ಸಾರಾಂಶ
ಹಾವೇರಿ: ತಾಲೂಕಿನ ವಿವಿಧ ಭಾಗಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕಾರಣ ವಿವಿಧ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಸಾರ್ವಜನಿಕರು ಬೇಡಿಕೆ ಸಲ್ಲಿಸಿದ್ದಾರೆ. ಬೇಡಿಕೆ ಇರುವ ಮಾರ್ಗಗಳಲ್ಲಿ ಗ್ರಾಮಗಳಲ್ಲಿ ಕೂಡಲೇ ಬಸ್ ಸಂಚಾರ ಆರಂಭಿಸಬೇಕು ಎಂದು ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ತಾಲೂಕು ಮಟ್ಟದ ಜನ ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಗೆ ಈಗಾಗಲೇ ೫೩ ಹೊಸ ಬಸ್‌ಗಳನ್ನು ನೀಡಲಾಗಿದೆ. ಇನ್ನೂ ಹೆಚ್ಚಿನ ಬಸ್ ನೀಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.ಗಣಜೂರ-ನಾಗೇಂದ್ರಮಟ್ಟಿ, ಕರ್ಜಗಿ-ರಾಮಾಪೂರ, ಸವಣೂರ-ತಿಮ್ಮಾಪೂರ ಮಾರ್ಗವಾಗಿ ಬಸ್ ಸಂಚಾರ ಬೇಡಿಕೆ ಇದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು. ಅದೇ ರೀತಿ ವಸತಿ ನಿಲಯಗಳಿರುವ ಸ್ಥಳಗಳಲ್ಲಿ ನಿಲುಗಡೆಗೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.ವಸತಿ ಕಾಲೇಜ್ ಸ್ಥಳಾಂತರ: ರು.೩೩ ಕೋಟಿ ವೆಚ್ಚದಲ್ಲಿ ಕಳ್ಳಿಹಾಳ ಗ್ರಾಮದಲ್ಲಿ ನಿರ್ಮಾಣ ಮಾಡಲಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಸತಿಯುತ ಕಾಲೇಜು ಕಟ್ಟಡದಲ್ಲಿ ಪ್ರಸಕ್ತ ವರ್ಷದಿಂದ ತರಗತಿಗಳನ್ನು ಆರಂಭಿಸಬೇಕು ಹಾಗೂ ವಸತಿ ನಿಲಯ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಡೆಂಘೀ ತಡೆಗೆ ಮುಂಜಾಗ್ರತೆ: ಡೆಂಘೀ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಮನೆಗಳ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಲು ಹಾಗೂ ಟೈರ್, ಒಡೆದ ತೆಂಗಿನ ಚಿಪ್ಪುನಂತಹ ತ್ಯಾಜ್ಯಗಳಲ್ಲಿ ನೀರು ನಿಲ್ಲದಂತೆ ಜಾಗೃತಿ ವಹಿಸಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಜ್ವರದ ಲಕ್ಷಣಗಳು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ತಿಳಿಸಬೇಕು. ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ಫಾಗಿಂಗ್ ಮಾಡಿಸಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಹಾಗೂ ತಹಸೀಲ್ದಾರರಿಗೆ ಸೂಚನೆ ನೀಡಿದರು.ಸಾರ್ವಜನಿಕರು ಅಹವಾಲುಗಳನ್ನು ಮುಖ್ಯಮಂತ್ರಿಗಳವರೆಗೆ ತೆಗೆದುಕೊಂಡು ಹೋಗುವುದನ್ನು ತಡೆಯಲು ಹಾಗೂ ಸಾರ್ವಜನಿಕರ ಅಲ್ಲಿಯ ಸಮಸ್ಯೆಗೆ ಅಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯಾದ್ಯಾಂತ ಜನ್ಪಸಂದನ ನಡೆಸಲಾಗುತ್ತಿದೆ. ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಹಂತದಲ್ಲಿನ ಸಮಸ್ಯೆಗಳಲ್ಲಿ ಅಲ್ಲೇ ಪರಿಹರಿಸಿದರೆ ಯಾವುದೇ ಸಾರ್ವಜನಿಕರು ಜನಪ್ರತಿನಿಧಿಗಳ ಹತ್ತಿರ ಬರುವುದಿಲ್ಲ. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ನಿವಾರಿಸಿದಲ್ಲಿ ಸರ್ಕಾರಕ್ಕೆ ಹಾಗೂ ನಿಮಗೂ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು.ಹೊಲಗಳ ದಾರಿ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕಾನೂನು ತಿದ್ದುಪಡಿ ಮಾಡಲು ಸರ್ಕಾರದ ಉಪ ಕಾರ್ಯದರ್ಶಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಬರುವ ದಿನಗಳಲ್ಲಿ ಹೊಲಗಳ ದಾರಿ ಸಮಸ್ಯೆಗೆ ಪರಿಹಾರ ನೀಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.ಮನೆ ಹಾನಿ ಪರಿಹಾರ, ವಸತಿ ನಿಲಯ, ಇ-ಸ್ವತ್ತು, ಪೊಲೀಸ್ ವಸತಿ ಗೃಹ ಸಮಸ್ಯೆ, ಕೋಣನತಂಬಿಗಿಯಲ್ಲಿ ಮೊರಾರ್ಜಿ ಶಾಲೆ ಆರಂಭಕ್ಕೆ ಮನವಿ ಸೇರಿದಂತೆ ವಿವಿಧ ದೂರುಗಳು ಸಲ್ಲಿಕೆಯಾಗಿದ್ದು, ಸಮಸ್ಯೆಗಳನ್ನು ಆದ್ಯತೆಗೆ ಮೇರೆಗೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಮಾತನಾಡಿ, ಶಾಲಾ ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ತೊಂದಯಾಗದಂತೆ ಬಸ್ ಸಂಚಾರ ಆರಂಭಿಸಬೇಕು. ಬೇಡಿಕೆ ಇರುವ ನಿಲುಗಡೆಗಳ ಕುರಿತು ಸಮೀಕ್ಷೆ ನಡೆಸಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಬೇಕು. ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ನಿಗದಿತ ಸಮಯದೊಳಗೆ ಮನೆ ನಿರ್ಮಾಣ ಮಾಡದ ಫಲಾನುಭವಿಗಳ ಮನೆಹಾನಿ ಪರಿಹಾರ ಬ್ಲಾಕ್ ಆಗಿದ್ದು, ಅಂತಹ ಫಲಾನುಭವಿಗಳು ಜಿಪಿಎಸ್ ಫೋಟೋ ನೀಡಿದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇಲ್ಲಿ ಸ್ವೀಕೃವಾದ ಅರ್ಜಿಗಳನ್ನು ೧೫ ದಿನಗಳಲ್ಲಿ ಇತ್ಯರ್ಥಡಿಸಬೇಕು. ಒಟ್ಟಾರೆ ಅಧಿಕಾರಿಗಳು ಚುರುಕಿನಂದ ಕೆಲಸಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಉಪವಿಭಾಗಾಧಿಕಾರಿ ಚೆನ್ನಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ, ತಹಸೀಲ್ದಾರ ಶಂಕರ್, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭರತ್ ಹೆಗಡೆ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.