2028ಕ್ಕೆ ಮಹಿಳೆಯರಿಗೆ 50% ಮೀಸಲು: ಸಿದ್ದರಾಮಯ್ಯ

| Published : Nov 20 2024, 12:32 AM IST

ಸಾರಾಂಶ

ಭಾರತ್ ಜೋಡೋ ಭವನದಲ್ಲಿರುವ ಇಂದಿರಾ ಗಾಂಧಿ ಆಡಿಟೋರಿಯಂನಲ್ಲಿ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಘಟಕ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹಿಳೆಯರು, ಬಡವರು, ತಳ ಸಮುದಾಯಗಳ ಮೀಸಲಾತಿ ವಿರೋಧಿಯಾಗಿರುವ ಬಿಜೆಪಿ ಸರ್ಕಾರ 2028ರ ಬಳಿಕ ಅಧಿಕಾರದಲ್ಲಿ ಇರುವುದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ಭಾರತ್ ಜೋಡೋ ಭವನದಲ್ಲಿರುವ ಇಂದಿರಾ ಗಾಂಧಿ ಆಡಿಟೋರಿಯಂನಲ್ಲಿ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಘಟಕ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿರಾ ಗಾಂಧಿ ಅವರ ಬದುಕು ಎಲ್ಲರಿಗೂ ಆದರ್ಶ. ದೇಶಕ್ಕಾಗಿ ಪ್ರಾಣ ಕೊಟ್ಟ ಅವರನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಬಡವರ ಏಳಿಗೆ ಆಗಬೇಕೆಂದರೆ ಶಿಕ್ಷಣ, ರಾಜಕೀಯ, ಆರ್ಥಿಕ ಶಕ್ತಿ, ಸಮಾನ ಅವಕಾಶಗಳನ್ನು ನೀಡಬೇಕು ಎಂದಿದ್ದರು. ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ಬಡವರಿಗೆ ಬಾಗಿಲು ತೆಗೆಸಿದರು ಎಂದರು.

ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ಅಧಿಕಾರ ವಿಕೇಂದ್ರೀಕರಣ ಮಾಡಿದರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ತಂದು, ಮಹಿಳೆಯರ ಕೈಗೆ ಅಧಿಕಾರ ನೀಡಿದರು. ಬಿಜೆಪಿಯ ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್ ಮೀಸಲಾತಿ ವಿರುದ್ಧವೇ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2028ರಲ್ಲಿ ಮಹಿಳಾ ಮೀಸಲಾತಿ ತರುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈಗಲೇ ತರಲು ಏನು ಸಮಸ್ಯೆ? ಏಕೆಂದರೆ, ಅವರಿಗೆ ಇಚ್ಛಾಶಕ್ತಿ ಇಲ್ಲ. ಹೀಗಾಗಿ, 2028ರ ಬಳಿಕ ನಾವೇ ಮೀಸಲಾತಿ ತರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿ ಅಧಿಕಾರ ಕೇಂದ್ರೀಕರಣ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದೆ. ಬಡವರು, ಸಾಮಾಜಿಕ ನ್ಯಾಯದ ವಿರೋಧಿಯಾಗಿರುವ ಬಿಜೆಪಿಯವರಿಗೆ ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಗೌರವವಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಎಂದಿಗೂ ಅಧಿಕಾರ ವಿಕೇಂದ್ರಿಕರಣದ ಪರವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಸಿದ್ಧಾಂತದ ಬಗ್ಗೆ ಸ್ಪಷ್ಟತೆ ಹೊಂದಬೇಕು ಎಂದು ಮುಖ್ಯಮಂತ್ರಿ ಹೇಳಿದರು.ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಇಂದಿರಾ ಗಾಂಧಿ ಅವರು ಅಂದಿನ ಕಾಲದಲ್ಲೇ ಬಲಿಷ್ಠ ಅಮೆರಿಕಕ್ಕೆ ಸೆಡ್ಡು ಹೊಡೆಯುತ್ತಿದ್ದರು. ಅವರು ಧೈರ್ಯವಂತೆ ಕರುಣಾಮಯಿ, ಮಮತಾಮಯಿ ಹಾಗೂ ತ್ಯಾಗಮಯಿ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಜಾರಿಗೊಳಿಸಲಿ. ಶೇ.50ರಷ್ಟು ಮೀಸಲಾತಿ ಮಿತಿಯನ್ನು ಮೀರಿ, ಶೇ.75ರಷ್ಟು ಮೀಸಲಾತಿಯನ್ನು ಸಿದ್ದರಾಮಯ್ಯ ಅವರು ಅನುಷ್ಠಾನಗೊಳಿಸುತ್ತಾರೆ ಎಂದು ಹೇಳಿದರು.ಕಾಂಗ್ರೆಸ್ ಪಕ್ಷಕ್ಕೆ ದುಡಿದ ಐವರು ಮಹಿಳಾ ಮುಖಂಡರಿಗೆ ಇಂದಿರಾ ಗಾಂಧಿ ವಿಶಿಷ್ಟ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಚಿವ ಕೆ.ಎಚ್ ಮುನಿಯಪ್ಪ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾರೆಡ್ಡಿ, ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್, ಮಾಜಿ ಸಚಿವೆ ರಾಣಿ ಸತೀಶ್ ಉಪಸ್ಥಿತರಿದ್ದರು.

ಇಂದಿರಾ ಗಾಂಧಿ ತ್ಯಾಗ ಮರೆಯುವಂತಿಲ್ಲ: ಡಿಕೆಶಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಉಕ್ಕಿನ ಮಹಿ‍ಳೆ ಇಂದಿರಾ ಗಾಂಧಿಯವರ ನಾಯಕತ್ವ, ಗಾಂಧಿ ಕುಟುಂಬದ ತ್ಯಾಗ, ಮಾರ್ಗದರ್ಶನವನ್ನು ದೇಶದ ಜನತೆ ಮರೆಯುವುದಿಲ್ಲ. ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ, ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸ. 20 ಅಂಶಗಳ ಕಾರ್ಯಕ್ರಮ ಬಡವರಿಗೆ ಜಮೀನು, ಮನೆ, ಅಂಗನವಾಡಿ ಕೇಂದ್ರಗಳ ಸ್ಥಾಪನೆ, ಪಿಂಚಣಿ ಸೇರಿದಂತೆ ದೇಶದ ಅಭಿವೃದ್ಧಿಯಲ್ಲಿ ಇಂದಿರಾ ಗಾಂಧಿಯವರ ಹೆಜ್ಜೆಗಳು ಕಾಣಿಸುತ್ತವೆ. ಅದನ್ನು ಯಾವುದೇ ಸರ್ಕಾರ ಬಂದರೂ ಬದಲಿಸಲಾಗದು ಎಂದರು.

ಸೋನಿಯಾ ಗಾಂಧಿ ಬರೆದಿರುವ ಇಂದಿರಾ ಪುಸ್ತಕ ಕನ್ನಡಕ್ಕೆ ತರುವೆ

ದೊಡ್ಡ ಆಲದಹಳ್ಳಿಯಲ್ಲಿ ಇಂದಿರಾ ಜೀ ಹೆಸರಿನಲ್ಲಿ ಚಿತ್ರ ಮಂದಿರ ಸ್ಥಾಪಿಸಲು ಯೋಚಿಸಿದ್ದೆ. ಲೈಸನ್ಸ್ ಬೇಕು ಎಂದು ಜಿಲ್ಲಾಧಿಕಾರಿ ಬಳಿ ಪತ್ರ ಕೊಟ್ಟಾಗ, ಹೆಸರು ಕೇಳಿದರು. ಇಂದಿರಾ ಗಾಂಧಿ ಹೆಸರು ಹೇಳುತ್ತಿದ್ದಂತೆ ಲೈಸನ್ಸ್ ಕೊಟ್ಟರು. ಅಂತಹ ಹೆಸರು ಅದು. ಇಂದಿರಾ ಗಾಂಧಿ ಅವರ ಕುರಿತು ಸೋನಿಯಾ ಗಾಂಧಿ ಬರೆದಿರುವ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿ ಬಿಡುಗಡೆ ಆಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ತರಲು ನಮ್ಮ ಬಳಿ ತಂತ್ರ, ಮಂತ್ರ ಶಕ್ತಿ ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.