ಸಾರಾಂಶ
ಕಾರವಾರ: 5ನೇ ಶತಮಾನದಲ್ಲಿ ನಿರ್ಮಿಸಿದ್ದ ನೇಯ್ಗೆ ಮಾಡಿದ ಮಾದರಿಯ ಹಡಗನ್ನು ಭಾರತೀಯ ನೌಕಾಪಡೆ ಪುನರ್ ನಿರ್ಮಾಣ ಮಾಡಿದ್ದು, ಐಎನ್‌ಎಸ್‌ವಿ ಕೌಂಡಿನ್ಯ ಹೆಸರಿನ ಈ ಹಡಗನ್ನು ಮೇ 21ರಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಲೋಕಾರ್ಪಣೆ ಮಾಡಲಿದ್ದಾರೆ.
ಕೇಂದ್ರ ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಮತ್ತು ಮೆಸ್ಸೆಸ್ ಹೋಡಿ ಇನ್ನೋವೇಷನ್ಸ್ ನಡುವೆ ಜುಲೈ 2023ರಲ್ಲಿ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಹಡಗು ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಗೋವಾದ ಶಿಪ್‌ಯಾರ್ಡಿನಲ್ಲಿ ಈ ಹಡಗು ನಿರ್ಮಿಸಲಾಯಿತು.ಅಜಂತಾ ಗುಹೆಗಳಲ್ಲಿನ ಚಿತ್ರದಿಂದ ಪ್ರೇರಿತವಾಗಿ ಸಂಪೂರ್ಣವಾಗಿ ಸಾಂಪ್ರದಾಯಿಕ ವಿಧಾನದಿಂದ ಕಚ್ಚಾವಸ್ತುಗಳನ್ನು ಬಳಸಿ ಕೇರಳದ ಕುಶಲಕರ್ಮಿಗಳು ಬಾಬು ಶಂಕರನ್ ನೇತೃತ್ವದಲ್ಲಿ ಈ ಹಡಗನ್ನು ನಿರ್ಮಿಸಿದ್ದಾರೆ.
ಈ ಹಡಗಿನಲ್ಲಿ ಮರದ ಹಲಗೆ, ದಿಮ್ಮಿಗಳನ್ನು ಬಳಸಿ ನೇಯ್ಗೆ ಮಾಡಲಾಗಿದೆ. ಹಾಯಿಗಳು ಹಾಗೂ ಸಾಂಪ್ರದಾಯಿಕ ಸ್ಟೇರಿಂಗ್ ರೂಪಿಸಲಾಗಿದೆ. ಇದು ಪ್ರಸ್ತುತ ವಿಶ್ವದಲ್ಲಿರುವ ಯಾವುದೆ ಹಡಗುಗಳಿಗಿಂತ ಭಿನ್ನವಾಗಿದೆ.ಭಾರತೀಯ ನೌಕಾಪಡೆಯು ಮೆಸ್ ಹೋಡಿ ಇನ್ನೋವೇಶನ್ಸ್, ಸಾಂಪ್ರದಾಯಿಕ ಕುಶಲಕರ್ಮಿಗಳ ಸಹಯೋಗದೊಂದಿಗೆ ಪರಿಕಲ್ಪನೆ, ಅಭಿವೃದ್ಧಿ, ವಿನ್ಯಾಸ, ತಾಂತ್ರಿಕ ಮೌಲ್ಯೀಕರಣ ಮತ್ತು ನಿರ್ಮಾಣ ಸೇರಿದಂತೆ ಈ ಯೋಜನೆಯ ಅನುಷ್ಠಾನದ ಸಂಪೂರ್ಣ ಮೇಲ್ವಿಚಾರಣೆ ಮಾಡಿದೆ. ಹಡಗಿನ ವಿನ್ಯಾಸ ಮತ್ತು ನಿರ್ಮಾಣ ದೊಡ್ಡ ಸವಾಲಾಗಿತ್ತು. ಏಕೆಂದರೆ ಪ್ರಸ್ತುತ ಹಡಗು ನಿರ್ಮಾಣದಲ್ಲಿ ಬಳಸುವ ಯಾವುದೆ ವಸ್ತು, ಉಪಕರಣಗಳನ್ನು ಬಳಸದೆ ಸಾಂಪ್ರದಾಯಿಕವಾಗಿ ನಿರ್ಮಿಸಬೇಕಾಗಿತ್ತು. ಇದಕ್ಕಾಗಿ ಪುರಾತತ್ವ ಶಾಸ್ತ್ರ, ನೌಕಾ ವಾಸ್ತುಶಿಲ್ಪ, ಹೈಡ್ರೋಡೈನಾಮಿಕ್ ಪರೀಕ್ಷೆಯ ಮೊರೆ ಹೋಗಲಾಗಿತ್ತು. ಐಐಟಿ ಮದ್ರಾಸ್‌ನ ಸಾಗರ ಎಂಜಿನಿಯರಿಂಗ್ ಇಲಾಖೆ ಹಡಗಿನ ಪರೀಕ್ಷೆ ನಡೆಸಿತು.
ಹಡಗಿನ ಲೋಕಾರ್ಪಣೆಯ ತರುವಾಯ ಸಾಂಪ್ರದಾಯಿಕ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಈ ಹಡಗಿನಲ್ಲಿ ಯಾನ ಮಾಡುವ ಉದ್ದೇಶ ನೌಕಾಪಡೆ ಹೊಂದಿದೆ. ಗುಜರಾತಿನಿಂದ ಓಮನ್ ತನಕದ ಮೊದಲ ಸಾಗರೋತ್ತರ ಪ್ರಯಾಣಕ್ಕೆ ಸಿದ್ಧತೆ ನಡೆಸಲಾಗಿದೆ.ಸೇರ್ಪಡೆಯ ನಂತರ, ಯೋಜನೆಯು ತನ್ನ ಎರಡನೇ ಪ್ರಮುಖ ಹಂತ ಪ್ರವೇಶಿಸುತ್ತದೆ. ಅಲ್ಲಿ ಭಾರತೀಯ ನೌಕಾಪಡೆಯು ಸಾಂಪ್ರದಾಯಿಕ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಈ ಹಡಗಿನಲ್ಲಿ ನೌಕಾಯಾನ ಮಾಡುವ ಮಹತ್ವಾಕಾಂಕ್ಷೆಯ ಸವಾಲನ್ನು ಕೈಗೆತ್ತಿಕೊಳ್ಳುತ್ತದೆ. ಪ್ರಾಚೀನ ಭಾರತೀಯ ಸಮುದ್ರಯಾನದ ಉತ್ಸಾಹ ಪುನರುಜ್ಜೀವನಗೊಳಿಸುತ್ತದೆ. ಗುಜರಾತ್‌ನಿಂದ ಓಮನ್‌ಗೆ ಹಡಗಿನ ಮೊದಲ ಸಾಗರೋತ್ತರ ಪ್ರಯಾಣಕ್ಕೆ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ.
ಈ ಹಡಗಿನಿಂದ ಭಾರತದ ಶ್ರೀಮಂತ ಹಡಗು ನಿರ್ಮಾಣ ಪರಂಪರೆ ಮತ್ತೆ ಆವಿರ್ಭವಿಸಿದೆ. ಹಡಗು ನಿರ್ಮಾಣದ ಸಂಪ್ರದಾಯ, ಪರಂಪರೆ ರಕ್ಷಿಸುವ ಕಾರ್ಯವೂ ನೆರವೇರಿದಂತಾಗಿದೆ.