್ಘ ಕಾಲ(286 ವಾರ) ಪ್ರದರ್ಶನ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ರಾಷ್ಟ್ರ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿರುವ ‘ಶೋಲೆ’, ಮಿಲೇನಿಯಂನ ಅತ್ಯುತ್ತಮ ಸಿನಿಮಾಗಳು ಎಂಬ ಬಿಬಿಸಿ ತಯಾರಿಸಿದ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

50ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಶೋಲೆ ಚಿತ್ರವನ್ನು ಕೇವಲ ಶ್ರೇಷ್ಠ ಚಿತ್ರವಾಗಿ ಮಾತ್ರವಲ್ಲದೆ, ಭಾರತದಲ್ಲಿ ಸಿನಿಮಾ ಕಾನ್ಸೆಪ್ಟ್​​ ಬದಲಾಯಿಸಿದ ಸಾಂಸ್ಕೃತಿಕ ಸಂಸ್ಥೆಯಾಗಿಯೂ ಗುರುತಿಸಲಾಗುತ್ತಿದೆ. ಶೋಲೆ ಚಿತ್ರವನ್ನು ಅದರ ಆಕರ್ಷಕ ನಿರೂಪಣೆ, ಮರೆಯಲಾಗದ ಪಾತ್ರಗಳು ಮತ್ತು ಹೊಸ ಟೆಕ್ನಿಕ್​ಗಳಿಂದಾಗಿ ಪ್ರತಿ ಪೀಳಿಗೆಗೂ ಒಂದು ಮೈಲಿಗಲ್ಲಾಗಿ ಸೂಚಿಸಲಾಗುತ್ತದೆ.

ಬಾಕ್ಸ್‌............

ಚಿತ್ರ ಫೇಮಸ್ಸಾದರು ಅಭಿವೃದ್ಧಿ ಕಾಣದ ಬೆಟ್ಟ:

‘ಶೋಲೆ’ ಸಿನಿಮಾದ ಕಾರಣ ರಾಮದೇವರ ಬೆಟ್ಟ ಶೋಲೆ ಬೆಟ್ಟ ಎಂದೇ ಪ್ರಖ್ಯಾತಿ ಪಡೆದಿದ್ದರೂ ಅಭಿವೃದ್ಧಿ ಮಾತ್ರ ಕಂಡಿಲ್ಲ. ಈ ಚಿತ್ರದ ಕ್ಲೈಮ್ಯಾಕ್ಸ್ ಶೂಟ್ ಆದ ಬೆಟ್ಟಕ್ಕೆ ‘ಶೋಲೆ ಬೆಟ್ಟ’ ಎನ್ನುವ ಹೆಸರನ್ನೇ ಇಡಲಾಗಿದೆ ಅನ್ನೋದು ವಿಶೇಷ.

ರಾಜ್ಯದ ಜನರಿಗೆ ಧಾರ್ಮಿಕ ಹಿನ್ನೆಲೆಯ ರಾಮದೇವರ ಬೆಟ್ಟ ಎಂದೂ, ಹೊರ ರಾಜ್ಯದವರಿಗೆ ಶೋಲೆ ಬೆಟ್ಟ ಎಂದೂ ಪರಿಚಿತವಾಗಿ ನಿಗೂಢ, ರುದ್ರರಮಣೀಯ ಗುಡ್ಡಗಳ ಸಮೂಹವಾಗಿರುವ ರಾಮದೇವರ ಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಬಾಕ್ಸ್‌...........

ಪ್ಲಾಸ್ಟಿಕ್‌ ಮುಕ್ತವಾಗದ ಪ್ರದೇಶ..!:

ಅರಣ್ಯ ಇಲಾಖೆ ರಾಮಗಿರಿ ಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತ ಪ್ರದೇಶ ಎಂದು ಘೋಷಿಸಿದೆ. ಆದರೆ ಬೆಟ್ಟದಲ್ಲಿ ಪ್ಲಾಸ್ಟಿಕ್‌ ಸಮಸ್ಯೆ ಹೆಚ್ಚಾಗಿದೆ. ಪ್ರವಾಸಿಗರು ಪರಿಸರ ಸ್ವಚ್ಛತೆ ಕಾಪಾಡುವಲ್ಲಿ ಕಾಳಜಿ ವಹಿಸುತ್ತಿಲ್ಲ. ಪ್ಲಾಸ್ಟಿಕ್‌ ವಸ್ತುಗಳು ಹಾಗೂ ಕವರ್‌ಗಳನ್ನು ತಮ್ಮ ಜತೆಯಲ್ಲಿ ಕೊಂಡೊಯುತ್ತಿರುವುದು ಪ್ಲಾಸ್ಟಿಕ್‌ ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣ. ಊಟ ಮಾಡಲು ತಂದ ಪ್ಲಾಸ್ಟಿಕ್‌ ತಟ್ಟೆಗಳು ಕುಡಿವ ನೀರು, ತಂಪು ಪಾನೀಯ ಬಾಟಲ್‌ಗಳನ್ನು ಎಲ್ಲೆಂದರೆ ಎಸೆದು ಬೆಟ್ಟದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದಾರೆ.

ಬಾಕ್ಸ್‌...........

ತ್ರೀಡಿ ವರ್ಚುವಲ್ ರಿಯಾಲಿಟಿ ವಿಲೇಜ್ ನನೆಗುದಿಗೆ :

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಶೋಲೆ ಚಿತ್ರಿಕರಣಗೊಂಡ ರಾಮದೇವರ ಬೆಟ್ಟದಲ್ಲಿ ಶೋಲೆ ಚಿತ್ರದ ದೃಶ್ಯಗಳನ್ನು ತ್ರೀಡಿ ರೂಪದಲ್ಲಿ ಕಟ್ಟಿಕೊಡುವ "ತ್ರೀ ಡಿ ವರ್ಚುವಲ್ ರಿಯಾಲಿಟಿ ವಿಲೇಜ್ " ಅನ್ನು ನಿರ್ಮಿಸುವ ಪ್ರಯತ್ನಕ್ಕೆ ಮುಂದಾಗಿತ್ತು. ಹೊಸ ತಂತ್ರಜ್ಞಾನದಿಂದಕ ತಲೆ ಎತ್ತಲಿದ್ದ ಶೋಲೆ ತ್ರೀಡಿ ವಿಲೇಜ್ ಪ್ರಕಾರ, ನವೀನ ಬಗೆಯ ದೃಶ್ಯ ಶ್ರಾವ್ಯ ತಂತ್ರಜ್ಞಾನ, ಹಳ್ಳಿಯ ಮರುಸೃಷ್ಟಿ, ಲೇಸರ್ ತಂತ್ರಜ್ಞಾನ, ವರ್ಚುವಲ್ ರಿಯಾಲಿಟಿ 3ಡಿ ತಂತ್ರಜ್ಞಾನ, ಮಲ್ಟಿಪಲ್ ಸೀನ್ಸ್ ಆಯಾಮಗಳನ್ನು ಉಪಯೋಗಿಸಿಕೊಂಡು ಹಳ್ಳಿಯನ್ನು ಮರು ಸೃಷ್ಟಿ ಮಾಡುವ ಉದ್ದೇಶ ಹೊಂದಲಾಗಿತ್ತು.

ಜಿಲ್ಲಾಡಳಿತದ ನೆರವಿನೊಂದಿಗೆ ಪ್ರವಾಸೊದ್ಯಮ ಇಲಾಖೆ 7.5 ಕೋಟಿ ರುಪಾಯಿ ವೆಚ್ಚದಲ್ಲಿ "ತ್ರೀ ಡಿ ವರ್ಚುವಲ್ ರಿಯಾಲಿಟಿ ವಿಲೇಜ್’ ನಿರ್ಮಾಣಕ್ಕಾಗಿ ನೀಲನಕ್ಷೆ ತಯಾರಿಸಿಕೊಂಡು ಡಿಪಿಆರ್ ಸಿದ್ಧತೆಯಲ್ಲಿತ್ತು. ಆದರೆ, ರಾಮದೇವರ ಬೆಟ್ಟ ದೇಶದ ಏಕೈಕ ರಣಹದ್ದು ಸಂರಕ್ಷಿತಾ ವಲಯ ಆಗಿದ್ದರಿಂದ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದಾಗಿ ಈ ಯೋಜನೆ ನೆನೆಗುದಿಗೆ ಬಿದ್ದಿತು.

ಬಾಕ್ಸ್‌................

ರಾಮಘಡ್ ಎಲ್ಲಿದೆ ?

ಶ್ರೀ ರಾಮದೇವರ ಬೆಟ್ಟ ಜಿಲ್ಲಾ ಕೇಂದ್ರವಾದ ರಾಮನಗರದಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ರಾಮನಗರಕ್ಕೆ ಬರುವಾಗ, ರಾಮನಗರಕ್ಕೆ ಪ್ರವೇಶಿಸುತ್ತಿದ್ದಂತೆ ಬಲಭಾಗದಲ್ಲಿ ಶ್ರೀ ರಾಮದೇವರ ಬೆಟ್ಟಕ್ಕೆ ದಾರಿ ಎಂದು ಫಲಕ ಕಾಣುತ್ತದೆ ಹಾಗೂ ಇಲ್ಲಿ ದೇವಾಲಯದ ಬಗ್ಗೆ ಒಂದು ದೊಡ್ಡ ಕಮಾನು ನಿರ್ಮಿಸಿದ್ದಾರೆ. ಇಲ್ಲಿಂದ 3 ಕಿ.ಮೀ. ರಸ್ತೆಯಲ್ಲಿ ಕ್ರಮಿಸಿದರೆ ರಾಮದೇವರ ಬೆಟ್ಟದ ಕೆಳಭಾಗ ತಲುಪಬಹುದು. ಬೆಟ್ಟದ ಮೇಲೆ ಹತ್ತಲು ಮೆಟ್ಟಿಲುಗಳ ವ್ಯವಸ್ಥೆ ಇದೆ. ರಾಮದೇವರ ಬೆಟ್ಟ ಅರಣ್ಯ ವ್ಯಾಪ್ತಿಗೆ ಬರುವ ಬೆಟ್ಟಗಳಲ್ಲಿ ಒಂದು. ಭಾರತೀಯ ಚಿತ್ರರಂಗದ ಮೈಲಿಗಲ್ಲು ಎನಿಸಿರುವ ರಮೇಶ್ ಸಿಪ್ಪಿ ನಿರ್ದೇಶನದ ’ಶೋಲೆ’ ಚಿತ್ರದ ಚಿತ್ರೀಕರಣ ನಡೆದಿರುವ ರಾಮದೇವರ ಬೆಟ್ಟವನ್ನು ಇಂದಿಗೂ ಜನ ಪ್ರೀತಿಯಿಂದ ರಾಮ್‌ಘಡ್ ಎಂದೇ ಕರೆಯುತ್ತಾರೆ.

14ಕೆಆರ್ ಎಂಎನ್ 5,6,7.ಜೆಪಿಜಿ

ರಾಮನಗರದ ರಾಮದೇವರ ಬೆಟ್ಟದಲ್ಲಿ ಚಿತ್ರೀಕರಣಗೊಂಡ ಶೋಲೆ ಚಿತ್ರದ ದೃಶ್ಯಗಳು.