ವಾರಾಂತ್ಯ ಸಫಾರಿಗೆ 60 ಲಕ್ಷ ಆದಾಯ!

| Published : Jan 01 2025, 12:00 AM IST

ಸಾರಾಂಶ

ಬಂಡೀಪುರ ಸಫಾರಿ ಕ್ಯಾಂಪಸ್‌ನಲ್ಲಿ ಸಫಾರಿಗೆ ತೆರಳಲು ಟಿಕೆಟ್‌ಗಾಗಿ ಪ್ರವಾಸಿಗರು ಕಾದು ನಿಂತಿರುವುದು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ವರ್ಷದ ಅಂತ್ಯದ ಕ್ರಿಸ್‌ಮಸ್ ಹಬ್ಬ ಹಾಗೂ ಸತತ ಮೂರು ದಿನಗಳ ರಜೆ ಬಂದ ಕಾರಣ ಬಂಡೀಪುರ ಸಫಾರಿಯಲ್ಲಿ ಪ್ರವಾಸಿಗರ ದಂಡು ಹರಿದು ಬಂದಿದೆ.

ಡಿ.24 ರಿಂದ 31ರ ತನಕ ಸುಮಾರು 9 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬಂಡೀಪುರ ಸಫಾರಿಗೆ ಬಂದಿದ್ದು, ಕೇವಲ 8 ದಿನಗಳಲ್ಲಿ ಸರಿ ಸುಮಾರು 63 ಲಕ್ಷಕ್ಕೂ ಹೆಚ್ಚು ಆದಾಯ ಅರಣ್ಯ ಇಲಾಖೆಗೆ ಬಂದಿದೆ. ಡಿ.25ರಂದು ಕ್ರಿಸ್‌ಮಸ್ (ಬುಧವಾರ), ಡಿ.27ರಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ನಿಧನದಿಂದ ಶುರುವಾರ ರಜೆ ಸಿಕ್ಕಿತ್ತು. ನಾಲ್ಕನೇ ಶನಿವಾರ ಹಾಗೂ ಭಾನುವಾರ ರಜೆ ಇರುವ ಕಾರಣ ಬೆಂಗಳೂರು, ಕೇರಳ ಹಾಗು ತಮಿಳುನಾಡಿನ ಪ್ರವಾಸಿಗರ ದಂಡೇ ಬಂದಿತ್ತು.

ಡಿ.25 ರ ಬುಧವಾರ ಕ್ರಿಸ್‌ ಮಸ್‌ ದಿನ ₹8.64ಲಕ್ಷ, ಡಿ.26ರ ಗುರುವಾರ ₹8.60 ಲಕ್ಷ, ಡಿ.27 ರ ಶುಕ್ರವಾರ ₹9 ಲಕ್ಷ, ಡಿ.28 ರ ಶನಿವಾರ ₹9.87 ಲಕ್ಷ, ಡಿ.29 ರ ಭಾನುವಾರ ₹10 ಲಕ್ಷ, ಡಿ.30 ₹7.86 ಸಾವಿರ ಸಫಾರಿಯಲ್ಲಿ ಆದಾಯ ಬಂದಿದೆ. ಡಿ.31 ರಂದು ಸಫಾರಿಗೆ ಮೇಲ್ಕಂಡ ದಿನಗಳಿಂದ ಆದಾಯ ಕಡಿಮೆ ಬಂದಿದೆ. ಕಾರಣ ಹೊಸ ವರ್ಷದ ಆಚರಣೆಯ ಮುನ್ನ ದಿನ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಕಂಡಿತ್ತು ಎಂದು ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್‌ ಹೇಳಿದ್ದಾರೆ. ವರ್ಷದ ಅಂತ್ಯದ 8 ದಿನಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಆದಾಯ ಸಫಾರಿಯಿಂದ ಬಂದಿದೆ. ರಜಾ ದಿನಗಳಲ್ಲಂತೂ ಹೆಚ್ಚಿನ ಪ್ರವಾಸಿಗರು ಆಗಮಿಸಿ ಸಫಾರಿ ಸವಿದಿದ್ದಾರೆ ಎಂದು ಹೇಳಿದರು.