ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಜನರ ಸಾವು

| Published : Apr 22 2024, 02:16 AM IST

ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಜನರ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಘಟನೆಯಲ್ಲಿ ಹುಬ್ಬಳ್ಳಿ ಈಶ್ವರನಗರ ಎಪಿಎಂಸಿಯ ನಿವಾಸಿಗಳಾದ ನಜೀರ್‌ ಅಹಮ್ಮದ ಚಮ್ಮನಸಾಬ್‌ ಹೊಂಬಾಳ (40) ಅಲ್ಫಿಯಾ ನಜೀರ್‌ ಅಹಮ್ಮದ ಹೊಂಬಾಳ (10), ಮೋಹಿನ್‌ ನಜೀರ ಅಹಮ್ಮದ ಹೊಂಬಾಳ (6), ಬೆಂಗಳೂರು ನಿವಾಸಿಗಳಾದ ರೇಷ್ಮಾ ಯುನಿಸ್ ತೌಷಿಫ್ ಅಹ್ಮದ (38) ಇರ್ಫಾ ತೌಷಿಫ್‌ ಅಹ್ಮದ (15) ಅಬೀದ ತೌಷಿಫ್‌ ಅಹ್ಮದ (12) ಮೃತಪಟ್ಟಿದ್ದಾರೆ.

ದಾಂಡೇಲಿ: ಇಲ್ಲಿಗೆ ಸಮೀಪದ ಅಕೋಡಾದಲ್ಲಿ ಕಾಳಿ ನದಿ ಹಿನ್ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳ ರಕ್ಷಣೆಗೆ ಹೋದ ಪಾಲಕರೂ ಸೇರಿದಂತೆ ಒಂದೇ ಕುಟುಂಬದ ಆರು ಜನರು ಭಾನುವಾರ ನೀರುಪಾಲಾಗಿದ್ದಾರೆ. ತೀರದಲ್ಲಿದ್ದ ಇಬ್ಬರು ಸುರಕ್ಷಿತವಾಗಿದ್ದಾರೆ.ಘಟನೆಯಲ್ಲಿ ಹುಬ್ಬಳ್ಳಿ ಈಶ್ವರನಗರ ಎಪಿಎಂಸಿಯ ನಿವಾಸಿಗಳಾದ ನಜೀರ್‌ ಅಹಮ್ಮದ ಚಮ್ಮನಸಾಬ್‌ ಹೊಂಬಾಳ (40) ಅಲ್ಫಿಯಾ ನಜೀರ್‌ ಅಹಮ್ಮದ ಹೊಂಬಾಳ (10), ಮೋಹಿನ್‌ ನಜೀರ ಅಹಮ್ಮದ ಹೊಂಬಾಳ (6), ಬೆಂಗಳೂರು ನಿವಾಸಿಗಳಾದ ರೇಷ್ಮಾ ಯುನಿಸ್ ತೌಷಿಫ್ ಅಹ್ಮದ (38) ಇರ್ಫಾ ತೌಷಿಫ್‌ ಅಹ್ಮದ (15) ಅಬೀದ ತೌಷಿಫ್‌ ಅಹ್ಮದ (12) ಮೃತಪಟ್ಟಿದ್ದಾರೆ.

ಹುಬ್ಬಳ್ಳಿ ಮೂಲದ ಒಂದೇ ಕುಟುಂಬದ 8 ಜನರು ತಾಲೂಕಿನ ಬಿರಂಪಾಲಿ ಗ್ರಾಮದ ಅಕೋಡಾದ ಕಾಳಿ ನದಿ ಹಿನ್ನೀರಿನಲ್ಲಿ ಪ್ರವಾಸಕ್ಕೆ ಬಂದಿದ್ದರು. ಇಲ್ಲಿನ ಚಿಕ್ಕ ಜಲಪಾತದ ಬಳಿ ಸುಮಾರು 15 ಅಡಿಯಷ್ಟು ಆಳ ನೀರಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಬಾಲಕಿಯೊಬ್ಬಳು ಆಯತಪ್ಪಿ ನೀರಿಗೆ ಜಾರಿ ಬಿದ್ದಿದ್ದಾಳೆ. ತಕ್ಷಣ ಮತ್ತಿಬ್ಬರು ಮಕ್ಕಳು ರಕ್ಷಣೆಗೆಂದು ಹೋದವರೂ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ತಂದೆ ಕೂಡಲೆ ಮಕ್ಕಳ ರಕ್ಷಣೆಗೆ ನದಿಗಿಳಿದರು. ಆನಂತರ ಮತ್ತೆ ಇಬ್ಬರು ರಕ್ಷಣೆಗಾಗಿ ನದಿಗಿಳಿದರು. ಯಾರೂ ಮೇಲಕ್ಕೆ ಬಾರದಾದಾಗ ಮೇಲ್ಗಡೆ ಇದ್ದ ಇಬ್ಬರು ಮಹಿಳೆಯರು ಕಂಗೆಟ್ಟು ಸಮೀಪದ ಗೌಳಿಗರಿಗೆ ಮಾಹಿತಿ ನೀಡಿದರು. ಅವರು ಜಂಗಲ್ ಲಾಡ್ಜ್‌ನವರಿಗೆ ಕರೆ ಮಾಡಿ ತಿಳಿಸಿದರು. ಜಂಗಲ್ ಲಾಡ್ಜ್‌ನವರ ರ‍್ಯಾಫ್ಟಿಂಗ್ ತಂಡ ಆಗಮಿಸಿ ಮೃತದೇಹಗಳನ್ನು ಪತ್ತೆ ಹಚ್ಚಿತು.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದಾಂಡೇಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದಾಂಡೇಲಿ ಗ್ರಾಮೀಣ ಪೊಲೀಸ್‌ ಠಾಣೆಯ ಪಿಎಸ್‌ಐ ಕೃಷ್ಣ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೀರಿನ ಆಳ ತುಂಬಾ ಜಾಸ್ತಿ ಇತ್ತು: ಅಕೋಡಾ ಜಲಪಾತದ ಬಳಿ ಪ್ರವಾಸಿಗರು ಹೋಗುವುದು ತುಂಬ ಕಡಿಮೆ. ಈ ಹಿಂದೆ ಇಲ್ಲಿ ಇಂತಹ ದುರ್ಘಟನೆ ನಡೆದಿಲ್ಲ. ನೀರು ಆಳವಾಗಿರುವುದರಿಂದ ಜಲಪಾತದ ಬಳಿ ಈಜಾಡಲು ಯಾರೂ ತೆರಳುವುದಿಲ್ಲ. ಆದರೆ ಈ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ಇರಲಿಲ್ಲ.

ದೇಶಪಾಂಡೆ ಸಂತಾಪ: ಈ ಘಟನೆ ಬಗ್ಗೆ ಶಾಸಕ ಆರ್.ವಿ. ದೇಶಪಾಂಡೆ ಸಂತಾಪ ಸೂಚಿಸಿ, ದಾಂಡೇಲಿ- ಜೋಯಿಡಾ ಭಾಗದಲ್ಲಿ ಪ್ರವಾಸಕ್ಕೆ ಎಂದು ಬರುವ ಪ್ರವಾಸಿಗರು ಜೀವರಕ್ಷಣೆಯ ಬಗ್ಗೆ ಜಾಗರೂಕತೆ ವಹಿಸಿ, ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಬೇಕು. ಯಾವುದೇ ಅವಘಡಕ್ಕೆ ಅವಕಾಶ ಕೊಡಬಾರದು ಎಂದು ತಿಳಿಸಿದ್ದಾರೆ.