ನಾಗಮಂಗಲ ಶಾಖಾ ನಾಲೆ ಮರುವಿನ್ಯಾಸ ಕಾಮಗಾರಿಗೆ 560 ಕೋಟಿ ರು ಅನುಮೋದನೆ: ಎನ್.ಚಲುವರಾಯಸ್ವಾಮಿ

| Published : Jul 18 2025, 12:45 AM IST

ನಾಗಮಂಗಲ ಶಾಖಾ ನಾಲೆ ಮರುವಿನ್ಯಾಸ ಕಾಮಗಾರಿಗೆ 560 ಕೋಟಿ ರು ಅನುಮೋದನೆ: ಎನ್.ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ವಿಶೇಷ ಪ್ರಯತ್ನ ಹಾಗೂ ಕಾಳಜಿಯಿಂದ ಈ ಯೋಜನೆಗೆ ಅನುಮೋದನೆ ದೊರಕಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹದ್ಯೋಗ ಮಿತ್ರರಿಗೆ ಕೃಷಿ ಸಚಿವರು ಧನ್ಯವಾದ ಸಮರ್ಪಿಸಿದ್ದಾರೆ. ಸರ್ಕಾರ ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ದಿಗೂ ದೊಡ್ಡ ಮಟ್ಟದಲ್ಲಿ ಅನುದಾನ ಮೀಸಲಿರಿಸಿ ಅನುಮೋದನೆ ನೀಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹೇಮಾವತಿ ಯೋಜನಾ ವ್ಯಾಪ್ತಿಯಲ್ಲಿ ನಾಗಮಂಗಲ ಶಾಖಾ ನಾಲೆ ಮರು ವಿನ್ಯಾಸ ಕಾಮಗಾರಿಗೆ ಸಚಿವ ಸಂಪುಟ 560 ಕೋಟಿ ರು. ಅನುಮೋದನೆ ನೀಡಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಶಾಖಾ ನಾಲೆಯು ಮೂಲ ಯೋಜನಾ ವರದಿಯಂತೆ 78.46 ಕಿ.ಮೀ ಉದ್ದವಿದ್ದು, ನಾಲೆಯನ್ನು 1994ರಲ್ಲಿ ಪ್ರಾರಂಭಿಸಿ 2004ರಲ್ಲಿ ಪೂರ್ಣಗೊಳಿಸಿ ನೀರನ್ನು ಹರಿಸಲಾಗುತ್ತಿದೆ. ಪ್ರಸ್ತುತ 717 ಕ್ಯುಸೆಕ್ ಸಾಮರ್ಥ್ಯವಿದೆ. 1,21,197 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಒದಗಿಸಲಾಗುತ್ತಿದೆ. ಇದರ ಜೊತೆಗೆ 53 ಕ್ಯುಸೆಕ್ ನೀರನ್ನು ಕುಡಿಯುವ ನೀರಿನ ಯೋಜನೆಗಳಿಗೆ ಒದಗಿಸಲಾಗಿದೆ. ಒಟ್ಟಾರೆ 770 ಕ್ಯುಸೆಕ್ ಗೆ ಸದರಿ ನಾಲೆಯನ್ನು ರೀಮಾಡಲಿಂಗ್ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಈ ಯೋಜನೆ ಅನುಷ್ಠಾನದಿಂದ ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳ ವಿವಿಧ ಭಾಗಗಳ ರೈತರಿಗೆ ಹಾಗೂ ಜನ - ಜಾನುವಾರುಗಳಿಗೆ ಅನುಕೂಲವಾಗಿದೆ. ಇದೊಂದು ಗ್ಯಾರಂಟಿ ಸರ್ಕಾರ, ಅಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚಾಗಿ ಹಣ ಬಿಡುಗಡೆಯಾಗುತ್ತಿಲ್ಲ ಎಂದೆಲ್ಲಾ ಆರೋಪಗಳಿಗೆ ಇದು ಉತ್ತರವಾಗಿದೆ ಎಂದು ತಿಳಿಸಿದ್ದಾರೆ.

ಹಾಲಿ ನಾಲೆ ತಿಪಟೂರು ತಾಲೂಕಿನಲ್ಲಿ 20.39 ಕಿ.ಮೀ. ಇದ್ದು, 4177 ಎಕರೆ ಅಚ್ಚುಕಟ್ಟು ಪ್ರದೇಶ, ತುರುವೇಕೆರೆ ತಾಲೂಕಿನಲ್ಲಿ 25.01 ಕಿ.ಮೀ ಇದ್ದು, 60274 ಎಕರೆ ಅಚ್ಚುಕಟ್ಟು ಪ್ರದೇಶ ಹಾಗೂ ನಾಗಮಂಗಲ ತಾಲೂಕಿನಲ್ಲಿ 30.56 ಕಿ.ಮೀ ಇದ್ದು, 56746 ಎಕರೆ ಅಚ್ಚುಕಟ್ಟು ಪ್ರದೇಶವಿದೆ ಹಾಗೂ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಾಲೆಯು 2.50 ಕಿ.ಮೀ. ಉದ್ದವಿದ್ದು ಒಟ್ಟಾರೆ 78.46 ಕಿ.ಮೀ. ಇದ್ದು, 1,21,197 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ.

ಈ ನಾಲೆಯನ್ನು ಸುಮಾರು 20 ರಿಂದ 30 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ನೀರಿನ ಸತತ ಹರಿಯುವಿಕೆಯಿಂದ ನಾಲೆ ದುರ್ಬಲ ಭಾಗಗಳಲ್ಲಿ ಕೊರಕಲು ಉಂಟಾಗಿ ಹಲವು ಭಾಗಗಳಲ್ಲಿ ಲೈನಿಂಗ್ ಹಾಳಾಗಿದೆ. ಡೀಪ್ ಕಟ್ ಭಾಗಗಳಲ್ಲಿ ಮತ್ತು ಕಟ್ & ಕವರ್ ಡಕ್ ಗಳನ್ನು ಪರಿಷ್ಕೃತ ಸಾಮರ್ಥ್ಯಕ್ಕೆ ವಿನ್ಯಾಸಗೊಳಿಸಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತದೆ.

ಪ್ರಸ್ತುತ ಸುಸ್ಥಿತಿಯಲ್ಲಿರುವ ಸುಮಾರು 4.20 ಕಿ.ಮೀ ಉದ್ದದ ಲೈನಿಂಗ್ ಅನ್ನು ಉಳಿಸಿಕೊಂಡು ಹಾಳಾಗಿರುವ ಉಳಿದ ಭಾಗಗಳನ್ನು ತೆಗೆದು ಹೊಸದಾಗಿ ಲೈನಿಂಗ್ ನಿರ್ಮಿಸುವುದು. ನಾಲೆ ಏರಿಯ ಹಲವು ಸ್ಥಳಗಳಲ್ಲಿ ಹೊರ ಇಳಿಜಾರಿನ ಭಾಗಗಳು ಕುಸಿದಿವೆ. ಇವುಗಳ ರಕ್ಷಣೆ ಮಾಡುವುದು, ಜನ- ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಇತರೆ ಅನುಕೂಲಗಳಿಗಾಗಿ ಸೋಪಾನ, ಕ್ಯಾಟಲ್ ರ್‍ಯಾಪ್ ಹಾಗೂ ಕೆಲವು ಸೇತುವೆಗಳನ್ನು ನಿರ್ಮಿಸಲಾಗುವುದು.

ನಾಲೆಯ ವಾರ್ಷಿಕ ನಿರ್ವಹಣೆಗೆ ಅನುವಾಗುವಂತೆ ಡೀಪ್ ಕಟ್ ಭಾಗಗಳಲ್ಲಿ ರ್‍ಯಾಂಪ್ಪ ನಿರ್ಮಿಸುವುದು. ನಾಲೆ ಮುಖ್ಯ ಭಾಗಗಳಲ್ಲಿ ನೀರಿನ ಸಾಮರ್ಥ್ಯವನ್ನು ಅಳೆಯಲು ಗೇಜಿಂಗ್ ವ್ಯವಸ್ಥೆ (SCADA) ಅಳವಡಿಸುವುದು ಹಾಗೂ ಇದಕ್ಕಾಗಿ ಭದ್ರತಾ ಕೊಠಡಿಗಳನ್ನು ನಿರ್ಮಿಸುವುದು.

ಈ ಹಿಂದೆ ನಿರ್ಮಿಸಲಾಗಿರುವ ಒಟ್ಟು 432 ಸಂಖ್ಯೆಯ ಅಡ್ಡ ಮೋರಿ/ಕಟ್ಟಡಗಳ ಪೈಕಿ ಸುಸ್ಥಿತಿಯಲ್ಲಿರುವ 147 ಅಡ್ಡಮೋರಿಗಳನ್ನು ಹೊರತುಪಡಿಸಿ ಇನ್ನು ಉಳಿದ 285 ಸಂಖ್ಯೆ ಅಡ್ಡ ಮೋರಿ/ಕಟ್ಟಡಗಳ ಪುನರ್ ನಿರ್ಮಾಣ/ದುರಸ್ತಿ ಮಾಡಲು ಹಾಗೂ 79 ಸಂಖ್ಯೆ ಹೊಸ ಅಡ್ಡ/ಮೋರಿ/ಕಟ್ಟಡಗಳನ್ನು (ಇವುಗಳಲ್ಲಿ 3 ಸಂಖ್ಯೆಯ ಸೇತುವೆ, 23 ಸಂಖ್ಯೆ ಕವರ್ ಡಕ್ ಗಳು, 42 ಸಂಖ್ಯೆಯ ಗ್ರಾವಿಟಿ ವಾಲ್, 8 ಡೀಪ್ ಕಟ್ ರ್ಯಾಂಪ್ ಗಳು, 1 ಸಂಖ್ಯೆ ಇನ್ ಲೈಟ್, 1 ಸಂಖ್ಯೆ ಕ್ಯಾಟಲ್ ರ್‍ಯಾಂಪ್, 1 ಸಂಖ್ಯೆ ರಿವೀಲಿಂಗ್ ವಿಯರ್) ನಿರ್ಮಿಸಲು ಅನುವು ಮಾಡಲಾಗಿದೆ.

ನಮ್ಮ ವಿಶೇಷ ಪ್ರಯತ್ನ ಹಾಗೂ ಕಾಳಜಿಯಿಂದ ಈ ಯೋಜನೆಗೆ ಅನುಮೋದನೆ ದೊರಕಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹದ್ಯೋಗ ಮಿತ್ರರಿಗೆ ಕೃಷಿ ಸಚಿವರು ಧನ್ಯವಾದ ಸಮರ್ಪಿಸಿದ್ದಾರೆ. ಸರ್ಕಾರ ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ದಿಗೂ ದೊಡ್ಡ ಮಟ್ಟದಲ್ಲಿ ಅನುದಾನ ಮೀಸಲಿರಿಸಿ ಅನುಮೋದನೆ ನೀಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.