ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಪುರಸಭೆಯಿಂದ ಹಂಚಿಕೆ ಮಾಡಿರುವ 582 ಫಲಾನುಭವಿಗಳ ನಿವೇಶನ ಹಾಗೂ ಕಟ್ಟಡಗಳನ್ನು ಅಧಿಕೃತ ಸ್ವತ್ತುಗಳೆಂದು ಪರಿಗಣಿಸಿ ಆದೇಶಿಸುವಂತೆ ಶಾಸಕ ಎಚ್.ಟಿ.ಮಂಜು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಪತ್ರ ಬರೆದಿದ್ದಾರೆ.ನಿವೇಶನಗಳ ಅಕ್ರಮ-ಸಕ್ರಮ ಕುರಿತು ರಾಜ್ಯ ನಗರಾಭಿವೃದ್ಧಿ ಇಲಾಖೆ (ಪೌರಡಳಿತ) ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಶಾಸಕರು, ಈ ನಿವೇಶನಗಳ ಸಕ್ರಮಾತಿಗೆ ಸದನದಲ್ಲೂ ಪ್ರಸ್ತಾಪಿಸಿದ್ದೇನೆ. ಸದನದಲ್ಲಿ ಗೊಂದಲ ಉಂಟಾದ ಕಾರಣದಿಂದ ವಿಷಯ ವಿಧಾನ ಸಭೆಯಲ್ಲಿ ಚರ್ಚೆಗೆ ಬರಲಿಲ್ಲ ಎಂದು ಹೇಳಿದ್ದಾರೆ.
ಹೇಮಾವತಿ ಬಡಾವಣೆಯಲ್ಲಿ ನಿರ್ಗತಿಕರಿಗೆ ಮತ್ತು ವಸತಿ ರಹಿತರಿಗೆ ನಿವೇಶನ ಹಂಚಲು 1975- 76ರಲ್ಲಿ ಪುರಸಭೆ 51.25 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ನಿವೇಶನಗಳ ವಸತಿ ವಿನ್ಯಾಸ ನಕಾಶೆಗೆ ನಗರ ಯೋಜನೆ ನಿರ್ದೇಶಕರು ಅನುಮೋದನೆ ನೀಡಿದ್ದರು. ನಂತರ ಬಹಿರಂಗ ಹರಾಜು, ಸಾಮಾನ್ಯ ಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಮೂಲಕ ಹಂಚಿಕೆ ಮಾಡಲಾಗಿದೆ.ಹಂಚಿಕೆಯಾದ ನಿವೇಶನಗಳನ್ನು ನಿಯಮಾನುಸಾರ ಮಾಡಿಲ್ಲ ಎನ್ನುವ ಕಾರಣದಿಂದ ಲೋಕಾಯುಕ್ತ ತನಿಖೆಗೆ ಒಳಪಡಿಸಲಾಗಿತ್ತು. ಅನರ್ಹರಿಗೆ ನಿಯಮ ಉಲ್ಲಂಘಿಸಿ ನಿವೇಶನ ಹಂಚಿಕೆ, ನಿವೇಶನಗಳ ಸಂಖ್ಯೆ ಪುನರಾವರ್ತನೆ, ನಿವೇಶನಗಳಿಗೆ ಉಪ ಸಂಖ್ಯೆ ನೀಡಿರುವುದು ಸೇರಿದಂತೆ ಹಲವು ಲೋಪ ತನಿಖೆ ನಡೆಸಿ ಲೋಕಾಯುಕ್ತರು ಪತ್ತೆಹಚ್ಚಿದ್ದರು.
ಲೋಕಾಯುಕ್ತ ವರದಿ ಶಿಘಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಪಾಂಡವಪುರ ಉಪ ವಿಭಾಗಾಧಿಕಾರಿಗಳು ಮತ್ತು ಅಭಿವೃದ್ಧಿ ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿತ್ತು. ತನಿಖೆ ವರದಿ ಪರಿಶೀಲಿಸಿ, ಸರ್ಕಾರದ ಮಟ್ಟದಲ್ಲಿ ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ನಿಯಮಬಾಹಿರವಾದ ನಿವೇಶನ ಮತ್ತು ಕಟ್ಟಡಗಳಿಗೆ ಶುಲ್ಕ ದಂಡ ವಿಧಿಸಿ ಸಕ್ರಮಗೊಳಿಸಲು ತನಿಖಾಧಿಕಾರಿಗಳು ವರದಿ ನೀಡಿತ್ತು.ಆದರೆ, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲ 1276 ನಿವೇಶನಗಳನ್ನು ಸಕ್ರಮಗೊಳಿಸುವ ಬದಲು 694 ನಿವೇಶನಗಳನ್ನು ಮಾತ್ರ ಸಕ್ರಮಗೊಳಿಸಿ ಉಳಿದ 582 ನಿವೇಶನಗಳನ್ನು ಅನಧಿಕೃತ ಎಂದು ಪರಿಗಣಿಸಿದೆ. ಅನಧಿಕೃತ ನಿವೇಶನಗಳ ಹಂಚಿಕೆ ರದ್ದುಪಡಿಸುವ ಮುನ್ನ ಸಂಬಂಧಿಸಿದವರಿಗೆ ನೋಟಿಸ್ ನೀಡಿ ಅಂತಹ ನೋಟಿಸ್ ಗಳಿಗೆ ಬರುವ ಉತ್ತರ ಪರಿಶೀಲಿಸಿ ರದ್ದುಪಡಿಸುವ ಬಗ್ಗೆ ಮುಂದಿನ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಆದರೆ, ಈ ಆದೇಶ ತಾರತಮ್ಯದಿಂದ ಕೂಡಿದೆ. ಕಳೆದ 30-40 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಫಲಾನುಭವಿಗಳಿಗೆ ಈ ತೀರ್ಮಾನದಿಂದ ಅನಾನುಕೂಲವಾಗಿದೆ. ನಿವೇಶನ ಹಂಚಿಕೆ ಮಾಡುವಾಗ ಮಾರ್ಗಸೂಚಿ ಉಲ್ಲಂಘಟನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ನಿವೇಶನ ಹಂಚಿಕೆ ವೇಳೆ ಅಧಿಕಾರಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಿಸಿಲ್ಲ. ಆದ್ದರಿಂದ ಅಧಿಕಾರಿಗಳು ಮಾಡಿದ ತಪ್ಪಿಗೆ ಫಲಾನುಭವಿಗಳಿಗೆ ತೊಂದರೆ ಮಾಡುವುದು ಸರಿಯಲ್ಲ ಎಂದು ಶಾಸಕ ಎಚ್.ಟಿ.ಮಂಜು ಪತ್ರದಲ್ಲಿ ಹೇಳಿದ್ದಾರೆ.ರಾಜ್ಯ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ 582 ನಿವೇಶನಗಳ ಫಲಾನುಭವಿಗಳಿಗೆ ಶುಲ್ಕ-ದಂಡ ವಿಧಿಸಿ ಅಕ್ರಮ ಸಕ್ರಮ ಯೋಜನೆಯಡಿ ಸಕ್ರಮಗೊಳಿಸಿ ನಿವೇಶನಗಳನ್ನು ಅಧಿಕೃತ ಸ್ವತ್ತುಗಳೆಂದು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.