ಸಾರಾಂಶ
ಹುಬ್ಬಳ್ಳಿ: 50ಕ್ಕೂ ಹೆಚ್ಚು ಕಡೆಗಳಲ್ಲಿ ಎಲ್‌ಇಡಿ ಸ್ಕ್ರೀನ್, 1000ಕ್ಕೂ ಹೆಚ್ಚು ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮ, ದೀಪೋತ್ಸವ, ನೂರಾರು ಕಡೆಗಳಲ್ಲಿ ಅನ್ನಸಂತರ್ಪಣೆ..!
ಜ. 22ರಂದು ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ನಡೆಯಲಿರುವ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಇದು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮಗಳ ಝಲಕ್.1.50 ಲಕ್ಷ ಮನೆಗಳಲ್ಲಿ ಮಂತ್ರಾಕ್ಷತೆ: ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಹಾಗೂ ವಿಎಚ್‌ಪಿ ಕಾರ್ಯಕರ್ತರು ಈವರೆಗೆ ಬರೋಬ್ಬರಿ 1.50ಲಕ್ಷಕ್ಕೂ ಅಧಿಕ ಮನೆಗಳಲ್ಲಿ ಮಂತ್ರಾಕ್ಷತೆ, ಅಯೋಧ್ಯೆಯ ರಾಮಮಂದಿರದ ಫೋಟೋ, ಕರಪತ್ರ ಹಂಚಿದ್ದಾರೆ. ಎಲ್ಲ ಮನೆಗಳಲ್ಲೂ ದೀಪೋತ್ಸವ, ರಾಮತಾರಕ ಮಂತ್ರ ಜಪ ಮಾಡುವಂತೆ ತಿಳಿಸಲಾಗಿದೆ.
ಇನ್ನು 800ಕ್ಕೂ ಹೆಚ್ಚು ದೇವಾಲಯಗಳಲ್ಲಿ ಕಾರ್ಯಕರ್ತರು ಭೇಟಿಯಾಗಿ ಜಾಗೃತಿ ಮೂಡಿಸಲಾಗಿದೆ. ಇನ್ನು 200ಕ್ಕೂ ಹೆಚ್ಚು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಅಂದು 1000ಕ್ಕೂ ಅಧಿಕ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮ, ದೀಪೋತ್ಸವ, ಸಾಮೂಹಿಕ ರಾಮತಾರಕ ಮಂತ್ರ ಜಪ ನಡೆಯಲಿದೆ. ಎಲ್ಲ ದೇವಾಲಯಗಳಲ್ಲಿ ಬೆಳಗ್ಗೆ ವಿಶೇಷ ಪೂಜೆ- ಪುನಸ್ಕಾರ, ಭಜನೆ ನಡೆಯಲಿದೆ. ಸಂಜೆ ವೇಳೆ ದೀಪೋತ್ಸವ ನಡೆಯಲಿದೆ.50ಕ್ಕೂ ಹೆಚ್ಚು ಎಲ್‌ಇಡಿ: ಇನ್ನು 50ಕ್ಕೂ ಹೆಚ್ಚು ಕಡೆಗಳಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗುತ್ತಿದೆ. ಅಂದು ಬೆಳಗ್ಗೆ 11.30ರಿಂದ 1.30ರವರೆಗೆ ನಡೆಯಲಿರುವ ರಾಮಮೂರ್ತಿ ಪ್ರತಿಷ್ಠಾಪನೆಯ ನೇರ ಪ್ರಸಾರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಎಲ್ಲೆಡೆ ತಯಾರಿ ನಡೆದಿದೆ. ಬಿಡ್ನಾಳ, ಭೈರಿದೇವರಕೊಪ್ಪ, ಉಣಕಲ್, ಸಾಯಿನಗರ, ಅಶೋಕನಗರ, ಭವಾನಿನಗರ, ಶ್ರೀಕೃಷ್ಣ ಕಲ್ಯಾಣ ಮಂಟಪ, ರಾಜಧಾನಿ ಕಾಲನಿ, ಕೆಂಪಣ್ಣವರ ಕಲ್ಯಾಣ ಮಂಟಪ ಸೇರಿದಂತೆ ವಿವಿಧೆಡೆ ದೊಡ್ಡ ದೊಡ್ಡ ಸ್ಕ್ರೀನ್ ಅಳವಡಿಕೆ ಕೆಲಸ ನಡೆದಿದೆ. ಸಿದ್ಧಾರೂಢ ಮಠದಲ್ಲೂ ನೇರ ಕಾರ್ಯಕ್ರಮ ವೀಕ್ಷಣೆಗೆ ಅಂದು ಸ್ಕ್ರೀನ್ ಅಳವಡಿಸಲಾಗುತ್ತಿದೆ.
ಅನ್ನಸಂತರ್ಪಣೆ:ಬಹುತೇಕ ಕಾರ್ಯಕ್ರಮ ನಡೆಯುವ ಎಲ್ಲೆಡೆ ಅನ್ನಸಂತರ್ಪಣೆ ನಡೆಯಲಿದೆ. ಸರಿಸುಮಾರು 100ಕ್ಕೂ ಅಧಿಕ ಕಡೆಗಳಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಬರೀ ದೇವಾಲಯಗಳಷ್ಟೇ ಅಲ್ಲ. ಹಲವು ಹೋಟೆಲ್‌ಗಳ ಮಾಲೀಕರು ಕೂಡ ಅಂದು ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಿದ್ದಾರೆ. ಹಲವು ಹೋಟೆಲ್ ಬಂದ್ ಮಾಡಿ ಬರುವ ಭಕ್ತರಿಗೆ ಅನ್ನಸಂತರ್ಪಣೆ ಮಾಡಲು ನಿರ್ಧಾರ ಕೈಗೊಂಡಿರುವುದು ವಿಶೇಷ.ಕಾರ್ಯಕ್ರಮದ ಹಿನ್ನೆಲೆಯಲ್ಲೆಡೆ ಭಗವಾದ್ವಜ, ಆಂಜನೇಯನ ಭಾವಚಿತ್ರ ಇರುವ ಕೇಸರಿ ಬಾವುಟ ಈಗಾಗಲೇ ರಾರಾಜಿಸುತ್ತಿವೆ. ಮನೆ ಮನೆಗಳಲ್ಲಿ ಆಂಜನೇಯ, ಶ್ರೀರಾಮ ಇರುವ ಬಾವುಟಗಳನ್ನು ಕಟ್ಟಲು ಬಿಜೆಪಿ ವಿತರಣೆ ಮಾಡುತ್ತಿದೆ.
10 ಸಾವಿರ ಗೋಮಯಿ ಹಣತೆ: ಇನ್ನು ಅಂದು ಸಂಜೆ ಮನೆ ಮನೆಗಳಲ್ಲಿ ಹಣತೆ ಬೆಳಗಿ ದೀಪೋತ್ಸವ ನಡೆಸಲು ಎಲ್ಲರಲ್ಲೂ ಮನವಿ ಮಾಡಲಾಗಿದೆ. ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭ ಇಡೀ ದೇಶದಲ್ಲೇ ದೀಪಾವಳಿ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಪ್ರತಿ ಮನೆಯಲ್ಲೂ ದೀಪ ಬೆಳಗಲು ಕೋರಲಾಗುತ್ತಿದೆ. ಇದರೊಂದಿಗೆ ವಿಎಚ್‌ಪಿಯ ಗೋಶಾಲೆಯಲ್ಲಿ ಗೋಮಯಿ ಹಣತೆಗಳ ತಯಾರಿಕೆ ಕೂಡ ನಡೆದಿದೆ. ಇಲ್ಲಿನ ಆನಂದನಗರ ರಸ್ತೆಯಲ್ಲಿರುವ ಗೋಶಾಲೆಯಲ್ಲಿ ಏಳು ಜನರು ಗೋಮಯಿ ಹಣತೆ ತಯಾರಿಕೆಯಲ್ಲಿ ತೊಡಗಿದ್ದಾರೆ. ಈವರೆಗೆ 8 ಸಾವಿರಕ್ಕೂ ಅಧಿಕ ಹಣತೆಗಳನ್ನು ತಯಾರಿಸಲಾಗಿದೆ. ಇನ್ನು 2 ಸಾವಿರ ಹಣತೆಗಳ ತಯಾರಿಕೆ ಮಾಡಲಾಗುತ್ತಿದೆ. ಕನಿಷ್ಠವೆಂದರೂ 10 ಸಾವಿರ ಹಣತೆ ತಯಾರಿಸಿ ಭಕ್ತರಿಗೆ ನೀಡಲು ಯೋಚಿಸಲಾಗಿದೆ ಎಂದು ವಿಎಚ್‌ಪಿ ಜಿಲ್ಲಾ ಸಂಚಾಲಕ ರಮೇಶ ಕದಂ ತಿಳಿಸುತ್ತಾರೆ.ಒಟ್ಟಿನಲ್ಲಿ ಶ್ರೀರಾಮಮಂದಿರದ ಉದ್ಘಾಟನಾ ಸಮಾರಂಭವನ್ನು ದೀಪಾವಳಿಯಂತೆ ಆಚರಿಸಲು ಹುಬ್ಬಳಿಗರು ಸಜ್ಜಾಗಿರುವುದಂತೂ ಸತ್ಯ.
ಈವರೆಗೆ 1.5 ಲಕ್ಷ ಮನೆಗಳಿಗೆ ತೆರಳಿ ಮಂತ್ರಾಕ್ಷತೆ, ಅಯೋಧ್ಯೆ ರಾಮಮಂದಿರದ ಭಾವಚಿತ್ರ ಹಾಗೂ ಕರಪತ್ರ ವಿತರಿಸಲಾಗಿದೆ. 800ಕ್ಕೂ ಅಧಿಕ ದೇವಾಲಯಗಳಿಗೆ ಭೇಟಿ ನೀಡಿ ಜಾಗೃತಿ ಮಾಡಲಾಗಿದೆ. ಸ್ವಾಮೀಜಿಗಳ ಪಾದಯಾತ್ರೆ ನಡೆದಿದೆ. ಶ್ರೀರಾಮಮಂದಿರದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವೂ ಹುಬ್ಬಳ್ಳಿಯಲ್ಲಿ ಅಕ್ಷರಶಃ ದೀಪಾವಳಿಯಂತೆ ಆಚರಿಸಲಾಗುತ್ತಿದೆ ಎಂದು ವಿಎಚ್‌ಪಿ ಜಿಲ್ಲಾ ಸಂಚಾಲಕ ರಮೇಶ ಕದಂ ಹೇಳಿದರು.