ಬಿಜೆಪಿಗೆ ಕಾಳ ಧನಿಕರಿಂದ 6 ಸಾವಿರ ಕೋಟಿ ಎಲೆಕ್ಷನ್‌ ಬಾಂಡ್: ಖರ್ಗೆ ಗಂಭೀರ ಆರೋಪ

| Published : Feb 18 2024, 01:34 AM IST

ಬಿಜೆಪಿಗೆ ಕಾಳ ಧನಿಕರಿಂದ 6 ಸಾವಿರ ಕೋಟಿ ಎಲೆಕ್ಷನ್‌ ಬಾಂಡ್: ಖರ್ಗೆ ಗಂಭೀರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನ್ನು ಪೂರ್ತಿ ನಿರ್ನಾಮ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ದುಡ್ಡೇ ಇರಬಾರದೆಂದು ನಮ್ಮ ಪಕ್ಷದ ಎಲ್ಲ ಅಕೌಂಟ್‌ಗಳನ್ನು ಜಫ್ತು ಮಾಡಿದರು. ತೀವ್ರ ವಿರೋಧ ಬಂದ ಮೇಲೆ ರಿಲೀಸ್‌ ಮಾಡಿದರು. ಆದರೆ ಬಿಜೆಪಿ 6 ಸಾವಿರ ಕೋಟಿ ರು. ಚುನಾವಣಾ ಬಾಂಡ್‌ಗಳನ್ನು ಕಾಳಧನಿಕರಿಂದ ಪಡೆದಿದೆ. ಇತ್ತ ಜನರಿಗೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ನಮಗೆ ಬುದ್ಧಿ ಹೇಳ್ತೀರಾ ಎಂದು ಖರ್ಗೆ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಬಿಜೆಪಿ 6 ಸಾವಿರ ಕೋಟಿ ರು. ಚುನಾವಣಾ ಬಾಂಡ್‌ಗಳನ್ನು ಕಾಳಧನಿಕರಿಂದ ಪಡೆದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಶನಿವಾರ ರಾಜ್ಯ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ನ್ನು ಪೂರ್ತಿ ನಿರ್ನಾಮ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ದುಡ್ಡೇ ಇರಬಾರದೆಂದು ನಮ್ಮ ಪಕ್ಷದ ಎಲ್ಲ ಅಕೌಂಟ್‌ಗಳನ್ನು ಜಫ್ತು ಮಾಡಿದರು. ತೀವ್ರ ವಿರೋಧ ಬಂದ ಮೇಲೆ ರಿಲೀಸ್‌ ಮಾಡಿದರು. ಆದರೆ ಬಿಜೆಪಿ 6 ಸಾವಿರ ಕೋಟಿ ರು. ಚುನಾವಣಾ ಬಾಂಡ್‌ಗಳನ್ನು ಕಾಳಧನಿಕರಿಂದ ಪಡೆದಿದೆ. ಇತ್ತ ಜನರಿಗೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ನಮಗೆ ಬುದ್ಧಿ ಹೇಳ್ತೀರಾ ಎಂದು ಖರ್ಗೆ ಪ್ರಶ್ನಿಸಿದರು. ಮೋದಿ ಸರ್ವಾಧಿಕಾರಿ ಆಗ್ತಾರೆ:

ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳು ಉಳಿಯಬೇಕಾದರೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಹಾಗಾಗಿ ಕಾಂಗ್ರೆಸ್‌ನ್ನು ಇನ್ನಷ್ಟು ಬಲಗೊಳಿಸಬೇಕು. ಬಿಜೆಪಿ ಸರ್ಕಾರ ಈಗಲೇ ನ್ಯಾಯಾಂಗ, ಇಡಿ, ಐಟಿ ಸೇರಿ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನೂ ನಿಯಂತ್ರಣ ಮಾಡುತ್ತಿದೆ. ಮುಂಬರುವ ಪಾರ್ಲಿಮೆಂಟ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಕ್ತಿ ಏನಾದರೂ ಕಡಿಮೆಯಾದರೆ ನರೇಂದ್ರ ಮೋದಿ ಸರ್ವಾಧಿಕಾರಿ ಆಗ್ತಾರೆ. ಮುಂದೆ ಎಲೆಕ್ಷನ್ನೇ ನಡೆಯಲ್ಲ. ಅಂಥವರಿಗೆ ಅಧಿಕಾರ ನೀಡಬೇಡಿ ಎಂದು ಹೇಳಿದರು.ಬಿಜೆಪಿ ಇದ್ದಿದ್ರೆ ಮನುಸ್ಮೃತಿ ಬರ್ತಿತ್ತು:

ಬಿಜೆಪಿಯವರು ಶ್ರೀಮಂತರ ಪರ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡೋರು. ಅವರು ಬಡವರು, ದಲಿತರನ್ನು ತುಳಿಯುವ ಗುರಿ ಇಟ್ಟುಕೊಂಡಿದ್ದಾರೆ. ಅಂಥವರ ಪಕ್ಷಕ್ಕೆ ಹೋಗ್ತೀರಾ ಎಂದು ಹೇಳಿದ ಅವರು, ಕಾಂಗ್ರೆಸ್‌ ಇದ್ದ ಕಾರಣ ಸಂವಿಧಾನ ಬಂದ ಮೇಲೆ ಮಹಿಳೆಯರಿಗೆ ಓಟಿನ ಅಧಿಕಾರ ಸಿಕ್ಕಿದೆ. ನಮ್ಮ ದೇಶದಲ್ಲಿ ಈ ಕಾನೂನು ಜಾರಿ ಮಾಡಿದ ಮೇಲೆ ಇತರ ದೇಶಗಳೂ ಮಹಿಳೆಯರಿಗೆ ಓಟಿನ ಅಧಿಕಾರ ನೀಡಿವೆ. ಅವರ ತತ್ವದ ಪ್ರಕಾರ ಆಗಿದ್ದರೆ ಎಲ್ಲೆಡೆ ಮನುಸ್ಮೃತಿ ಜಾರಿಯಾಗುತ್ತಿತ್ತು. ಹೆಣ್ಮಕ್ಕಳಿಗೆ ಯಾವುದೇ ಸ್ಥಾನಮಾನ ಸಿಗುತ್ತಿರಲಿಲ್ಲ ಎಂದು ಆರೋಪಿಸಿದರು.ನಮ್ಮ ಶಕ್ತಿ ನೋಡಿ ಮೋದಿ ಬೈತಾರೆ:

ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದರೆ ನರೇಂದ್ರ ಮೋದಿ ಗೇಲಿ ಮಾಡ್ತಾರೆ. ನಾನು ಬ್ಯಾಕ್‌ವರ್ಡ್‌ ಅಂತಾರೆ. ನಾವೇನು ಟಾಟಾ ಬಿರ್ಲಾಗಳಾಗಿದ್ದೆವಾ? ನಾವೂ ಕಷ್ಟಪಟ್ಟೇ ಗದ್ದುಗೆ ಹಿಡಿದಿದ್ದೇವೆ. ರಾಹುಲ್‌ ಗಾಂಧಿ ಕುಚ್‌ ನಹೀ ಎಂದು ಮೋದಿ ಹೇಳುತ್ತಾರೆ. ನಮ್ಮಲ್ಲಿ ಶಕ್ತಿ ಇದೆ ಎನ್ನುವುದು ಗೊತ್ತಾಗಿಯೇ ದಿನಾ ಎದ್ದು ಬೈತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.20 ಸೀಟ್‌ ಗೆಲ್ತೇವೆ:

ಸೆಕ್ಯುಲರ್‌ ಎಂಬ ಹೆಸರು ಇಟ್ಟುಕೊಂಡ ಪಕ್ಷದ ಎಚ್‌.ಡಿ. ದೇವೇಗೌಡರು ಈಗ ಮೋದಿ ತೊಡೆ ಮೇಲೆ ಕೂತಿದ್ದಾರೆ. ಒಂದೊಮ್ಮೆ ದೂರುತ್ತಿದ್ದವರು ಈಗ ಮುದ್ದಾಡುತ್ತಿದ್ದಾರೆ. ಅವರು ಏನೇ ಮಾಡಲಿ ನಮ್ಮ ಗ್ಯಾರಂಟಿ ಯೋಜನೆಗಳು, ಬಜೆಟ್‌ನ್ನು ನೋಡಿದ ಮೇಲೆ ರಾಜ್ಯದಲ್ಲಿ ಕನಿಷ್ಠ 20 ಸೀಟ್‌ಗಳನ್ನಾದರೂ ಗೆದ್ದೇ ಗೆಲ್ಲಲಿದ್ದೇವೆ ಎಂಬ ವಿಶ್ವಾಸ ಹುಟ್ಟಿದೆ ಎಂದರು.ಮೋದಿ ಹಳೆ ಗ್ಯಾರಂಟಿಗಳೆಲ್ಲ ಫೇಲ್‌:

ನಾವು ಗ್ಯಾರಂಟಿ ಮಾಡಿದ ಮೇಲೆ ಮೋದಿ ಎಚ್ಚರಾಗಿದ್ದಾರೆ. ನಾನ್ಯಾಕೆ ಕೊಡಬಾರದು ಅಂತ ಶುರು ಮಾಡಿದ್ದಾರೆ. ಈಗಾಗಲೇ ಅವರು ನೀಡಿದ 15 ಲಕ್ಷ, ರೈತರ ಹಣ ಡಬಲ್‌, ಪ್ರತಿವರ್ಷ 2 ಕೋಟಿ ಉದ್ಯೋಗ ಭರವಸೆಗಳು ಎಲ್ಲಿ ಹೋದವು? ಅವರ ಹಳೆ ಗ್ಯಾರಂಟಿಗಳೆಲ್ಲ ಫೇಲ್‌ ಆದ ಮೇಲೆ ಈಗ ಮತ್ತೆ ಗ್ಯಾರಂಟಿ ಎನ್ನುತ್ತಿದ್ದಾರೆ. ನಾವೇನು ಸಿದ್ದರಾಮಯ್ಯ ಗ್ಯಾರಂಟಿ ಎನ್ನುತ್ತಿಲ್ಲ, ಕಾಂಗ್ರೆಸ್‌ ಗ್ಯಾರಂಟಿ ಎನ್ನುತ್ತೇವೆ. ಅವರು ಮೋದಿ ಗ್ಯಾರಂಟಿ ಅಂತಾರೆ. ದೇಶ ಇದ್ದರೆ ತಾನೇ ಮೋದಿ ಎಂದು ಖರ್ಗೆ ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಮಾತನಾಡಿದರು. ಗೃಹ ಸಚಿವ ಡಾ. ಪರಮೇಶ್ವರ್‌, ಎಂಎಲ್ಸಿ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಸಚಿವರಾದ ದಿನೇಶ್‌ ಗುಂಡೂರಾವ್‌, ಮಂಕಾಳ ವೈದ್ಯ, ಸುಧಾಕರ್‌, ಲಕ್ಷ್ಮೀ ಹೆಬ್ಬಾಳ್ಕರ್‌, ಕೆ.ಜೆ. ಜಾರ್ಜ್‌, ಮಧು ಬಂಗಾರಪ್ಪ, ಕೆ. ವೆಂಕಟೇಶ್‌, ಶಾಸಕ ಆರ್‌.ವಿ. ದೇಶಪಾಂಡೆ, ಮಾಜಿ ಸಚಿವರಾದ ಮೋಟಮ್ಮ, ಟಿ.ಬಿ. ಜಯಚಂದ್ರ, ರಮಾನಾಥ ರೈ, ಆಂಜನೇಯ, ಮಾಜಿ ಎಂಪಿ ಉಗ್ರಪ್ಪ, ಅಖಿಲ ಭಾರತ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌, ಮಹಿಳಾ ಕಾಂಗ್ರೆಸ್‌ ರಾಜ್ಯಾಧ್ಯಕ್ಷೆ ಪುಷ್ಪಾಅಮರನಾಥ್‌, ಶಾಸಕ ಅಶೋಕ್‌ ರೈ, ಮುಖಂಡರಾದ ಶಕುಂತಳಾ ಶೆಟ್ಟಿ, ಗಫೂರ್‌, ಐವನ್‌ ಡಿಸೋಜ, ವಿನಯ ಕುಮಾರ್‌ ಸೊರಕೆ, ಮಿಥುನ್‌ ರೈ, ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರು, ಜಿಲ್ಲೆ, ರಾಜ್ಯದ ನಾಯಕರು ಇದ್ದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಸ್ವಾಗತಿಸಿದರು. ಡಾ. ಮಂಜುನಾಥ ಭಂಡಾರಿ ಮತ್ತು ಮಮತಾ ಗಟ್ಟಿ ನಿರೂಪಿಸಿದರು.ಕಾಂಗ್ರೆಸ್‌ನಿಂದ ಭೂಮಿ ಪಡೆದು ಮೋದಿ ಝಂಡಾ ಹೀಡಿತೀರಾ?

ಕರಾವಳಿ ಜಿಲ್ಲೆಗಳಲ್ಲಿ ಲಕ್ಷಾಂತರ ಜನ ಕಡು ಬಡವರು ಕಾಂಗ್ರೆಸ್‌ನ ಭೂ ಮಸೂದೆ ಕಾನೂನಿನಿಂದ ಭೂ ಮಾಲೀಕರಾಗಿ ಶ್ರೀಮಂತರಾಗಿದ್ದಾರೆ. ಕಾಂಗ್ರೆಸ್‌ ತಮಗೆ ಮಾಡಿದ ಉಪಕಾರವನ್ನೀಗ ಅವರು ಮರೆತು ಭಗವಾ ಝಂಡಾ ಹಿಡಿದಿದ್ದಾರೆ. ಇಷ್ಟು ಅಗಾಧ ಸಂಖ್ಯೆಯ ಜನರು ಭೂ ಒಡೆಯರಾಗಲು ನರೇಂದ್ರ ಮೋದಿ ಜಮೀನು ನೀಡಿದ್ರಾ? ಇಲ್ಲದಿದ್ದರೆ ಮೋದಿ ಝಂಡಾ ಹಿಡಿದುಕೊಂಡು ಯಾಕೆ ತಿರುಗಾಡ್ತೀರಿ, ಕರಾವಳಿಯಲ್ಲಿ ನೂರಾರು ಸೇತುವೆಗಳನ್ನು, ದೊಡ್ಡ ದೊಡ್ಡ ಕೈಗಾರಿಕೆಗಳ‍ು, ಸಾರ್ವಜನಿಕ ಆಸ್ತಿಗಳನ್ನು ಕಟ್ಟಿದ್ದು ಕಾಂಗ್ರೆಸ್‌. ನಮ್ಮಿಂದ ಫಲ ಪಡೆದು ನಮ್ಮನ್ನೇ ಮರೆತರೆ ಯಾವ ನ್ಯಾಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಕಡು ಬಡವರಾಗಿದ್ದ ಜನರನ್ನು ಭೂಮಾಲೀಕರನ್ನಾಗಿ ಮಾಡಿದ್ದು ಯಾರು ಎಂದು ನೆನಪು ಮಾಡಿಕೊಳ್ಳದೆ ಇದ್ದರೆ ದೇಶಕ್ಕೆ ಭವಿಷ್ಯವಿಲ್ಲ. ಇನ್ನೂ ಕಾಲ ಮಿಂಚಿಲ್ಲ. ಕಾಂಗ್ರೆಸ್‌ ಸರ್ಕಾರ ಈಗ ನೀಡುತ್ತಿರುವ ಗ್ಯಾರಂಟಿಯನ್ನಾದರೂ ನೆನಪಿಟ್ಟುಕೊಳ್ಳಿ. ನಾವು ಎಲ್ಲ ಗ್ಯಾರಂಟಿಗಳಿಗೆ ಬಜೆಟ್‌ನಲ್ಲೇ ಹಣ ಇಟ್ಟಿದ್ದೇವೆ. ಏನೂ ನೀಡದ ಮನುಷ್ಯನಿಗೆ ಏಕೆ ಜೈಕಾರ ಹಾಕ್ತೀರಿ. ಅನ್ನ ನಮ್ಮದು, ಶಿಕ್ಷಣ ನಮ್ಮದು, ಜೈಕಾರ ಮಾತ್ರ ಮೋದಿಗೆ ಏಕೆ ಎಂದರು.

ಕರಾವಳಿ ಜನತೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಂದ ಮನೆ ದೀಪ ಉರಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅದರ ಉಪಕಾರ ತೀರಿಸುತ್ತಾರೆ. ದ.ಕ., ಉಡುಪಿ ಕಾರ್ಯಕರ್ತರು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಕರಾವಳಿ ಜಿಲ್ಲೆಗಳೂ ಸೇರಿದಂತೆ ರಾಜ್ಯದಲ್ಲಿ ಕನಿಷ್ಠ 20 ಸೀಟ್‌ಗಳನ್ನಾದರೂ ಗೆಲ್ತೇವೆ ಎಂದು ಖರ್ಗೆ ಹೇಳಿದರು.