ಕೌಟುಂಬಿಕ ಕಲಹಕ್ಕೆ ಜಿಲ್ಲೆಯಲ್ಲಿ 542 ಜನ ಆತ್ಮಹತ್ಯೆ

| Published : Oct 15 2025, 02:08 AM IST

ಸಾರಾಂಶ

ಸಣ್ಣಪುಟ್ಟ ಕಾರಣಗಳಿಂದ ಇತ್ತೀಚಿಗೆ ಕೌಟುಂಬಿಕ ಸಮಸ್ಯೆ ಮತ್ತು ಕಲಹಗಳು ಹೆಚ್ಚಾಗುತ್ತಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಈ ಕಾರಣದಿಂದ ಕಳೆದ ಐದು ವರ್ಷಗಳಲ್ಲಿ ಒಟ್ಟು 542 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಐದು ವರ್ಷಗಳ ರಾಷ್ಟ್ರೀಯ ಅಪರಾಧ ಬ್ಯೂರೋ ದಾಖಲೆಗಳ ಆಧಾರದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಡಿ.ಸಿ.ನಂಜುಂಡ ಮತ್ತು ಮೈಸೂರಿನ ಮಹಾರಾಜ ಕಾಲೇಜಿನ ಮನಶಾಸ್ತ್ರ ಪ್ರಾಧ್ಯಾಪಕ ಡಾ.ಲ್ಯಾನ್ಸಿ ಡಿಸೋಜಾ ಅವರ ನೇತೃತ್ವದ ತಂಡ ಇತ್ತೀಚೆಗೆ ನಡೆಸಿದ ಜಂಟಿ ಅಧ್ಯಯನದಿಂದ ಈ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.

ಡಾ.ಸಿ.ಎಂ.ಜೋಶಿ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸಣ್ಣಪುಟ್ಟ ಕಾರಣಗಳಿಂದ ಇತ್ತೀಚಿಗೆ ಕೌಟುಂಬಿಕ ಸಮಸ್ಯೆ ಮತ್ತು ಕಲಹಗಳು ಹೆಚ್ಚಾಗುತ್ತಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಈ ಕಾರಣದಿಂದ ಕಳೆದ ಐದು ವರ್ಷಗಳಲ್ಲಿ ಒಟ್ಟು 542 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಐದು ವರ್ಷಗಳ ರಾಷ್ಟ್ರೀಯ ಅಪರಾಧ ಬ್ಯೂರೋ ದಾಖಲೆಗಳ ಆಧಾರದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಡಿ.ಸಿ.ನಂಜುಂಡ ಮತ್ತು ಮೈಸೂರಿನ ಮಹಾರಾಜ ಕಾಲೇಜಿನ ಮನಶಾಸ್ತ್ರ ಪ್ರಾಧ್ಯಾಪಕ ಡಾ.ಲ್ಯಾನ್ಸಿ ಡಿಸೋಜಾ ಅವರ ನೇತೃತ್ವದ ತಂಡ ಇತ್ತೀಚೆಗೆ ನಡೆಸಿದ ಜಂಟಿ ಅಧ್ಯಯನದಿಂದ ಈ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.2020ರಲ್ಲಿ ಬಾಗಲಕೋಟೆಯಲ್ಲಿ ಒಟ್ಟು 288 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 224 ಮಂದಿ ಪುರುಷರು ಮತ್ತು 64 ಜನ ಮಹಿಳೆಯರಿದ್ದಾರೆ. ಕುಟುಂಬ ಸಮಸ್ಯೆಗಳಿಂದ 129 ಮಂದಿ, ಅನಾರೋಗ್ಯ ಸಂಬಂಧಿತ 84 ಜನರು, ಬ್ಯಾಂಕ್ ಸಾಲಗಳಿಂದ 28 ಜನರು ಮತ್ತು ನಿರುದ್ಯೋಗ ಕಾರಣದಿಂದ 16 ಜನರು ಆತ್ಮಹತ್ಯೆ ಮಾಡಿಕೊಂಡಿರುವುದು ರಾಷ್ಟ್ರೀಯ ಅಪರಾಧ ಬ್ಯೂರೋ ದಾಖಲೆಗಳಿಂದ ಕಂಡುಬಂದಿದೆ. ಇವರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಾಗಿದೆ ಮತ್ತು 30-45 ವರ್ಷದವರೇ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2021ರಲ್ಲಿ ಒಟ್ಟು 299 ಆತ್ಮಹತ್ಯೆ ಸಂಖ್ಯೆಗಳು ವರದಿಯಾಗಿದ್ದು, ಇವರಲ್ಲಿ 215 ಪುರುಷರು ಮತ್ತು 84 ಮಹಿಳೆಯರಿದ್ದಾರೆ. ಕುಟುಂಬ ಸಮಸ್ಯೆಗಳು (92) ಮೊದಲ ಸ್ಥಾನದಲ್ಲಿದ್ದು, ಅನಾರೋಗ್ಯ ಕಾರಣದಿಂದ 60 ಜನ, ಬ್ಯಾಂಕ್ ಸಾಲದ ಒತ್ತಡದಿಂದ 26 ಜನ, ನಿರುದ್ಯೋಗ ಕಾರಣದಿಂದ 18 ಜನ ಮತ್ತು ವೈವಾಹಿಕ ಸಂಘರ್ಷದ ಕಾರಣದಿಂದ 12 ಜನ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. 2021ರಲ್ಲಿ ಕೌಟುಂಬಿಕ ಕಾರಣದಿಂದ ಮಹಿಳೆಯರು ಅತೀ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗಮನಿಸಬಹುದು ಎನ್ನುತ್ತಾರೆ ಡಾ.ಲ್ಯಾನ್ಸಿ ಡಿಸೋಜಾ.

2022ರಲ್ಲಿ ಒಟ್ಟು 289 ಆತ್ಮಹತ್ಯೆಗಳು ನಡೆದಿದ್ದು, ಅವರಲ್ಲಿ 229 ಪುರುಷರು, 60 ಮಹಿಳೆಯರಿದ್ದಾರೆ. ಇದರಲ್ಲಿ ಕುಟುಂಬ ಸಮಸ್ಯೆಗಳಿಂದ 134 ಜನರು, ಐದು ವರ್ಷಗಳಲ್ಲಿಯೇ ಗರಿಷ್ಠ ಬಾಗಲಕೋಟೆ ಜಿಲ್ಲೆಯಲ್ಲಿ ಆತ್ಮಹತ್ಯೆ ಘಟನೆಗಳು ನಡೆದಿವೆ. ನಿರುದ್ಯೋಗ ಕಾರಣದಿಂದ 33 ಜನ, ಅನಾರೋಗ್ಯ ಕಾರಣದಿಂದ 67 ಜನ, ಬ್ಯಾಂಕ್ ಸಾಲದ ಒತ್ತಡದಿಂದ 32 ಜನ ಮದ್ಯಪಾನ ಮತ್ತು ಡ್ರಗ್ ವ್ಯಸನದ ಕಾರಣದಿಂದ 23 ಜನ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಡಾ.ಡಿ.ಸಿ. ನಂಜುಂಡ.

2023ರಲ್ಲಿ ಆತ್ಮಹತ್ಯೆಗಳ ಸಂಖ್ಯೆ 288ಕ್ಕೆ ಏರಿದ್ದು, ಇವರಲ್ಲಿ 230 ಪುರುಷರು, 58 ಮಹಿಳೆಯರು ಸೇರಿದ್ದಾರೆ. ಕುಟುಂಬ ಸಮಸ್ಯೆಗಳಿಂದ 102 ಮಂದಿ, ಅನಾರೋಗ್ಯದಿಂದ 76 ಮಂದಿ, ಡ್ರಗ್ಸ್‌ ವ್ಯಸನದಿಂದ 30 ಮತ್ತು ಇತರೆ ಕಾರಣಗಳಿಂದ 45 ಮಂದಿ, ಪ್ರೇಮ ವೈಫಲ್ಯದಿಂದ 4 ಮಂದಿ ಮತ್ತು ದಾಂಪತ್ಯ ಸಮಸ್ಯೆಗಳಿಂದ 18 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡ್ರಗ್ಸ್‌ ವ್ಯಸನಗಳ ಸಂಖ್ಯೆ ಹೆಚ್ಚಳ?: 2024ರಲ್ಲಿ ಆತ್ಮಹತ್ಯೆಗಳ ಸಂಖ್ಯೆ 279 ಇದ್ದು, ಇವರಲ್ಲಿ 219 ಪುರುಷರು, 60 ಮಹಿಳೆಯರಿದ್ದಾರೆ. ಈ ಬಾರಿ ಆತ್ಮಹತ್ಯೆಯ ಸ್ವರೂಪದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದೆ. ಯುವಕರಲ್ಲಿ ಡ್ರಗ್ಸ್‌ ವ್ಯಸನ ಪ್ರಕರಣಗಳು ತೀವ್ರವಾಗಿ ಏರಿಕೆ ಕಂಡು, 18-30 ವಯಸ್ಸಿನ 43 ಮಂದಿ ಯುವಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬ ಸಮಸ್ಯೆಗಳಿಂದ 85 ಮಂದಿ, ಅನಾರೋಗ್ಯದಿಂದ 54 ಮಂದಿ, ಬ್ಯಾಂಕ್ ಸಾಲದಿಂದ 34 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2020-2021ರ ಕೋವಿಡ್ ಅವಧಿಯಲ್ಲಿ ಆತ್ಮಹತ್ಯೆಗಳು ಮುಖ್ಯವಾಗಿ ಆರೋಗ್ಯ ಮತ್ತು ಕುಟುಂಬ ಸಮಸ್ಯೆಗಳಿಂದ ಉಂಟಾಗಿದೆ. 2022-2024ರ ನಡುವೆ ಅದು ಬಹು ಆಯಾಮದ ಸಾಮಾಜಿಕ, ಆರ್ಥಿಕ ಹಾಗೂ ಮಾನಸಿಕ ಒತ್ತಡಗಳ ರೂಪಕ್ಕೆ ತಿರುಗಿದೆ. ಪುರುಷರಲ್ಲಿ ಆತ್ಮಹತ್ಯೆಗಳ ಪ್ರಕರಣ ಹೆಚ್ಚಾಗುತ್ತಿದ್ದು, ಇದು ಸಂಕೀರ್ಣ ಲಿಂಗಾಧಾರಿತ, ಆರ್ಥಿಕ ಹೊಣೆಗಾರಿಕೆ ಮತ್ತು ಸಾಮಾಜಿಕ ಒತ್ತಡ ಸ್ಪಷ್ಟಪಡಿಸುತ್ತದೆ. ಯುವಜನರಲ್ಲಿ ಡ್ರಗ್ಸ್‌ ವ್ಯಸನ ಮತ್ತು ಆತ್ಮಹತ್ಯೆಗಳ ಏರಿಕೆ ಜಿಲ್ಲೆಗೆ ಹೊಸ ಸಾಮಾಜಿಕ ಸಮಸ್ಯೆ ಸೂಚಿಸುತ್ತಿದೆ ಎನ್ನುತ್ತಾರೆ ಡಾ.ಡಿ.ಸಿ. ನಂಜುಂಡ. ಈ ಅಧ್ಯಯನ ತಂಡದಲ್ಲಿ ಡಾ.ಕೃಷ್ಣಮೂರ್ತಿ ಮತ್ತು ಶುಭ ಪ್ರತಾಪ್ ಇದ್ದರು.

ಐದು ವರ್ಷಗಳಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಕೌಟುಂಬಿಕ ಕಾರಣ ಮತ್ತು ಮಾದಕ ವ್ಯಸನಗಳಿಂದ ಆತ್ಮಹತ್ಯೆಗಳ ಪ್ರಕರಣ ಗರಿಷ್ಠ ಮಟ್ಟ ತಲುಪಿವೆ. ಯುವ ಜನರಲ್ಲಿನ ಡ್ರಗ್ಸ್ ಪ್ರಕರಣಗಳು ಹೊಸ ತಲೆಮಾರಿನ ಸಾಮಾಜಿಕ-ಆರ್ಥಿಕ ಸಮಸ್ಯೆಗಳ ಸೂಚಕವಾಗಿದೆ. ಶಾಲಾ ಕಾಲೇಜು ಮಟ್ಟದಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಜಿಲ್ಲೆಯಲ್ಲಿ ಮಾನಸಿಕ ತಜ್ಞರ ಕೊರತೆ ಸಹ ತೀವ್ರವಾಗಿದೆ. ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಮಾನಸಿಕ ಆರೋಗ್ಯ ಕುರಿತು ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.

- ಡಾ. ಡಿ.ಸಿ. ನಂಜುಂಡ. ಸಹ ಪ್ರಾಧ್ಯಾಪಕ, ಸಾಮಾಜಿಕ ಒಳಗೊಳ್ಳುವಿಕೆ ಕೇಂದ್ರ, ಮೈಸೂರು ವಿಶ್ವವಿದ್ಯಾಲಯ