ಸಾರಾಂಶ
ಚಿತ್ರದುರ್ಗ: ಚಿತ್ರದುರ್ಗದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳ ಪ್ರವೇಶವಾಗಿದ್ದು, 500 ಕೋಟಿ ರು. ವೆಚ್ಚದಲ್ಲಿ ಕಟ್ಟಡ, ಹಾಸ್ಟೆಲ್ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗುವುದು ಎಂಬ ಮುಖ್ಯಮಂತ್ರಿ ಬಜೆಟ್ ಭಾಷಣಕ್ಕೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿಯೇ ಮೆಡಿಕಲ್ ಕಾಲೇಜಿಗೆ 500 ಕೋಟಿ ರು. ಘೋಷಣೆಯಾಗಿ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. 150 ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಮುಗಿದಿತ್ತು. ಇನ್ನೊಂದು 3-4 ತಿಂಗಳು ಕಳೆದರೆ ವಿದ್ಯಾರ್ಥಿಗಳು ಮೊದಲ ವರ್ಷ ಮುಗಿಸುತ್ತಾರೆ. ವಾಸ್ತವಾಂಶ ಹೀಗಿರುವಾಗಿ ನಾವೇ ಅನುದಾನ ಕೊಟ್ಟೆವು, ಅಭಿವೃದ್ಧಿಗಾಗಿ ಗಮನ ನೀಡಲಾಗುವುದು ಎಂದು ಹೇಳಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಪಕ್ಷದ ನಾಯಕರು ಮೆಡಿಕಲ್ ಕಾಲೇಜಿಗೆ 500 ಕೋಟಿ ರು. ಇಟ್ಟಿರುವುದಕ್ಕೆ ಸಂತೋಷವಾಯಿತೆಂದು ತಿಳಿಸಿದ್ದಾರೆ. ಆದರೆ ಇದು ಹಿಂದಿನ ವರ್ಷವೇ ಆಯವ್ಯಯದಲ್ಲಿ ಹಣ ಮಂಜೂರಾಗಿತ್ತು. ಜನವರಿ ಅಥವಾ ಫೆಬ್ರವರಿಯಲ್ಲಿ ಟೆಂಡರ್ ಫೈನಲ್ ಆಗಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಟೆಂಡರ್ ಕರೆದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೋಮ್ಮಾಯಿಯವರು ಗ್ರೀನ್ ಸಿಗ್ನಲ್ ನೀಡಿ ಕಟ್ಟಡದ ಕಾಮಗಾರಿಯನ್ನು ಪ್ರಾರಂಭ ಮಾಡಲು ಸೂಚಿಸಿದ್ದರು. ಅದರಂತೆ ಕಟ್ಟಡದ ಕಾಮಗಾರಿಯೂ ಪ್ರಾರಂಭ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಎಂಸಿಐಯ ಅನುಮತಿಯೂ ದೂರಕಿದ್ದು, ಹಾಸ್ಟಲ್ ಸಮಸ್ಯೆಯನ್ನು ಸಹಾ ನಿವಾರಣೆ ಮಾಡಲಾಗಿತ್ತು. ಬೋಧಕರ ಕೊಠಡಿ, ಹಾಸ್ಟಲ್ ಸೇರಿದಂತೆ ಇತರೆ ಕಟ್ಟಡಗಳನ್ನು ತೋರಿಸಿದ ನಂತರವೇ ಕೇಂದ್ರ ಸರ್ಕಾರ ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಿದೆ ಎಂದು ತಿಪ್ಪಾರೆಡ್ಡಿ ಹೇಳಿದರು.
ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ 5300 ಕೋಟಿ ರು. ಅನುದಾನ ಬಿಡುಗಡೆ ಭರವಸೆ ನೀಡಿತ್ತು. ಕೇಂದ್ರದ ಅನುದಾನ ಎಲ್ಲಿಯೂ ಹೋಗುವುದಿಲ್ಲ. ರಾಜ್ಯ ಸರ್ಕಾರ ಪ್ರತ್ಯೇಕ ಖಾತೆ ತೆರೆದಲ್ಲಿ ಕೇಂದ್ರ ಅನುದಾನ ಬಿಡುಗಡೆ ಮಾಡುತ್ತದೆ. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ರಾಜ್ಯ ಸರ್ಕಾರ ಜನರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ತಿಪ್ಪಾರೆಡ್ಡಿ ಹೇಳಿದರು.ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲು ರೈತರು ಹೋರಾಟ ಮಾಡುತ್ತಿರುವುದು ಸಂತಸದ ಸಂಗತಿ. ತಾವೂ ಕೂಡಾ ರೈತರ ಪರವಾಗಿದ್ದೇವೆ. ಈ ಬಾರಿಯ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಮುಗಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಏನೂ ಹೇಳಿಲ್ಲ. ಕನಿಷ್ಠ ಪ್ರಮಾಣದ ಹಣ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು. ಅದನ್ನು ಹುಸಿ ಮಾಡಲಾಗಿದೆ ಎಂದು ತಿಪ್ಪಾರೆಡ್ಡಿ ಹೇಳಿದರು.